ಪತ್ರ 3
ಸ್ಟ್ರಾಸ್ ಬರ್ಗ್, ಜೂನ್ 1833
ಮನೆಯವರಿಗೆ...
...(...)... ನಾನು ಯಾವತ್ತಿಗೂ ನನ್ನ ಧ್ಯೇಯಗಳಿಗನುಗುಣವಾಗಿ ನಡೆಯುವವನು. ಸಾವಕಾಶವಾಗಿ, ಒಂದು ಸಮುದಾಯದ ಅದಮ್ಯ ಆಕಾಂಕ್ಷೆಗಳು ಮಾತ್ರ ಬದಲಾವಣೆಯನ್ನ ತರಬಲ್ಲವು, ಅದು ಬಿಟ್ಟು ಯಾವುದೇ ವ್ಯೆಕ್ತಿಗತ ಕ್ರಿಯೆಯಾಗಲೀ ಬೊಬ್ಬೆಗಳಾಗಲೀ ಅದು ಮೂರ್ಖತನ ಮತ್ತು ಕಾಲವನ್ನು ಕೊಲ್ಲುವ ಬರೀ ಜೊಳ್ಳು ಕೆಲಸ ಎಂಬುದು ನನಗೆ ಅರಿವಾಗುತ್ತಿದೆ.ಅವನು ಬರೆಯುತ್ತಾನೆ ಆದರೆ ಅದನ್ನು ಯಾರೂ ಓದುವವರಿಲ್ಲ; ಬೊಬ್ಬಿಡುತ್ತಾನೆ ಯಾರೂ ಕೇಳಿಸಿಕೊಳ್ಳುವುದಿಲ್ಲ; ಅವನು ಧುಮುಕುತ್ತಾನೆ ಯಾರೂ ಕೈಜೋಡಿಸುವವರಿಲ್ಲ. ಹಾಗಂತ ಇಲ್ಲಿನ ಈ ಪೊಳ್ಳು ರಾಜ್ರಕಾರಣದಲ್ಲಿ ಅಥವಾ ಕ್ರಾಂತಿಕಾರಿ ಢೋಂಗಿಗಳಲ್ಲಿ ನಾನು ಸೇರಿಕೊಳ್ಳುವ ಇರಾದೆಯುಳ್ಳವನು ಎನ್ನುವ ಭ್ರಮೆಯೂ ನಿಮಗೆ ಬೇಡ.
ಪತ್ರ 11
ಗಜ್ ಕೋವ್ ಗೆ
ಸ್ತ್ರಾಸ್ ಬರ್ಗ್, 1836
(...) ಅಂದಹಾಗೆ , ಸಂಪೂರ್ಣ ನಿಯತ್ತಿನಿಂದ ಹೇಳೋದಾದರೆ, ಸಧ್ಯದ ಆಗುಹೋಗುಗಳ ಬಗ್ಗೆ ನೀನು ಮತ್ತು ನಿನ್ನ ಗೆಳೆಯರು ಬುಧ್ಧಿವಂತಿಕೆಯಿಂದ ಪ್ರತಿಕ್ರಿಯಿಸುತ್ತಿಲ್ಲ ಎಂದು ಅನಿಸುತ್ತದೆ ನನಗೆ. ಚಿಂತನೆಗಳ ಮೂಲಕ ಹಾಗೇ ವಿದ್ಯಾವಂತ ವರ್ಗದಿಂದ ಸಮಾಜವನ್ನು ಬದಲಾಯಿಸುತ್ತೀರಾ? ಅದು ಅಸಂಭವ. ನಮ್ಮ ಕಾಲ ಸಂಪೂರ್ಣ ಭೌತಿಕವಾಗಿಬಿಟ್ಟಿದೆ. ನೀವು ತುಂಬ ನೇರವಾದ ರಾಜಕೀಯ ಕ್ರಿಯೆಗಳನ್ನು ಕೈಗೊಂಡರೆ ಬೇಗನೆ ಬದಲಾವಣೆ ಆಗುತ್ತದೆ ಅಂದುಕೊಂಡರೆ ತನ್ನನ್ನ ತಾನೇ ಮುಚ್ಚಿಕೊಳ್ಳುವ ಹಂತಕ್ಕೆ ಬಂದು ತಲುಪುತ್ತೀರಿ. ವಿದ್ಯಾವಂತ ಮತ್ತು ಅವಿದ್ಯಾವಂತ ವರ್ಗಗಳ ನಡುವಿನ ಹರಕು ಕಿರುಚಾಟ ಬಿಟ್ಟರೆ ನಿಮಗೆ ಮತ್ತೇನೂ ಕೇಳಿಸುವುದಿಲ್ಲ.
ಈ ವಿದ್ಯಾವಂತ ಸಣ್ಣವರ್ಗ ಎಷ್ಟೇ ರಿಯಾಯಿತಿಗಳನ್ನು ಆಳುವವರಿಂದ ಬೇಡಿ ಪಡೆದರೂ ಅವಿದ್ಯಾವಂತ ಜನಸಮುದಾಯದೊಂದಿಗಿನ ತನ್ನ ಅಸಮರ್ಪಕ ಸಂಬಂಧವನ್ನು ಸರಿಮಾಡಿಕೊಳ್ಳುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಮತ್ತೆ ಆ ಜನಸಮುದಾಯ? ಅದು ಬದುಕುವುದು ಎರಡೇ ಸ್ತರಗಳಲ್ಲಿ . ಒಂದು ಭೌತಿಕ ಹಿಂಸೆಗಳಲ್ಲಿ - ಇನ್ನೊಂದು ಧಾರ್ಮಿಕ ಭ್ರಮೆಗಳಲ್ಲಿ. ಈ ಎರಡು ಸ್ತರಗಳಲ್ಲಿ ಹೇಗೆ ಹಿಡಿತ ಸಾಧಿಸಿಕೊಳ್ಳಬೇಕು ಅನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿರುವ ಪಕ್ಷ ಗೆದ್ದು ಮುಂದುವರಿಯುತ್ತದೆ, ನಮ್ಮ ಕಾಲಕ್ಕೀಗ ಬೇಕಾಗಿರುವುದು ಶಸ್ತ್ರ, ಅನ್ನ- ಮತ್ತೆ ಶಿಲುಬೆ ಅಥವಾ ಆ ಥರದ ಇನ್ನೊಂದು.
ಈ ಇಂಥಾ ಕಾಲದಲ್ಲಿ ನಮ್ಮಂಥ ಪ್ರತ್ಯೇಕಿಗಳ ಬದುಕಿಗೇನು ಅರ್ಥ? ಅವರ ಇಡೀ ಜೀವಮಾನದಲ್ಲಿ ಅವರು, ತಮ್ಮನ್ನ ತಾವು ಸುತ್ತಲಿರುವ ಈ ಭಯಂಕರ ಜಡತ್ವದಿಂದ ತಪ್ಪಿಸಿಕೊಳ್ಳಲು ಹೆಣಗುತ್ತಾರೆ. ಕೊನೆಗೆ ಅವರು ಸಾಯಬಹುದು, ಆದರೆ ಅದೂ ಅವರು ಅನುಭವಿಸಬಹುದಾದ ಕೊನೆಯ ಏಕಮಾತ್ರ ಒಡವೆ. (...)
ಜಾರ್ಜ್ ಬುಷ್ನರ್ ಬರೆದಿರುವ ಪತ್ರಗಳು
ಅನುವಾದ - ಶ್ರೀಧರ ಹೆಗ್ಗೋಡು
ಅನುವಾದ - ಶ್ರೀಧರ ಹೆಗ್ಗೋಡು

i have read it earlier somewhere....i dont remember.....
ReplyDelete