ಮೆಲುಕು

ವ್ಯಾಸಂಡೆ ಚಿರಿ

ನನ್ನ ಕೂಡಿಯಾಟ್ಟಮ್ ಗುರುಗಳು ಹೇಳಿದ ಒಂದು ಸಣ್ಣಕತೆ.

ಮಹಾಭಾರತದ ಕತೆ ಯಾರಿಗೆ ಗೊತ್ತಿಲ್ಲ! ಅಲ್ಲಿ ಹುಡುಕಿದಷ್ಟೂ ಹೊಸ ಕತೆ, ಎಳೆ ಸಿಗುತ್ತಾ ಹೋಗುತ್ತದೆ.

ಭೀಮನಿಗೆ ಹಿಡಿಂಬಿಯಲ್ಲಿ ಹುಟ್ಟಿದ ಮಗ ಘಟೋತ್ಕಚ. ಅವನೂ ಕೂಡ ವೀರಾಧಿವೀರ. ಅವನೇ ತಂದೆಗೆ ನೀವು ಹೋಗಿ ಇಲ್ಲಿನ ಕಾರುಬಾರು ನಾನು ನಿಭಾಯಿಸುತ್ತೇನೆ ಅಂತ ಹೇಳೀ ಕಳಿಸಿದ್ದನಂತೆ. ಅವಶ್ಯಕತೆ ಇದ್ದಾಗ ಹೇಳಿಕಳಿಸಿರಿ ನಾನು ಬರುತ್ತೇನೆ ಅಂತಲೂ ಹೇಳಿದ್ದನಂತೆ.

ಮುಂದಿನದ್ದು ನಮಗೆಲ್ಲ ಗೊತ್ತೇ ಇದೆ. ಘಟೋತ್ಕಚ ಮಹಾಭಾರತ ಯಧ್ಧದಲ್ಲಿ ಕೌರವರನ ಪಡೆಯನ್ನು ಧ್ವಂಸ ಮಾಡಿದ್ದು. ಇತ್ತ ಕರ್ಣನು ಘಟೋತ್ಕಚನನ್ನು ಕೊಂದ. ನಂತರ ಅಭಿಮನ್ಯುವೂ ಕೌರವರಿಂದ ಕೊಲ್ಲಲ್ಪಟ್ಟ.

ಅಭಿಮನ್ಯುವಿನ ಸಾವಿನಿಂದ ತತ್ತರಿಸಿ ಪಾಂಡವರು ಗೋಳೋ ಎಂದು ಅಳುತ್ತಿರುವಾಗ ದೂರದಲ್ಲಿ ವ್ಯಾಸ ಮಹರ್ಷಿಗಳು ನಿಂತು ನಗುತ್ತಿದ್ದರಂತೆ. ಇದನ್ನು ನೋಡಿದ ಧರ್ಮರಾಯ ವ್ಯಾಸರಲ್ಲಿ "ಸ್ವಾಮಿ ನಮ್ಮೆಲ್ಲರಿಗಿಂತ ಶೂರನಾದ ಅಭಿಮನ್ಯು ಇಂದು ನಮ್ಮನ್ನುಬಿಟ್ಟು ಹೋದ. ಆ ದು:ಖ ಸಹಿಸಲಿಕ್ಕೇ ಆಗುತ್ತಿಲ್ಲ, ಆದರೆ ನೀವು ನಗುತ್ತಿದ್ದೀರಲ್ಲ! ಅಂತ ಕೇಳೀದನಂತೆ.

ಅದಕ್ಕೆ ವ್ಯಾಸರು ನಗುತ್ತಲೇ "ಅಭಿಮನ್ಯುವಿನ ಸಾವಿಗೆ ಅಳುತ್ತಿದ್ದೀರಿ, ಪಾಪ ಘಟೋತ್ಕಚನೂ ಹೋರಾಡಿ ಸತ್ತನಲ್ಲ ಆಗ ನಿಮಗೆ ಯಾಕೆ ದು:ಖ ಆಗಲಿಲ್ಲ? ಅವನು ರಾಕ್ಷಸಿಯ ಮಗ, ಇವನು ಮನುಷ್ಯ ಅಷ್ಟೇ ಅಲ್ಲವೇ ವ್ಯತ್ಯಾಸ. ನೀನು ಧರ್ಮರಾಯ ನೀನೂ ಕೂಡ ಇದರಿಂದ ಹೊರತಾಗಲಿಲ್ಲವಲ್ಲ ಅಂತ ನಗು ಬಂತು" ಅಂದರಂತೆ.

ಗುರುಗಳು ಅಂದ್ರು - ನಟರು ಸಾಹಿತ್ಯ , ಪುರಾಣ ಓದಬೇಕು. ಅವು ನಮ್ಮ ಭಾವನೆಗಳನ್ನು ಉದ್ದೀಪಿಸಿ ನಟನೆಗೆ ಬೇಕಾದ ಆಹಾರವನ್ನು ಒದಗಿಸುತ್ತವೆ. ಅವು ನಮ್ಮ ವಿವೇಕದ ಒಳಗಣ್ಣು.



1 comment:

  1. ಹೌದು. ತುಂಬಾ ಮನೋಜ್ಞವಾಗಿದೆ.

    ಮತ್ತೆ ಇದಕ್ಕೇ ಏನೋ ಚಿತ್ರಗಳಲ್ಲಿ ಲಾಂಗು ಮಚ್ಚುಗಳನ್ನು ಹಿಡಿದವರನ್ನೂ ಪೂಜಿಸುವುದು ..

    ReplyDelete