Wednesday, August 15, 2012

ಅರವಟ್ಟಿಗೆ


ಕಾಳೊಂದನ್ನು ಹೊತ್ತ  ಇರುವೆ
ಜಾರು ನೆಲದ ಮೇಲೆ ಓಡುತ್ತಿದೆ ಅವಸರಿಸಿ
ಗೋದಾಮಿನ ರಾಶಿ ಚೀಲಗಳ ನಡುವೆ
ಇಲ್ಲದೆ ಸುತ್ತಲಿನ ಧಾರಾಳತೆಯ ಪರಿವೆ.
ಹೊತ್ತ ಕಾಳೊಂದು ಮಾತ್ರ ಇದೆಯಿಲ್ಲಿ
ಪ್ರೀತಿಸಲು ಎಂದದರ ಎಣಿಕೆ.

ಹಾಗೆಯೇ ನಾವೂ
ಕಣ ಬಿತ್ತೊಂದನ್ನು ಹೆಕ್ಕಿ
ಭಕ್ತರಾಗಿ ಬಿಡುತ್ತೇವೆ.
ಈ ದೇಹ, ಆ ದಾರಿ ಯಾ ಒಬ್ಬ ಗುರು.
ನೋಡು ಸ್ವಲ್ಪ ದೂರ, ವಿಸ್ತಾರ.

ನೋಟವೇ ಪ್ರತಿ ಜೀವಿಯ ಸಾರವಾದಾಗ
ಯಾವ ಸಾರವನ್ನು ತುಂಬಿಕೊಳ್ಳುತ್ತದೋ ಜೀವಿ
ಅದಕ್ಕೆ ಅದೇ ರೂಪ. ದೇವ, ದಾನವ!

ಹೂಜಿಯಲ್ಲೆ ತುಳುಕಿ ಹರಿಯುತ್ತದೆ ಸಾಗರ,
ಮೀನೊಳಗೇ ಈಜುತ್ತಿದೆ ಕಡಲೆನ್ನಲಡ್ಡಿಯಿಲ್ಲ


ಈ ಗೂಢದ ಅರಿವೆ ಶಾಂತಿ ನೀಡಿ  ಹಂಬಲಕ್ಕೆ 
ಮಾಡುತ್ತದೆ ಅರವಟ್ಟಿಗೆಯನ್ನೆ ಮನೆಯ ತೆಕ್ಕೆ.



ರೂಮಿಯ T H E   R   O   A D   H O M E  ದ ಭಾವಾನುವಾದ 
-ಶ್ರೀಧರ ಹೆಗ್ಗೋಡು.




2 comments: