Saturday, December 29, 2012

ಓ ಅನಾಮಿಕಾ...


ಓ ಅನಾಮಿಕಾ, ನೀನು…

ಹೋರಾಡುತ್ತಿದ್ದಿ ಎಂಬ ಖಾತ್ರಿಯಲ್ಲಿ
ಶಬ್ದ – ಮಾತುಗಳನ್ನೆಲ್ಲ ಪ್ರಾರ್ಥನೆಯಲ್ಲಿ ಮೀಸಲಿಟ್ಟೆ
ಈಗ ನೀನು ಬಿಟ್ಟುಹೋಗಿರುವಾಗ
ಹೆಕ್ಕಲು ತಕ್ಕ ಶಬ್ದವಿಲ್ಲ,
ಉಕ್ಕುವ ಬಿಕ್ಕುಗಳಿಗೆ ಉಸಿರಿಲ್ಲ…

ಹೇಗೆ ಹೇಳಲಿ ಹೇಳು
ಹಿಂಡಿದ ಎದೆ ನಿನ್ನದಲ್ಲ,
ಅದು ನನ್ನದು
ಹರಿದ ಕರುಳು ನಿನ್ನದಲ್ಲ,
ಅದು ನನ್ನದು
ನಗ್ನವಾದದ್ದು ಏನಿದ್ದರೂ ಅದು
ಮೂರಾಬಟ್ಟೆ ನನ್ನತನ.

ಓ… ಅಯ್ಯಾ, ತಂದೆ!
ಅದೂ ಇದೆಲ್ಲಿಗೆ ತಂದೆ?
ಬಂಜರಿನ ಮರೀಚಿಕೆ ವಿಕೃತಿಗಳನ್ನೆಲ್ಲ
ನೂರ್ಮಡಿ ಕನ್ನಡಿಸುತ್ತಿದೆ.

ಕೊಂಕಲಾಗುತ್ತಿಲ್ಲ ಕೂದಲೂ ನನಗೆ
ಆದರೂ
ಕೆರಳದಿರುವ ಕೋಶಗಳಿಲ್ಲ.

ಜ್ವಾಲಾಮುಖಿ ಬಿರಿದಾಗಿದೆ
ಎಲ್ಲರೊಳಗಿನ ಅರಿವಿನ ಕುದಿ
ಆರದೆ ಸರಿದಾರಿಯಲ್ಲಿ ನಡೆಸಲಿ
ಎಂಬುದಷ್ಟೇ ನಾ ನಿನಗಿಡುವ ಹಣತೆ.

ಓ ಅನಾಮಿಕಾ, ನೀನು…

ಹೋರಾಡುತ್ತಿದ್ದಿ ಎಂಬ ಖಾತ್ರಿಯಲ್ಲಿ
ಶಬ್ದ – ಮಾತುಗಳನ್ನೆಲ್ಲ ಪ್ರಾರ್ಥನೆಯಲ್ಲಿ ಮೀಸಲಿಟ್ಟೆ
ಈಗ ನೀನು ಬಿಟ್ಟುಹೋಗಿರುವಾಗ
ಹೆಕ್ಕಲು ತಕ್ಕ ಶಬ್ದವಿಲ್ಲ,
ಉಕ್ಕುವ ಬಿಕ್ಕುಗಳಿಗೆ ಉಸಿರಿಲ್ಲ…

ಓ ಅನಾಮಿಕಾ, ನೀನು…

ಶ್ರೀಧರ ಹೆಗ್ಗೋಡು.

1 comment: