Thursday, July 5, 2012

ನಾಟ್ಯದ ಹಾದಿ - ಮೂರನೇ ಹೆಜ್ಜೆ.



ಕೂಡಿಯಾಟ್ಟಮ್‌ನಲ್ಲಿ ಅಭಿನಯ ವಾಚಿಕ ಎಲ್ಲವೂ ನಡೆಯುವುದು ಅದರದ್ದೇ ಆದ ಸ್ಥಾನದಲ್ಲಿ(ನಿಲುವು). ನಾವು ಅಭ್ಯಾಸ ಮಾಡಿ ಅದನ್ನು ಸಾಧ್ಯ ಮಾಡಿಕೊಳ್ಳಬೇಕು. ಬೆನ್ನಿನ ಹುರಿಯನ್ನ ನೆಟ್ಟಗೆ ಇಟ್ಟುಕೊಂಡು ಪಾದಗಳನ್ನು ಸ್ವಲ್ಪವೇ ಅಗಲಿಸಿ(ಪಾದ ಪಾದಗಳ ನಡುವೆ ಎರಡು ಹಸ್ತಗಳಷ್ಟು ಅವಕಾಶ)ಇಟ್ಟು ಕುಸಿದು ನೇರವಾಗಿ ನಿಲ್ಲಬೇಕು.


ನಮಗೆ ಪ್ರತಿ ದಿನ ಬೆಳಿಗ್ಗೆ ಒಂದುಗಂಟೆ ಈ ನಿಲುವಿನ ಅಭ್ಯಾಸ. ನಂತರ ಅರ್ಧಗಂಟೆ ಮುದ್ರೆಗಳು ಕಲಿಯೋದು ಅಂತ ಗುರುಗಳು ನಿರ್ಧರಿಸಿದರು. ಈ ನಿಲುವು ಬಹಳ ಕಷ್ಟದ್ದು. ಆ ಸ್ಥಾನದಲ್ಲಿ ಬಹಳ ಹೊತ್ತು ನಿಲ್ಲಲಿಕ್ಕಾಗುವುದಿಲ್ಲ, ನಿಧಾನವಾಗಿ ಪಾದ, ಮೀನಖಂಡ, ತೊಡೆಯ ಭಾಗಗಳೆಲ್ಲಾ ನಡುಗ ತೊಡಗುತ್ತದೆ. ಅಷ್ಟಾಗುವಾಗಲೇ ನನ್ನ ಉಸಿರಾಟ ವೇಗವಾಗಿ  ಹತೋಟಿ ಮೀರಿ ಎದ್ದು ನಿಂತುಬಿಡುತ್ತಿದ್ದೆ. ಅದಕ್ಕೆ ಗುರುಗಳು ಹಾಗಾಗುತ್ತದೆ, ಹಾಗೆ ನಡುಕ ತೊಡಗಿದಾಗ ಮತ್ತಷ್ಟು ಕೆಳಗೆ ಕುಸಿದು ನೋವನ್ನು ಸಹಿಸಿಕೊಳ್ಳಬೇಕು ಸ್ವಲ್ಪ ಸಮಯ ಹಾಗೆ ನಡುಗಿ ನಂತರ ತಾನಾಗಿಯೇ ಸರಿಹೋಗತ್ತೆ ಅನ್ನುತ್ತಿದ್ದರು. ಆದರೆ ನಡುಕ ಶುರು ಆದ ಸ್ವಲ್ಪ ಹೊತ್ತಿನಲ್ಲಿಯೇ ಕಾಲೆಲ್ಲ ನನ್ನ ಹತೋಟಿ ತಪ್ಪಿ ಹೋದಂತೆನಿಸಿ ನಿಂತುಬಿಡುತ್ತಿದ್ದೆ.

 ಮದ್ಯ ನಮಗೆ ಸುಸ್ತಾಗದಿರಲೆಂದು ನಾಟಕಗಳ ಬಗ್ಗೆ ಮಾತಾಡುತ್ತಿದ್ದರು. ಹಾಗೆ ಮಾತಿಗೆ ಮಾತು ಬೆಳೆದು ಭಾವಗಳ ಬಗ್ಗೆ  ಮಾತನಾಡುತ್ತಿದ್ದಾಗ ಸ್ತಾಯಿ, ಸಂಚಾರಿಗಳ ವಿಷಯವೂ ತೂರಿ ಬಂತು.

ಸ್ಥಾಯಿಭಾವವು ಪ್ರತಿ ಪಾತ್ರಕ್ಕೂ, ನಾಟಕಕ್ಕೂ ಇದ್ದೇ ಇರುತ್ತದೆ. ಉದಾಹರಣೆಗೆ ರಾಮನ ಸ್ಥಾಯಿ ಶೃಂಗಾರ. ಆದರೆ ಸಂಚಾರಿಗಳು ಅದರೊಂದಿಗೆ ಬದಲಾಗುತ್ತಿರುತ್ತದೆ ಅಂತ್ಯದಲ್ಲಿ ಮತ್ತೆ ಶೃಂಗಾರಕ್ಕೇ ಬಂದು ನಿಲ್ಲುತ್ತದೆ. ರಾವಣನದ್ದು ವೀರ ರಸ. ಮಿಕ್ಕ ರಸಗಳು ಸಂಚಾರಿಯಗಿ ಬರುತ್ತವೆ. ರಜೋಗುಣ ಪ್ರಧಾನವಾದ್ದದ್ದೆಲ್ಲ ವೀರರಸವೇ ಆಗಿರುತ್ತದೆ.ರಾಮನ ಶೃಂಗಾರಕ್ಕೂ ರಾವಣನ ಶೃಂಗಾರಕ್ಕೂ ಬಹಳ ವ್ಯತ್ಯಾಸವಿದೆ. ರಾಮನ ಶೃಂಗಾರವು ಒಂದು ಗಾಂಬೀರ್‍ಯತೆಯನ್ನು ಮೀರುವುದಿಲ್ಲ... ರಾವಣನ ಶೃಂಗಾರ ರಸವು ರಾಮನಿಗಿಂತಲೂ ದೊಡ್ಡದು ಅಂದರೆ, ರಾಮ ಸೀತೆಯನ್ನು ನೋಡುವ ದೃಷ್ಟಿ ಗಂಭೀರತೆಯೋಡಗೂಡಿದ್ದು... ಅದರೆ ರಾವಣನದ್ದು  ರತಿಯ ಅಂತಿಮ ಘಟ್ಟವನ್ನೂ ತಲುಪುವಷ್ಟರವರೆಗೆ ಹೋಗಲು ಸಾಧ್ಯವುಳ್ಳದ್ದು. ರಾವಣನು ಸೀತೆಯನ್ನು ಕಂಡಾಗ ಮೈಮರೆತು ನಿಲ್ಲುವ ಸನ್ನಿವೇಶ ಇದೆ. ಆದರೆ ರಾಮ ಹಾಗಲ್ಲ...

ಎಲ್ಲಿಂದ ಆರಂಭಿಸಿದ್ದೇವೋ ಅಲ್ಲಿಗೇ ಬಂದು ಮುಟ್ಟಬೇಕು. ಸಾದರಣವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು (ಸ್ವಭಾವವಿದೆ)ಸ್ಥಾಯಿಭಾವವಿದೆ. ಆದರೆ ಎಲ್ಲ ಬಾವಗಳೂ ನಮ್ಮ ಅನುಭವಕ್ಕೆ ಬರುತ್ತವೆ...(ದು:ಖ,ಸಂತೋಷ,ಸಿಟ್ಟು...) ಕೊನೆಯಲ್ಲಿ ಮತ್ತೆ ನಮ್ಮ ಮೂಲ ಸ್ವಭಾವಕ್ಕೇ ಬಂದು ತಲುಪುತ್ತೇವೆ ಹಾಗೆ ಪಾತ್ರದಲ್ಲೂ ಕೂಡ...

ಪ್ರತಿ ರಸಕ್ಕು ಸ್ತಾಯಿಭಾವಕ್ಕೆ ಬರಲು ವಿಭಾವಗಳಿವೆ. ಶೃಂಗಾರಕ್ಕೆ ಸಂತೋಷ ಸ್ತಾಯಿಭಾವ...ಆದರೆ ಸಂತೋಷ  ಒಂದು ಹೂವನ್ನು ನೋಡುವುದಕ್ಕೂ ಸ್ತ್ರೀಯನ್ನು ನೋಡುವುದಕ್ಕೂ ಬಹಳ ವೆತ್ಯಾಸ ಇದೆ. ಇಲ್ಲಿ ರತಿ ಮುಖ್ಯವಾಗುತ್ತದೆ. ಪ್ರತಿ ಭಾವಕ್ಕೂ ವಿಭಾವಗಳಿವೆ... ವಿಭಾವ ಬದಲಾದಂತೆಲ್ಲಾ ಭಾವಗಳೂ ಬದಲಾಗುತ್ತವೆ. ಶೃಂಗಾರವೂ ಬದಲಾಗುತ್ತದೆ...

ಪ್ರತೀ ಪ್ರರ್ದಶನದ ನಂತರ ನಾವು ಮತ್ತೊಮ್ಮೆ ಆ ಪ್ರದರ್ಶನದಲ್ಲಿ ಏನೇನು ಮಾಡಿದ್ದೇವೆ ಅಂತ ನೆನಪು ಮಾಡಿಕೊಳ್ಳೋದು ಬಹಳ ಮುಖ್ಯ. ಈಗಿನ ದಿನಗಳಲ್ಲಿ ಇದು ಬಹಳ ಕಡಿಮೆ. ಒಬ್ಬ ೩ ವರ್ಷ ಕೂಡಿಯಾಟ್ಟಮ್ ಕಲಿತು ಈಗ ತಾನೆ ಪ್ರದರ್ಶನ ನೀಡಲು ತೊಡಗಿದಾತ ಮುದ್ರೆಗಳ ಮುಕಾಂತರ ಮಾತ್ರ ಪ್ರೇಕ್ಷಕರನ್ನು ತಲುಪ ಬಲ್ಲ. ನಿಜವಾದ ಅಭಿನಯ ನಟನಲ್ಲಿ ಶುರುವಾಗುವುದು ಈ ಘಟ್ಟದಿಂದಲೇ... ಮುದ್ರೆಗಳು ವಾಚಿಕದಂತೆ ಅಂದರೆ ಸಂಕೇತಗಳ ಮೂಲಕ ನಾವು ಹೇಳಬೇಕಾದದ್ದನ್ನು ಹೇಳುತ್ತೇವೆ, ಅದು ತಲುಪುತ್ತದೆ. ಆದರೆ ಅದರೊಡನೆ ಭಾವ ಸೇರಿದಾಗ ಅದು ಪ್ರೇಕ್ಷಕರಿಗೆ ಅನುಭವವಾಗುತ್ತದೆ. ನಿಜವಾಗಿ ಆಗಬೇಕಾದದ್ದು ಅನುಭವ ಅಲ್ಲವೆ...ಅನುಭವ ನಟನಲ್ಲಿ ಉಂಟಾಗಬೇಕಾದರೆ ಮೊದಲು ಮುದ್ರೆಗಳು, ಅದರೊಡಗಿನ ಕಣ್ಣಿನ ಚಲನೆ, ಉಸಿರಾಟ, ದೇಹ ಎಲ್ಲವೂ ಸರಿಯಾಗಬೇಕು. ನಂತರ ಮಾತ್ರ ನಟನಿಗೆ ಅಭಿನಯದ ಬಗ್ಗೆ ಗಮನ ನೀಡಲು ಸಾದ್ಯ. ಪ್ರತಿಯೊಂದು ಚಲನೆಯೂ ಅಭ್ಯಾಸ ಮಾಡಿ ಮಾಡಿ  ಅದು ಕರಗತವಾದ ಮೇಲೆ ಮಾತ್ರ ನಟ ತಾನು ಪಾತ್ರದಲ್ಲಿ ತಲ್ಲೀನನಾಗಲು ಸಾಧ್ಯ...

ನಟ ಮುದ್ರೆಗಳನ್ನು ಚಾರಿಭಾಗಗಳನ್ನು ಎಲ್ಲವನ್ನೂ ಕಲಿಯತ್ತಾನೆ, ಪ್ರತಿಯೊಂದರಲ್ಲಿಯೂ ಪರಿಣತನಾಗುತ್ತಾನೆ ಇದಕ್ಕೆ ಮೂರು ನಾಲ್ಕು ವರ್ಷಗಳ ಸತತ ಪರಿಶ್ರಮ ಅಗತ್ಯ. ಅಲ್ಲಿಗೇ ಮುಗಿಯಲ್ಲಿಲ್ಲ ನಂತರ ಅವನು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ನೋಡಿ, ಗಮನಿಸಿ ಅದನ್ನು ತನ್ನ ಅನುಭವವಾಗಿಸಿಕೊಂಡು ನಂತರ ತಾನು ಮಾಡುವ ಪಾತ್ರದೊಡನೆ ಅದನ್ನು ಅಭಿನಯಿಸ ತೊಡಗುತ್ತಾನೆ... ಕೂಡಿಯಾಟ್ಟಮ್ ನ ದೊಡ್ಡ ಶಕ್ತಿಯೇ ಇದು. ಇಲ್ಲಿ ಪ್ರತೀ ಭಾವಕ್ಕೆ ಬೇಕಾದ ದೇಹಸ್ತಿತಿಯನ್ನು ಅದು ಹುಡುಕಿಕೊಂಡಿದೆ. ನಾವು ಮಾಡಬೇಕಾದಿಷ್ಟೆ ಅದನ್ನ ಅಭ್ಯಾಸ ಮಾಡಿ ನಮ್ಮದಾಗಿಸಿಕೊಳ್ಳಬೇಕು. ಮತ್ತು ಬೇಕೆಂದಾಗ ಆ ಸ್ತಿತಿಯನ್ನು ತಲುಪಬಲ್ಲ ಶಕ್ತಿಯನ್ನು ಸಾಧಿಸಿಕೊಳ್ಳಬೇಕು. ಅದಕ್ಕೆ ದೀರ್ಘವಾದ ಕಠಿಣ ಅಭ್ಯಾಸ ಬೇಕು...

ಕೂಡಿಯಾಟ್ಟಮ್ ನಲ್ಲಿ ಕಥೆಯನ್ನು ಹೇಗೆ ಹೇಳುತ್ತಾನೆ ಅದು ಮುಖ್ಯವಾಗುತ್ತದೆ. ಆಗ ಪ್ರತೀ ಪಾತ್ರವೂ ಹೊಸದಾಗಿ ಚಿತ್ರಿಸಲ್ಪಡುತ್ತದೆ. ರಾವಣನಂತಹ ಪಾತ್ರ ಬೇರೆ ಬೇರೆ ನಟರ ಕೈಯ್ಯಲ್ಲಿ ಬೇರೆಬೇರೆ ರೀತಿಯಾಗಿ ಕಟ್ಟಲ್ಪಡುತ್ತದೆ. ಕಥೆ  ಒಂದೇ ಆದರು ಅದನ್ನು  ನಟ  ನೋಡುವ,  ಗ್ರಹಿಸುವ ಕ್ರಮದಿಂದಾಗಿ  ಪ್ರತೀಸಲವೂ  ಹೊಸದಾಗಿ, ಹೊಸ ಹೊಳಹೊಂದನ್ನು  ಕಾಣಿಸುತ್ತಿರುತ್ತದೆ...

ಕೂಡಿಯಾಟ್ಟಮ್ ನ ಮುಖ್ಯ ಗುರಿಯೇ ನೋಡುಗರಿಗೆ ಆಸ್ವಾದನೆ ಕೊಡುವುದು. ಇಡೀ ರಂಗದಲ್ಲಿ ಒಬ್ಬನೇ ನಟ ಇದ್ದು ಬೇರೇನೂ ಇಲ್ಲದಿದ್ದಾಗ ನೋಡುಗರನ್ನೆಲ್ಲಾ ತನ್ನೆಡೆಗೆ ಸೆಳೆದುಕೊಂಡು ನಟಿಸಬೇಕಾದರೆ ನಟನಿಗೆ ಅಸಾಧ್ಯ ಶಕ್ತಿ ಬೇಕಾಗುತ್ತದೆ. ಒಂದುಕ್ಷಣವೂ ವಿಚಲಿತನಾಗದೆ ಅಭಿನಯಿಸ ಬೇಕಾದರೆ ಅಷ್ಟು ಏಕಾಗ್ರತೆ ಬೇಕಾದರೆ ಅವನ ದೇಹ, ಮನಸ್ಸು ಎರಡೂ  ಚುರುಕಾಗಿರಬೇಕು. ಇದನ್ನುದಕ್ಕಿಸಿಕೊಳ್ಳಲು ಅವನ ತಯಾರಿ ಎಷ್ಟಿರಬೇಕು?

ಹಾಗಾಗಿ ಕಲಿಕೆಯ ಮುಖ್ಯ ಸಮಯವೆಲ್ಲ ನಟನ ತಯಾರಿಗೇನೆ. ನೇತ್ರಾಭ್ಯಾಸ, ಚಾರೀಭಾಗಗಳ ಅಭ್ಯಾಸ, ನಿಲುವಿನ ಅಭ್ಯಾಸ ಇವು ಸತತವಾಗ ನಡೆಯುತ್ತಲೇ ಇರಬೇಕು. ಅಭ್ಯಾಸ ಬಹಳ ಮುಖ್ಯ.  ನಟ ರಂಗದ ಮೇಲೆ  ನಿಂತು ಪಾತ್ರವಾದ  ಮೇಲೆ ಅವನು ಕಾಲದ ಹೊರಗೆ ಬಂದು ಬಿಡುತ್ತಾನೆ. ಆಗ ಅವನ ದೇಹ  ಅವನಿಗೆ ಇಂಬುಕೊಡದಿದ್ದಲ್ಲಿ ನಟ ಸೋಲುತ್ತಾನೆ. ಹಾಗಾಗಿ ನಟನ ತಯಾರಿ ಬಹಳ ಮುಖ್ಯ.



ಗುರುಗಳು ನಮಗೆ ಗೋಡೆಗೆ ಒರಗಿ ನಿಲ್ಲಲು ಹೇಳುತ್ತಿದ್ದರು. ಗೋಡೆಗೆ ತಾಗಿ ನಿಂತು ಆ ನಿಲುವಿನಲ್ಲಿ ನಿಲ್ಲಬೇಕು. ಆಗ ಗುರುಗಳು ನನ್ನ ಎರಡೂ ಮಂಡಿಯನ್ನು ಗೋಡೆಗೆ ಸಮಾನಾಂತರ ತಾಗುವಂತೆ ಒತ್ತಿ ಹಿಡಿಯುತ್ತಿದ್ದರು. ಮತ್ತೆ ನಡುಕ ಶುರುವಾದರೂ ಅವರು ಬಿಡುತ್ತಿರಲಿಲ್ಲ. ನಡುಗಿ ನಡುಗಿ ನಡುಕ ಕಡಿಮೆಯಾಗುವ ಹಂತದಲ್ಲಿ ನಾನೇ ಬಲವಂತವಾಗಿ ಅವರ ಕೈಯಿಂದ ಬಿಡಿಸಿಕೊಳ್ಳುತಿದ್ದೆ.  ನಂತರ ಪ್ರತೀ ದಿನದ ಈ ಅಭ್ಯಾಸ ದಿನ ಬಿಟ್ಟು ದಿನಕ್ಕೆ ಅಂತ ನಿಗಧಿಯಾಯಿತು. ಒಂದು ದಿನ ನಿಲುವು, ಮತ್ತೊಂದು ದಿನ ಕಣ್ಣಿನ ಅಭ್ಯಾಸ. ನಿಲುವಿನಲ್ಲಿ ನಿಂತಾಗ ನಿಮ್ಮ ಗಮನ ಕಾಲು, ನೋವು, ನಡುಕದ ಮೇಲೆ ಇರುತ್ತದೆ ಆಗ ಮತ್ತಷ್ಟು ಬೇಗ ನೀವು ಸುಸ್ತಾಗ್ತೀರಿ ಅಂತ ಹೇಳಿ, ಶ್ಲೋಕ ಕಲಿಯುವ, ಆಗ ಗಮನ ಶ್ಲೋಕದ ಮೇಲೆ ಬರುತ್ತದೆ ಮತ್ತೆ ಉಸಿರಾಟವೂ ಸರಿಯಾಗುತ್ತದೆ ಅಂತ ಶ್ಲೋಕ ಹೇಳಿಕೊಟ್ಟರು. ನಿಜವಾಗಿಯೂ ಶ್ಲೋಕ  ಹೇಳಿ ಮುಗಿಸುವವರೆಗೆ ನಮಗೆ ನಿಂತದ್ದು ಕಷ್ಟವೆನಿಸುತ್ತಿರಲಿಲ್ಲ. ಆದರೆ ಶ್ಲೋಕ ಹೇಳಿ ಮುಗಿಸಿ ಮತ್ತೆ ಹಾಗೆ ನಿಂತಾಗ ನಡುಕ ಜೋರಾಗಿ ದಕ್ಷಿಣಕನ್ನಡದ ನಾಗಪಾತ್ರಿಯಂತೆ ದರ್ಶನೆ ಬಂದು ನಿಂತುಬಿಡುತ್ತಿದ್ದೆ.




No comments:

Post a Comment