ಸಾನೆಟ್ ೨೮


ಷೇಕ್ಸ್ ಪಿಯರ್ ನ ಸಾನೆಟ್ -೨೮


ಅದು ಹೇಗೆ ತಾನೆ ಮರಳಲಿ ಹೇಳು
ಉಲ್ಲಾಸದ ಕ್ಷಣಗಳಿಗೆ
ವಿಶ್ರಾಮದ ಸುಖ ಲಾಭದಿಂದ ಹೀಗೆ
ವಂಚಿತನಾಗಿರುವಾಗ?


ದಿನದ ಬಳಲಿಕೆಗನ್ನು ಇರುಳು
ಹಗುರಾಗಿಸದಿದ್ದಲ್ಲಿ
ಬದಲು ದಿನಕಳೆದು ಇರುಳು
ಮತ್ತೆ ಇರುಳು ಕಳೆದು ದಿನ
ಬಳಲಿ ಬೇಯುತ್ತಲಿರುವಾಗ?


ಮತ್ತೆ ಪರಸ್ಪರಶತ್ರು ಪಾಳಯದ
ಬದ್ಧವೈರಿಗಳು ಎರಡೂ
ಈಗ ಹೀಗೆ ಪಿತೂರಿಯಲ್ಲಿ ಕೈ ಜೋಡಿಸಿ
ಪೀಡಿಸುತ್ತಾವಲ್ಲ ನನ್ನ!


ಒಂದು ದಿನಗೂಲಿಯಲಿ
ಇನ್ನೊಂದು ಜರೆವ ದೂರಿನಲಿ
ಬೆವರಿಳಿಸಿದಷ್ಟೂ ದೂರ, ಮತ್ತೂ ಇನ್ನೂ
ದೂರ ಕಾಣುತ್ತೇನೆ ನಿನ್ನ .


ಮೋಡಗಳು ಅಡಕಿ ಮುಗಿಲಲ್ಲಿ ಮಬ್ಬಾದಾಗ ಸ್ವರ್ಗ
ಸ್ವಯಂಪ್ರಭೆ ನಿನ್ನ ಕೃಪೆ ಕೋರಲು ದಿನಕರನಿಗೆ ಹೇಳುತ್ತೇನೆ.
ಚಿಮುಕುವ ಚುಕ್ಕಿಗಳಿಗಾದರೂ ಬೆಡಗು
ಕೊಡಮಾಡಲಿಲ್ಲ ಸಮಾನ ಎಂದು
ಕರಿಮುಸುಡಿ ಇರುಳ ಗೇಲಿ ಮಾಡಿ ಹಳಿಯುತ್ತೇನೆ.


ಆದರೆ ಹಗಲು ಎಳೆದೇ ಎಳೆಯುತ್ತದೆ
ದಿನವೂ ಬೇಸರವನ್ನು
ಅದೇ ಇರುಳು ಬೆಳೆದೇ ಬೆಳೆಸುತ್ತದೆ
ಅವಿರತ ವಿರಹದುರಿಯನ್ನು.

2 comments: