Sunday, May 6, 2012

ತಿರುಕವಕ್ಕಿಗಳು







1.
ರಾಕೆಟ್ಟುಗಳೆ ನೀವು ನಕ್ಷತ್ರಗಳಿಗೆ ಮಾಡಿದಂಥ ಗೇಲಿ
ಹಿಂಬಾಲಿಸುವುದು ನಿಮ್ಮನ್ನೇ ಭೂಮಿಗಪ್ಪಳಿಸುತ ಮರಳಿ.

2.
ಹಗಲು ಸಂದಣಿಯ ಯಾತ್ರೆಗಳಲಿ ಸುತ್ತಾಡಿಸಿ ನೀ ನನ್ನ
ತಂದು ಬಿಟ್ಟಿರುವೆ ಈಗ ಈ ಸಂಜೆ ಏಕಾಂತದೊಳಕ್ಕೆ
ಇರುಳಿನ ನಿಶ್ಚಲ ಮೌನದಿ ಕುಳಿತು ಕಾಯುತಿರುವೆ ಅದರರ್ಥಕ್ಕೆ.

3.
ಬದುಕೆಂಬ ಕಡಲ ದಾಟುವ ಈ ಯಾನದಲಿ
ಒಂದೆ ದೋಣಿಯ ಇರುಕಿನಲ್ಲಿ ಭೇಟಿ
ತೀರ ತಲುಪುತ್ತೇವೆ ಮರಣದಲ್ಲಿ ನಾವು
ಹೊರಡುವೆವು ಹುಡುಕುತ್ತ ವಿಶ್ವ ಕೋಟಿ.

4.
ತನ್ನ ತಪ್ಪುಗಳ ಕಾಲುವೆ ಮೂಲಕ
ಹರಿವುದು ಸತ್ಯದ ಸ್ರೋತ.

5.
ಕಾಲ ಕಡಲಾಚೆಗಿನ ಸವಿಯೊಂದು ಘಂಟೆಗೆ
ನನ್ನ ಎದೆಯಿಂದು ಮನೆಮೆಚ್ಚು ರೋಗಿ.

6.
ಭೂಮಿ ಮರುನುಡಿವ ಬೆಳಗ ಕಿರಣಗಳು
ಹಕ್ಕಿಯ ಹಾಡುಗಳು.

7.
ಒಂದು ಮುತ್ತು ಕೊಡುವುದಕ್ಕೂ ಬಿಡದ ಕೊಬ್ಬು ನಿನಗೆ
ಹೇಳುತ್ತಿದೆ ಬೆಳಗ ಕಿರಣ ಬೆಣ್ಣೆ ಮುದ್ದೆಗೆ.

8.
ಹೇಗೆ ನಿನ್ನ ಪೂಜಿಸಲಿ ಯಾವ ಹಾಡ ಹಾಡಲಿ?
ನಿನ್ನಯ ಪರಿಶುಧ್ಧತೆಯ ಸರಳ ಮೌನದಲ್ಲಿ.
ಪುಟ್ಟ ಹೂವ ಪ್ರಶ್ನೆಗೆ ಹೀಗೆ ರವಿಯ ಉತ್ತರ.

9.
ಪ್ರಾಣಿ ಆದಾಗ ಮಾನವ
ಪ್ರಾಣಿಗಿಂತಲೂ ಕೆಟ್ಟವ.

10.
ಗಾಢ ಮೋಡಗಳು ಬೆಳಕ ಚುಂಬನದಿ
ಆಗಿವೆ ಸ್ವರ್ಗದ ಹೂವುಗಳು.

11.
ತನ್ನದೇ ಆಕಾಶಗಂಗೆ ಬೆಳಕಿನಲ್ಲಿ ಉರಿಯುವ
ಆಳ ಸ್ತಬ್ಧ ದೀಪದಂತೆ ಇರುಳಿನ ಈ ಮೌನ.

12.
ಬಿಸಿಲಿನಲ್ಲಿ ಹೊಳೆವ ಜೀವದ್ವೀಪದೆಲ್ಲ ದಿಕ್ಕೂ
ಮರಣದ ಚಿರ ಕಡಲಗೀತ ಹಗಲಿರುಳಿನ ಉಕ್ಕು.

13.
ಸುತ್ತು ಬೆಟ್ಟಗಳ ಪಕಳೆ ಹೊಂಬಿಸಿಲ ಹೀರಿ ಕುಡಿಯುವಂಥ
ಚಂದದೊಂದು ಹೂವಂತೆ ಇಲ್ಲವೆ ನೋಡು ಈ ಪರ್ವತ?

14.
ತಪ್ಪಾಗಿ ಓದಿರುವ ಅರ್ಥ ಮತ್ತು ತಪ್ಪಾಗಿ ಒತ್ತಿರುವ ಜಾಗ
ನಿಜವನ್ನೂ ಸುಳ್ಳಾಗಿಸಿಬಿಡುವುದು ತಪ್ಪು ಪದವಿಭಾಗ.

15.
ನಿನ್ನ ಚೆಲುವ ನೀ ಕಾಣು ಹೃದಯ
ಈ ಜಗದ ಗತಿಯ ಒಳಗೆ
ಗಾಳಿ ನೀರಿನಾ ಲಾಸ್ಯ ಪಡೆವ
ನದಿ ದೋಣಿಯ ತೆರದೊಳಗೆ.
 
16.
ಜನನವೆಂತೊ ಅಂತೆ ಜೀವನಕ್ಕೆ ಬೆಸೆದ ಮರಣ
ಕಿತ್ತ ಹೆಜ್ಜೆ ಇಟ್ಟರಷ್ಟೆ ನಡಿಗೆ ಅಲ್ಲವೇನ!

17.
ನಿನ್ನ ಪಿಸುದನಿಯ ಸರಳಾರ್ಥಗಳನು  
ಕಲಿತೆ ಬಿಸಿಲಿನಲಿ ಹೂಗಳಲಿ
ನೀನು ನುಡಿವ ಶಬ್ಧಗಳ ಅರಿವುದನು
ಕಲಿಸಿನ್ನು ನೋವು ಸಾವಿನಲಿ.

18.
ಮುಂಜಾನೆ ಕಿರಣ ಚುಂಬಿಸಲು ಬಂದಾಗ
ರಾತ್ರಿ ರಾಣಿ ತಾ ತಡವಾದಳು
ಕಂಪಿಸಿದ ಅವಳು ನಿಟ್ಟುಸಿರಿಟ್ಟಳು
ನಡುಗಿದಳು ನೆಲಕುದುರಿದಳು.

19.
ಆಲಿಸುತ್ತೇನೆ ನಾನು
ಈ ಎಲ್ಲವುಗಳ ಖೇದದ ಒಳಗಿಂದ
ಅನಂತ ಮಾತೆಯ ಗುನುಗಿನ ಚಂದ.

20. 
ನಿನ್ನ ತಡಿಗೆ ಬಂದೆ ನಾನು ಯಾರೊ ಪಥಿಕನಂತೆ
ಬದುಕಿ ಬೆಳೆದೆ ನಿನ್ನ ಮನೆಯೊಳೊಬ್ಬ ಅಥಿತಿಯಂತೆ
ಭುವಿಯೆ ನಿನ್ನನಗಲಿ ಮರಳಲಿರುವೆ ಗೆಳೆಯನಂತೆ.

21.
ಅದು ಸತ್ತವರಿಗಿರಲಿ ಕೀರ್ತಿಯ ಅಮರತ್ವ
ಬದುಕುವ ನಮಗಿರಲಿ ಪ್ರೇಮದ ಅಮರತ್ವ.

ರವೀಂದ್ರನಾಥ ಠಾಗೂರರ ಸ್ಟ್ರೇಬರ್ಡ್ಸ್ ಪದ್ಯಗಳ ಭಾವಗ್ರಹಣ



8 comments:

  1. ಚೆಂದದ ಅನುವಾದ.
    ಕವಿ ರವೀಂದ್ರರನ್ನು ಕನ್ನಡದೊಳಗೆ ತರುವ ಒಳ್ಳೆಯ ಪ್ರಯತ್ನ. ಅಭಿನಂದನೆ.

    ReplyDelete
  2. ur translations are really gud man...m addicted to ur blog...

    ReplyDelete
  3. Tagore ge hotte uri aaguvashtu chennagi anuvaada maadiddeera!!! tumba tumba dhanyavaada...

    - Samvartha 'Sahil'

    ReplyDelete
  4. ಗುರುದೇವೋ ನಮೋ ನಮಃ!

    ReplyDelete
  5. yava gurudeva?original gurudeva na? athva translate madiro gurudeva na?

    ReplyDelete
  6. ಗುರುದೇವ ಒಬ್ಬನೇ, ಅದು ಕವಿ ರವೀಂದ್ರ.

    ReplyDelete