Saturday, June 9, 2012

ನಾಟ್ಯದ ಹಾದಿ - ಎರಡನೇ ಹೆಜ್ಜೆ



ಚಾಪೆಯ ಮೇಲೆ ನಾವು ಮೂವರೂ  ಕುಳಿತು  ಅವರ ಮಾತಿಗೆ ಕಾಯುತ್ತಿದ್ದೆವು. ಗುರುಗಳು ಮೊದಲು ಕೂಡಿಯಾಟ್ಟಮ್ ಬಗ್ಗೆ ಹೇಳತೊಡಗಿದರು.

ಕೂಡಿಯಾಟ್ಟಮ್ ಎಂದರೆ ಕೂಡಿ ಆಡುವುದು ಎಂದು. ಇದು ಮೊದಲು ದೇವಸ್ತಾನದ  ಒಳಗೇ ಇತ್ತು. ಚಾಕ್ಯಾರ್ ಇದನ್ನು ಆಡುತ್ತಿದ್ದವರು. ಇದನ್ನು ಕೂತ್ತು ಅಂತಲೂ ಕರೆಯುತ್ತಾರೆ. (ಒಬ್ಬ ನಟ ಮಾತ್ರ ಅಭಿನಯಿಸುವ ಕ್ರಮ.) ಚಾಕ್ಯಾರ್ ಕೂತ್ತು ಅಂದರೆ ಒಬ್ಬ ನಟ ಮಾತ್ರ ಅಭಿನಯಿಸುವುದು. ಅದೇ ನಂಗ್ಯಾರ್ ಕೂತ್ತು ಅಂದಾಗ ಅಲ್ಲಿ ಒಬ್ಬ ನಟಿ ಮಾತ್ರ ಅಭಿನಯಿಸುವ ಕ್ರಮ. ಭರತನ ನಾಟ್ಯಶಾಸ್ತ್ರದಲ್ಲಿ ಹೇಳಿರುವ ಮುದ್ರೆಗಳು, ರಂಗಮಂಟಪ, ಸಂಗೀತದವರ ಸ್ಥಾನ, ರಂಗದ ಬಲಬದಿಯಿಂದ ಪ್ರವೇಶ ಎಡಗಡೆಯಿಂದ ನಿರ್ಗಮನ, ಎಲ್ಲ ಇಲ್ಲೂ ಹಾಗೇ ಉಳಿದಿವೆ. ರಂಗದ ಎಡಬದಿಯಲ್ಲಿ ನಂಗ್ಯಾರಮ್ಮ ಕುಳಿತು ತಾಳ ನುಡಿಸುತ್ತಾರೆ. ಅಲ್ಲದೆ ಇಡೀ ಕಥೆಯ ಶ್ಲೋಕವನ್ನೂ ಹೇಳುತ್ತಾರೆ.

ರಂಗದ ಎದುರಿಗೆ ಸುಮಾರು ನಾಲಕ್ಕು ಅಡಿ ಎತ್ತರದ ದೀಪ ಇರುತ್ತದೆ. ಅದರಲ್ಲಿ ಮೂರು ಬೆಳಕಿರುತ್ತದೆ. ಎರಡು ರಂಗದತ್ತ ಮುಖ ಮಾಡಿದ್ರೆ ಉಳಿದದ್ದೊಂದು ಪ್ರೇಕ್ಷಕನತ್ತ ಮುಖಮಾಡಿರುತ್ತದೆ. ಕಥಕ್ಕಳಿಯಲ್ಲಿ ಎರಡೇ ಬೆಳಕು. ಒಂದು ರಂಗದತ್ತ ಆದರೆ ಮತ್ತೊಂದು ಪ್ರೇಕ್ಷಕರತ್ತ.

ಕಲಿಯುವಾಗ ಯಾವಾಗಲೂ ವಿದ್ಯಾರ್ಥಿಗಳು ಬೆಳಿಗ್ಗೆ ಪೂರ್ವಕ್ಕೆ ಮುಖಮಾಡಿ ಕೂರಬೇಕು. ಸಂಜೆ ಆದರೆ ಪಶ್ಚಿಮಕ್ಕೆ ಮುಖಮಾಡಿ ಕಲಿಯಬೇಕು.

ಮೊದಲು ಕೈಯ್ಯ ಸ್ಥಾನ ತೊರಿಸ್ತೇನೆ, " ಕೈ ಎದೆಯ ನೇರಕ್ಕೆ ಎದೆಯಿಂದ ಹಸ್ತದಷ್ಟು ದೂರ ಮೊಣಕೈ ಎತ್ತಿ ಬುಜದ ನೇರಕ್ಕೆ. ಮುಷ್ಟಿ  ಒಳಮುಖವಾಗಿ ಬಿಗಿದು ಮಣಿಕಟ್ಟನ್ನು ಮಾತ್ರ ನಿಧಾನವಾಗಿ ತಿರುಗಿಸಿ. ಹಸ್ತವು ನಮಗೆ ಬೇಕಾದ ಹಾಗೆ ಬಳಸಲು ಬರಬೇಕು ಆಗ ಮಾತ್ರ ಮುದ್ರೆಗಳನ್ನು ಚೆನ್ನಾಗಿ ಕಾಣಿಸಲು ಸಾಧ್ಯ. ಅದಕ್ಕೆ ಈ ವ್ಯಾಯಾಮ."

ಪ್ರಶ್ನೆ: ನಾನು ತುಂಬಾ ಕೂಡಿಯಾಟ್ಟಮ್ ನೋಡಿದ್ದೇನೆ, ಸ್ಕೂಲ್ ಆಫ್ ಡ್ರಾಮಾದಲ್ಲಿ ಅದರ ಬಗ್ಗೆ ಮತ್ತು ಕಥಕ್ಕಳಿಯ ಬಗ್ಗೆ ಸ್ವಲ್ಪ ಕಲಿತಿದ್ದೇನೆ, ಅದರೂ ಕೂಡ ಈಗಲೂ ನನಗೆ ಕೆಲವು ಮುದ್ರೆಗಳು ಏನು ಹೇಳ್ತಾವೆ ಅಂತ ಗೊತ್ತಾಗ್ತಿಲ್ಲ...

ಮುದ್ರೆಗಳು ಯಾರಿಗೆ? ನಟನಿಗೋ? ಪ್ರೇಕ್ಷಕನಿಗೋ ಹೇಳಿ ನೋಡೋಣ? (ಎರಡೂ ಕೈಗಳ ಬೆರಳುಗಳನ್ನು ಸಡಿಲಿಸಿ ಅಗಲಿಸಿ ಗಲಗಲನೆ ನಡುಗಿಸುತ್ತಾ ಕಣ್ಣುಗಳನ್ನು ಹಿರಿದು ಕಿರಿದಾಗಿಸುತ್ತಾ ಕೆಂಪೇರಿಸಿ) ಹೇಳಿ ಈಗ ನಾನು ಏನು ಮಾಡಿದೆ?  ಬೆಂಕಿ ಅಂತ ಅಲ್ಲದಿದ್ರೂ? ಬಿಸಿ ಇರುವ, ಉರಿಯುತ್ತಿರುವ, ವೇಗವಾದ ಚಲನೆಯುಳ್ಳ ಏನೋ ಅಂತನಾದ್ರೂ ಅನ್ನಿಸಿರಬೇಕಲ್ಲಾ? ಇದು ಯಾವ ಮುದ್ರೆ? ಇದನ್ನ ದ್ಯೋತಕ ಮುದ್ರೆಗಳು ಅಂತೇವೆ ನಾವು. ಸೂಚನಾ ಮುದ್ರೆಗಳು. ಹೂವು, ನದಿ... ಹೀಗೆ. ಅದು ಎಲ್ಲರಿಗೂ ಸುಲಭವಾಗಿ ಅರ್ಥವಾಗೋ ಅಂಥವು. ಈಗ ನೋಡಿ ಹೇಳಿ (ಎಡಗೈ ಮುಷ್ಟಿ ಬಿಗಿದು ಬಲಗೈಯ್ಯ ಕೆಲ ಬೆರಳುಗಳನ್ನು ಮಡಚಿ ಹಿಡಿದು ನಿಂತರು.) ಏನಿದು? ನಾವು ಸುಮ್ಮನಿದ್ದೆವು. ಆಮೇಲೆ ಅವರು ಮತ್ತೆ ಅದೇ ಮುದ್ರೆಯನ್ನು ನಿಧಾನವಾಗಿ ಹಿಡಿದು ಕಣ್ಣರಳಿಸಿ ವೀರಾವೇಷದಲ್ಲಿ ನಿಂತರು. ನಾವು ರಾಮ? ಎಂದೆವು. ಹೌದು ಈಗ ಹೇಗೆ ಗೊತ್ತಾಯಿತು? ಆಗ ಮಾಡಿದ ಮುದ್ರೆಯೇ ಈಗಲೂ ಮಾಡಿದ್ದು ನಾನು. ಆಗ ಅಲ್ಲಿ ಭಾನೆ ಇರಲ್ಲಿಲ ಅಷ್ಟೆ. ಈಗ ಭಾವದ ಜೊತೆ ಮಾಡಿದಾಗ ನಿಮಗೆ ರಾಮ ಅಂತ ಅನಿಸಿತು. ಮುದ್ರೆ ಯಾವುದು ಅನ್ನೋದು ಮುಖ್ಯವಾಯಿತ ಇಲ್ಲಿ? ಇಲ್ವಲ್ಲ? ಆದರೂ ರಾಮ ಅಂತ ಮನಸಿಗೆ ಹೊಳೆಯಿತು ಅಲ್ವ? ಇಲ್ಲಿ ಮುದ್ರೆ ನಿಮಗೆ ಮುಖ್ಯ ಆಗಲಿಲ್ಲ. ಅಂದರೆ ಮುದ್ರೆ ನೋಡುಗನಿಗಲ್ಲ, ಅದು ನಟನಿಗೆ. ಭಾವ ಪ್ರಚೋದನೆಗೆ ಬೇಕಾಗಿ. ಇನ್ನು ಕೂಡಿಯಾಟ್ಟಮ್‌ನಲ್ಲಿ ಬಹಳ ಮುದ್ರೆಗಳು ವಾಕ್ಯ ರಚನೆಯಲ್ಲಿ ಸಂಬಂಧಿ ಮುದ್ರೆಗಳಾಗಿ ಬಳಕೆಯಲ್ಲಿವೆ. ಅವು ಅಷ್ಟು ಮುಖ್ಯವಾದವಲ್ಲ.

ಇನ್ನು ಕೆಲವು ಸಮಯ ಮುದ್ರೆಗಳೇ ಇರುವುದಿಲ್ಲ ಬರೇ ಕಣ್ಣಿನಲ್ಲಿ, ಮುಖದ ಅಭಿನಯದಲ್ಲೇ ನಾವು ತೋರಿಸ ಬೇಕಾಗುತ್ತದೆ. ಪರ್ವತ, ಸಮುದ್ರ...ಹೀಗೆ. ಆಗ ನಾವು ನಮ್ಮೊಳಗೆ ಚಿತ್ರಣ ಕಟ್ಟಿಕೊಳ್ಳಬೇಕಾಗುತ್ತದೆ ಆಗ ಮಾತ್ರ ಅಭಿನಯಿಸಲು ಸಾಧ್ಯ.  ಅದಕ್ಕೆ ಬಹಳ ಶಕ್ತಿ ಬೇಕು. ಪ್ರತೀ ಮುದ್ರೆಯೂ ಕೂಡ ನಮಗೆ ನಮ್ಮೊಳಗೆ ಒಂದು ಚಿತ್ರಣವನ್ನು ಕಟ್ಟಿ ಕೊಡುತ್ತದೆ ನಾವು ಅದನ್ನ ಗಮನಿಸಿ ಅಭ್ಯಾಸ ಮಾಡಿ  ಅದಕ್ಕೆ ಶಕ್ತಿ ಕೊಡಬೇಕು ಅಷ್ಟೆ. ಎಂದು  ರಾವಣ ಕೈಲಾಸ ಪರ್ವತ ನೋಡುವ ಸನ್ನಿವೇಷವನ್ನು ಅಭಿನಯಿಸಿ ತೋರಿಸಿದರು. ಪರ್ವತದ   ಎತ್ತರ, ಅಗಲ  ಎಲ್ಲವನ್ನೂ ಅಭಿನಯಿಸಿದರು. 


ಪ್ರಶ್ನೆ; ನೀವು ಅಭಿನಯ ಮಾಡುವಾಗ ಮನಸಲ್ಲೇನು ಯೋಚಿಸಿತ್ತೀರ? ಅಂದ್ರೆ ಈಗ ನೀವು ಪರ್ವತವನ್ನು ನೋಡುವ ಸಂದರ್ಭದಲ್ಲಿ ಏನು ಮಾಡ್ತಿದ್ದಿರಿ?

ಹ್ಹೆಹ್ಹೆ ಇದು ಏನು ಪ್ರಶ್ನೆ? ನಾವು ಏನು ಅಭಿನಯಿಸ್ತೇವೋ ಅದನ್ನೇ ಮನಸ್ಸಿನೊಳಗೂ ಕಲ್ಪಿಸಿಕೋಬೇಕು. ಅಷ್ಟೇ ಅಲ್ಲ ಅದನ್ನ ಎಷ್ಟು ದೊಡ್ಡದಾಗಿ ಚಿತ್ರಿಸಲು ಸಾಧ್ಯವೋ ಅಷ್ಟು ದೊಡ್ಡದಾಗಿ ಕಲ್ಪಿಸಿಕೊಳ್ಳಬೇಕು. ನಾವು ಕೈಲಾಸ ಪರ್ವತ ನೋಡಿಲ್ಲ. ಆದ್ರೆ ಅದನ್ನ ಕಲ್ಪಿಸಿಕೊಳ್ಳಬಹುದು. ನಾವು ನೋಡಿದ ದೊಡ್ಡ ಪರ್ವತವನ್ನು ನೆನಪಿಸಿಕೊಂಡು ನಮ್ಮೊಳಗೆ ಚಿತ್ರಿಸಿಕೊಳ್ಳೋದು ಅದನ್ನ ಮತ್ತೂ ದೊಡ್ಡದಾಗಿ ಬೆಳೆಸಿಕೊಳ್ಳೋದು. ಈಗ ಟೀವಿ ಬಂದಮೇಲಂತು ನಮಗೆ ಎಷ್ಟೆಲ್ಲ ದೊಡ್ಡ ಶಿಖರಗಳನ್ನೇ ನೋಡ್ಬೋದಲ್ವ! ಅದೆಲ್ಲ ನಮಗೆ ಸಹಾಯ ಮಾಡತ್ತೆ. ನಮ್ಮ ಕಲ್ಪನೆ ಎಷ್ಟು ದೊಡ್ಡದೊ ಅದರ  ಅರ್ಧದಷ್ಟು ಮಾತ್ರ ನೋಡುಗನಿಗೆ ತಲುಪೋದು.

.....

No comments:

Post a Comment