ಕವನ

ತಂತ್ರಉಸ್ಸಪ್ಪ ಉಸಿರುಬಿಡುತ್ತ ಶಿಂಧೆ
ಯಮ ಬೈಕನ್ನು ಕೈಚೆಲ್ಲಿ ಬಿಟ್ಟ ಹಿಂದೆ
ಮಗ್ಗುಲ ಮರಳಿನ ಕಾವು, ಬುಸುಗುಟ್ಟಿ ಬಸಿದಿದ್ದ
ಬೆವರು ಹಳ್ಳ; ಎಡಗೈ ತೋರು ಬೆರಳಿಂದ ಸರ್ರೆಂದು ಸೀಟಿ.


'ಪ್ರೀತಮಳ' ಕರೆಗಾಗಿ ಒತ್ತಿದ
ಮೊಬೈಲಿನಿಂದ ಸಂಖ್ಯೆ ಆರನ್ನು
ಕಪ್ಪೆ ಕೆರೆಯೋ, ಮಯ, ವೈಶಂಪಾಯನ
ಸರೋವರ ತಟವೋ ಅಲ್ಲಿ
ಸಂಧಿಸುವುದು ಅವರ ನಿತ್ಯ ರೋಮಾಂಚ - ಎಂಬ ಗುಂಗು.

ಧೂಳು ಕೊಡವಿ ಎದ್ದ ವೈದ್ಯ ಶಿಂಧೆ
ಬೋರಲು ಬಿದ್ದಿದ್ದ ಮೆಚ್ಚುಗೆಯ ಮೊ-ಬೈಕನ್ನು
ಉಸಿರು ತುಂಬಿ ನೋಡಿದ, ನಿಟ್ಟುಸುರಿಟ್ಟ.
ಪ್ಲಗ್ಗು ಕಾರ್ಬೊರೇಟರು ಬ್ರೇಕು ಕ್ಲಚ್ಚು ಆಯಿಲು
ಹೀಗೆ ಒಂದೊಂದೇ ಅಂಗಗಳನ್ನು ಬಿಚ್ಚಿಡುತ್ತ
ಜೀವ ಒಂದನ್ನು ಉಜ್ಜೀವಿಸುವ ಹುಮ್ಮಸ್ಸಿನಲ್ಲಿ
ಬಿಚ್ಚಾಟ ತಂತ್ರದಲ್ಲಿ ಅದ್ದಿ ಹೋದ.

ಆಟಮುಗಿದಾಗ ಬಿದ್ದ ಗುಪ್ಪೆ
ಅದರಲ್ಲಿ ಯಾವುದು ಮೊದಲು ಯಾವುದು ಕೊನೆ
ಯಾವುದು ಜೀವ. ಮನಸ್ಸು ಆತ್ಮ...
ವಿಸ್ಮಯದಲ್ಲಿ ಕೈಜೋತು ಬಿಟ್ಟ ಶಿಂಧೆ.

ಜೇಬಲ್ಲಿ ರಿಂಗುಣಿಸುತ್ತಿದ್ದ ಮೊಬೈಲಿಗೋ
ಅಲ್ಲಿಯೇ ಒಳಗಡೆ ನುಡಿಯುತ್ತಿದ್ದ ಎದೆಬಡಿತಕ್ಕೊ
ತಿಳಿಯದೆಂಬಂತೆ ಅವಾಕ್ಕಾಗಿ ಕುಸಿದು ಆಕಾಶದೆಡೆಗೆ
ಹೊಸ ಉಲ್ಕಾಪಾತದ ಹಾದಿ ನೋಡಹತ್ತಿದ.


No comments:

Post a Comment