Sunday, June 17, 2012

ಝೆಯಾಮಿ ಕೈಪಿಡಿಯಿಂದ


ಜಪಾನೀ ರಂಗಶೈಲಿ ನೋಹ್ ಗೆ ಈಗಿರುವಂತೆ ಒಂದು ನಿರ್ಧಿಷ್ಟ ರೂಪಕೊಟ್ಟವನು ಗುರು ಮೊಟೊಯಿಕೊ ಝೆಯಾಮಿ(೧೩೬೩-೧೪೪೩). ನೋಹ್ ಪದ್ದತಿಯಲ್ಲಿ ಝೆಯಾಮಿ ನಮ್ಮಲ್ಲಿಯ ರಸ ಕ್ಕೆ ಸಂವಾದಿಯಾದ ಹನ ಅರ್ಥಾತ್  ಹೂವು ಅಥವಾ ಪುಷ್ಪ ಎಂಬ ಸಿದ್ಧಾಂತವೊಂದನ್ನು ಪ್ರತಿಪಾದಿಸುತ್ತಾನೆ. ಸಫಲ ಪ್ರಯೋಗವೊಂದು ಆಪ್ತವಾಗಿ ಸ್ವೀಕೃತವಾದ ಸಾಮರಸ್ಯದಲ್ಲಿ ನಟರ ಮತ್ತು ಪ್ರೇಕ್ಷಕರ ನಡುವೆ ಸಿದ್ಧಿಸುವ  ಒಂದು ಅಲೌಕಿಕವಾದಂತಹ ವಿರಳ ಅನುಭವ ಎಂದು ಇದನ್ನು ಹೇಳಬಹುದು.



ಈ ಪುಷ್ಪವನ್ನು ಅರಿಯುವುದೇ ನೋಹ್ ಅನ್ನು ಅರಿಯುವ ಮುಖ್ಯ  ಮಾರ್ಗ.
ಮತ್ತು ಅದೇ ಆಳ ರಹಸ್ಯ.
-ಝೆಯಾಮಿ.

ಆ ಅಲೌಕಿಕ ಅನುಭವವೆನ್ನುವುದು ಸಫಲ ಪ್ರಯೋಗವೊಂದರಿಂದ ನಟರಿಗೆ ಮತ್ತು ಪ್ರೇಕ್ಷಕರಿಗೆ ಸಿದ್ಧಿಸುವ ಲೋಕೋತ್ತರ ಎಚ್ಚರದ ಮತ್ತು ದೈವಿಕ ಅನುಭೂತಿಯ ಸ್ಥಿತಿ. ಆ ಸ್ಥಿತಿಯನ್ನು ಮಿಂಚಿಸುವ ರೂಪಕ ಪುಷ್ಪ.

ಹಿಂದಿನಿಂದ ನಡೆದು ಬಂದದ್ದನ್ನು  ಮೊದಲು ಅಭ್ಯಾಸ ಮಾಡು. ಆಮೇಲೆ ಹೊಸದನ್ನು ಪ್ರಶಂಸಿಸುತ್ತಾ ಆಸ್ವಾದಿಸುವಾಗಲೂ ಪರಂಪರೆಯಿಂದ ಬಂದದ್ದನ್ನು ತಿರಸ್ಕರಿಸದ ಎಚ್ಚರವಿಟ್ಟುಕೊ. ಕೊನಗೂ ಯಾವನ ಮಾತುಕತೆಗಳಲ್ಲಿ ತುಚ್ಛವಾದದ್ದು, ಕಳಪೆಯಾದದ್ದು ಬರುವುದಿಲವೋ, ತನ್ನ ನಡತೆಯಿಂದಲೇ ಯಾರು ವಿಶೇಷವಾದ ಆಕರ್ಷಣೆಯನ್ನು ಉಂಟುಮಾಡುತ್ತಾನೋ , ತನ್ನ ಪರಂಪರೆಯೋಳಗೇ ಈ ಗುಣಗಳನ್ನು ಸಾಧಿಸಿಕೊಳ್ಳುವವನು ನಿಜವಾದ ಸಿದ್ಧ ಕಸುಬುದಾರ. ನನ್ನ ಪ್ರಕಾರ ತನ್ನ ಕಸುಬಿನ ಈ ಎತ್ತರಕ್ಕೆ ಏರಲು ಬಯಸುವವನು ಉಳಿದ ಕಲಾಪ್ರಕಾರಗಳನ್ನು ಆದಷ್ಟು ದೂರವಿಡಬೇಕು. ಅದಾಗ್ಯೂ ಅವನು ಸಾಹಿತ್ಯ, ಮತ್ತು ಕಾವ್ಯದ ಆಸ್ವಾದನೆಯಲ್ಲಿ ಮತ್ತು ಅಭ್ಯಾಸದಲ್ಲಿ ತೊಡಗಿಕೊಳ್ಳಲೇಬೇಕು. ಯಾಕೆಂದರೆ ಅವು ಯಾವುದೇ ಪ್ರದರ್ಶನ ಕಲೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ, ವಸ್ತು ವಿಷಯಗಳನ್ನು ಸ್ಪಷ್ಟಪಡಿಸುತ್ತದೆ. ಮತ್ತು ಅದು ದೀರ್ಘಾಯುಷ್ಯದ ಒಂದು ಒಳ್ಳೆಯ ಅಭ್ಯಾಸ. 


ಜೂಜು, ಮೋಹ ಮತ್ತು ಅತಿಯಾದ ಕುಡುಕತನ ಇವು ಮೂರು ನಮ್ಮ ಕಲೆಯಲ್ಲಿ ನಿಷೇಧಿಸಲ್ಪಟ್ಟವು. ಇದರಿಂದ ದೂರವುಳಿಯಬೇಕು. 

ನಿಮ್ಮ ಅಭ್ಯಾಸದಲ್ಲಿ ಏಕಾಗ್ರವಾಗಿ ತಾಳ್ಮೆಯಿಂದಿರಿ. ವಿತಂಡವಾದಕ್ಕೆ ಇಳಿಯಬೇಡಿ


ಅನುವಾದ - ಶ್ರೀಧರ ಹೆಗ್ಗೋಡು


1 comment: