ಮೂವತ್ತನಾಲ್ಕರಿಂದ ಮೂವತ್ತೈದು.
ಪ್ರದರ್ಶನ ಕೊಡುವ ನಿಮ್ಮ ಸಾಮರ್ಥ್ಯ ಈ ವಯಸ್ಸಿನಲ್ಲಿ ಅದರ ಉತ್ತುಂಗದಲ್ಲಿರುತ್ತದೆ. ಈ ಹಂತದಲ್ಲಿ ಅಭ್ಯಾಸ ಟಿಪ್ಪಣಿಗಳ ಎಲ್ಲ ಅಂಶಗಳನ್ನು ಮನವರಿಕೆ ಮಾಡಿಕೊಂಡು ಆ ಎಲ್ಲ ಅಂಗಗಳಲೂ ನೀವು ಪ್ರವೀಣರಾದರೆ ನಿಜಕ್ಕೂ ನೀವು ಕೀರ್ತಿಪಾತ್ರರಾಗುವುದು ಮತ್ತು ಪ್ರಭಾವಶಾಲಿಗಳಾದವರು ನಿಮ್ಮನ್ನು ವಿಶೇಷವಾಗಿ ಗುರುತಿಸುವುದು ಖಚಿತ. ಒಂದು ವೇಳೆ ಈ ವಯಸ್ಸಿನಲ್ಲೂ ಗಮನ ಸೆಳೆಯುವಲ್ಲಿ ನೀವು ಸೋತರೆ ನಿಮ್ಮ ಕೀರ್ತಿಯ ಬಗ್ಗೆ ಅತೃಪ್ತರಾದರೆ ಎಷ್ಟೇ ಕುಶಲಿಯಾಗಿದ್ದರೂ ನೀವು ನಿಮ್ಮ ಕಲೆಯಲ್ಲಿ ಇನ್ನೂ ಸಂಪೂರ್ಣ ಅರಳಿಲ್ಲವೆಂಬುದನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ಅರಿವು ನಿಮಗೆ ಸ್ಪಷ್ಟವಾಗದಿದ್ದರೆ ನಲವತ್ತರ ವಯಸ್ಸಿನ ನಂತರ ನಿಮ್ಮ ಪ್ರದರ್ಶನ ಗುಣಮಟ್ಟ ಇಳಿಮುಖವಾಗತೊಡಗುತ್ತದೆ. ಕಾಲಕ್ರಮೇಣ ಇದರ ಪುರಾವೆಗಳು ಸ್ಪಷ್ಟವಾಗತೊಡಗುತ್ತವೆ. ಹೀಗಾದಾಗ ಮೂವತ್ತೈದರ ವಯಸ್ಸಿನ ಆಸುಪಾಸಿನಲ್ಲಿ ನಿಮ್ಮ ಏಳಿಗೆಯಾಗಿ ನಲವತ್ತರ ನಂತರ ಗುಣಮಟ್ಟ ಇಳಿಕೆಯಾಗತೊಡಗುತ್ತದೆ. ಪ್ರಭಾವಶಾಲಿಗಳಾದವರ ಗಮನವನ್ನು ನೀವು ಸೆಳೆಯದೇ ಹೋದರೆ ಪ್ರದರ್ಶನ ಕಲೆಯ ಉನ್ನತಮಟ್ಟವನ್ನು ನೀವು ಸಾಧಿಸಿದ್ದೀರೆಂದು ಊಹಿಸಿಕೊಳ್ಳಲೂ ಬೇಡಿ.
ಇನ್ನೊಂದು ವಿಷಯದ ಬಗ್ಗೆ ನಾನು ನಿಮ್ಮನ್ನು ಎಚ್ಚರಿಸಬೇಕು. ಇಲ್ಲಿಯವರಗೆ ನೀವು ಏನೆಲ್ಲ ಕಲಿತಿದ್ದೀರಿ ಎಂಬುದನ್ನು ಗಣನೆಗೆ ತೆಗೆದುಕೊಂಡು ಭವಿಷ್ಯದಲ್ಲಿನ ನಿಮ್ಮ ಪ್ರಯಾಣದ ರೂಪು ರೇಷೆಗಳನ್ನು ಸಿದ್ಧಪಡಿಸಿಕೊಳ್ಳಲು ಇದು ಸರಿಯಾದ ಕಾಲ. ಈ ಹೊತ್ತಿಗಾಗಲೇ ನಿಮ್ಮ ಕಲೆಯಲ್ಲಿ ಪ್ರಾವೀಣ್ಯತೆಯನ್ನು ಸಿದ್ಧಿಸದಿದ್ದರೆ ಈ ವಯಸ್ಸಿನ ನಂತರ ಪ್ರಭಾವಶಾಲಿಗಳ ಗಣನೆಗೆ ಪಾತ್ರರಾಗುವುದು ನಿಮಗೆ ನಿಜಕ್ಕೂ ಕಷ್ಟಕರವಾದದ್ದು.
ಅನುವಾದ - ಶ್ರೀಧರ ಹೆಗ್ಗೋಡು.

No comments:
Post a Comment