Wednesday, September 5, 2012

ಜತೆಗಿರುವರು ಭಾಸ್ಕರ...



ಶ್ರೀ ಕೆ ವಿ ಸುಬ್ಬಣ್ಣ, ಬಿ ವಿ ಕಾರಂತ ಮತ್ತು ಭಾಸ್ಕರ್ ಚಂದಾವರ್ಕರ್ ಈ ಮೂವರೂ ನನ್ನ ಅರಿವನ್ನು ಬೆಳಗಿದ ಬದುಕನ್ನು ಎಲ್ಲಾ ದೆಸೆಗಳಿಂದಲೂ ರೂಪಿಸಿದ ಮಹನೀಯರು, ಗುರುಗಳು.

ಅರವತ್ತನಾಲಕ್ಕು ವಿದ್ಯೆಗಳ ಬಗ್ಗೆಯೂ ಕುತೂಹಲದಿಂದ ಚದುರಿ ಹೋಗುತ್ತಿರುವ ವಿದ್ಯಾರ್ಥಿ ಒಬ್ಬನ ಮನಸ್ಸಿನ ಲಗಾಮು ಹಿಡಿದು ಸರಿಯಾದ ಸಮಯದಲ್ಲಿ ನಿಜದಾರಿಯನ್ನು ತೋರಿಸಿ ಮೊದಲ ಹೆಜ್ಜೆ ಇಡಿಸುವವನನ್ನು 'ಗುರು' ಎನ್ನುತ್ತಾರೆ. ಹಾಗೆ ನಿರ್ದಿಷ್ಟ ಗುರಿಯನ್ನು ಗುರು ತೋರುವವರೆಗೆ ಮನಸ್ಸಿನಲ್ಲಿ ಎಷ್ಟೆಲ್ಲ ವಿಚಾರಗಳು ತುಂಬಿದ್ದರೂ ವಿದ್ಯೆ ಮಾತ್ರ ರಹಸ್ಯವೇ ಸರಿ. ಭಾಸ್ಕರ್ ಚಂದಾವರ್ಕರ್ ಬಹುಬೇಗ ನನ್ನ ಜೀವನದಲ್ಲಿ ಅಂತಹ ಗುರುವಾಗಿ ನನಗೆ ಒದಗಿ ಬಂದದ್ದು ನನ್ನ ಅದೃಷ್ಟ. ನೀನಾಸಮ್ ತಿರುಗಾಟಕ್ಕೆ 'ಜತೆಗಿರುವನು ಚಂದಿರ' ನಾಟಕ ನಿರ್ದೇಶಿಸಲು ಬಂದ ಭಾಸ್ಕರ್ ಸರ್ ಹಾರ್ಮೋನಿಯಮ್ ಒಂದನ್ನು ನನ್ನ ಕುತ್ತಿಗೆಗೆ ತೂಗಿಬಿಟ್ಟರು. ಈ ಕ್ರಿಯೆ  ಕಲಾವಿದನಾಗಿ ನನ್ನ ದೃಷ್ಟಿಕೋನವನ್ನು ಮತ್ತು ದರ್ಶನವನ್ನು ನಿರ್ಧರಿಸುವಷ್ಟು ಮಹತ್ವದ್ದಾಗಿತ್ತು.


ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗಲೇ ಬಿ ವಿ ಕಾರಂತರು ನೀನಾಸಮ್ ತಿರುಗಾಟಕ್ಕೆ ಗೋಕುಲನಿರ್ಗಮನ ನಾಟಕ ಮಾಡಿಸುತ್ತಿದ್ದರು. ನಮ್ಮ ಅಮ್ಮ ನಾಟಕಗಳಿಗೆ ತಾಂತ್ರಿಕ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಿದ್ದುದರಿಂದ ನನಗೆ ಮತ್ತು ನನ್ನ ತಮ್ಮನಿಗೆ ನಾಟಕ ತಾಲೀಮಿನ ಅವಧಿಯಲ್ಲಿ ಪ್ರವೇಶ ಸುಲಭ ಲಭ್ಯವಾಗಿತ್ತು.

ಶಾಲೆಯ ಹೊತ್ತು ಬಿಟ್ಟು ಉಳಿದೆಲ್ಲ ಹೊತ್ತಿನಲ್ಲೂ ನಾವಿಬ್ಬರೂ ಮ್ಯೂಸಿಕ್ ಪಿಟ್ ನಲ್ಲೇ ಇರುತ್ತಿದ್ದೆವು. ತಾಳ, ಗೆಜ್ಜೆ, ಜಾಗಟೆ, ಚಿಟಿಕೆ, ಗಂಟೆ ಹೀಗೆ ಸಣ್ಣ ಸಣ್ಣ ವಾದ್ಯಗಳನ್ನು ನುಡಿಸುತ್ತಾ ವಾದ್ಯಕಾರರಿಗೆ ಸಹಕರಿಸುತ್ತಾ ಇರುತ್ತಿದ್ದೆವು.

ನಾನು ತಕ್ಕ ಪಿ.ವಿ.ಸಿ ಪೈಪುಗಳನ್ನು ಹುಡುಕಿ ಕೊಳಲು ತಯಾರಿಸಿ ನಾಟಕದ ಹಾಡುಗಳನ್ನೆಲ್ಲಾ ಅದರಲ್ಲಿ ನುಡಿಸಲು ಪ್ರಯತ್ನಿಸುತ್ತಿದ್ದೆ. ಕ್ರಮೇಣ ರಂಗಶಿಕ್ಷಣ ಕೇಂದ್ರದ ನಾಟಕಗಳಿಗೆ ಸಂಗೀತದಲ್ಲಿ ಮತ್ತು ಇತರ ತಾಂತ್ರಿಕ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದೆ. ೧೯೯೫- ೯೬ರಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಯಾದೆ.

ಆ ವರ್ಷ ನೀನಾಸಮ್ ಒಂದು ಸಂಗೀತ ರಸಗ್ರಹಣ ಶಿಭಿರವನ್ನು ಏರ್ಪಡಿಸಿತು. ಕರ್ನಾಟಕದ ಎಲ್ಲೆಡೆಯಿಂದ ೪೦ -೫೦ ಮಂದಿ ಸಂಗೀತಾಸಕ್ತರು, ಹೆಗ್ಗೋಡಿನ ಸುತ್ತಮುತ್ತಲಿನ ರಸಿಕರು ಕೆಲವರು ಮತ್ತು ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ನಾವು ಅದರಲ್ಲಿ ಪಾಲ್ಗೊಂಡೆವು. ಆವಾಗ ನಾನು ಮೊದಲಬಾರಿಗೆ ಭಾಸ್ಕರ್ ಚಂದಾವರ್ಕರ್ ಅವರನ್ನು ಭೇಟಿಯಾದೆ. ಆ ಐದು ದಿನಗಳಲ್ಲಿ ಭಾಸ್ಕರ್ ಸರ್ ಅವರು ಪಾಶ್ಚಾತ್ಯ ಮತ್ತು ಪೌರಾತ್ಯ ಸಂಗೀತದ ವಿವಿದ ಪದ್ದತಿ, ಶೈಲಿ, ಪ್ರಕಾರಗಳು ಅವುಗಳ ಇತಿಹಾಸ, ಬೆಳವಣಿಗೆ, ಬದಲಾವಣೆ ಹೀಗೆ ಎಲ್ಲ ಮಜಲುಗಳನ್ನೂ ಶ್ರೀಮಂತವಾಗಿ ವಿವರಿಸಿದರು. ಭರತನಿಂದ ಕುಮಾರಗಂಧರ್ವರವರೆಗೆ ಬಾಕ್ ನಿಂದ ಅಮೇರಿಕನ್ ಸಂಯೋಜಕ ಜಾನ್ ಕೇಜ್ ನ ಪ್ರಸಿದ್ಧ ಕೃತಿ 'ಸೈಲೆನ್ಸ್' ವರೆಗೆ ಅವರ ತಿಳಿವಿನ ವಿಸ್ತಾರ ಸಂಗೀತದ ಬಗೆಗಿನ ನನ್ನ ಕುತೂಹಲವನ್ನು ಇನ್ನಷ್ಟು ಆಳಗೊಳಿಸಿತು.

ಮಾರನೆಯ ವರ್ಷವೇ ಅವರು ನಮಗೆ "ಜತೆಗಿರುವನು ಚಂದಿರ" ನಾಟಕ ನಿರ್ದೇಶಿಸಲು ಬಂದರು. ಪ್ರಸಿದ್ಧ ಮ್ಯೂಸಿಕಲ್ "ಫಿಡ್ಲರ್ ಆನ್ ದಿ ರೂಫ್" ಕೃತಿಯ ರೂಪಾಂತರ ಅದು. ಅದರಲ್ಲಿನ ಫಿಡ್ಲರ್ ನ ಪಾತ್ರ ನನ್ನ  ಪೇಟೀ ಮಾಸ್ತರನ ಪಾತ್ರವಾಗಿತ್ತು. ಆ ಒಂದು ತಿಂಗಳು ರಂಗಭೂಮಿಯಲ್ಲಿ ಸಂಗೀತದ ಬಳಕೆಯ ಹಲವು ಆಯಾಮಗಳ ಬಗ್ಗೆ ಕೊನೆಯಿಲ್ಲದಷ್ಟು ವಿಚಾರಗಳನ್ನು ಅರಿತಿದ್ದೇನೆ, ಕಲಿತುಕೊಂಡಿದ್ದೇನೆ.  ಬಿ ವಿ ಕಾರಂತರು ರಂಗಸಂಗೀತವೆನ್ನುವುದು ವಿಸಂಗೀತ  (Anty Music) ಎನ್ನುತ್ತಾರೆ. ಸಂಗೀತ ಎನ್ನುವುದನ್ನು ಸರಿಯಾಗಿ ಅರಿತರೆ ಮಾತ್ರ ವಿಸಂಗೀತವನ್ನು ಸೃಷ್ಟಿಸಲು ಸಾದ್ಯ ಎನ್ನುವುದು ಅವರ ನಿಲುವು. ಹೀಗೆ ವಿಸಂಗೀತದ ಸೃಷ್ಟಿಗೆ ಮೂಲವಾದ ಸಂಗೀತದ ಎಲ್ಲ ಮೂಲಭೂತ ತತ್ವಗಳನ್ನು, ವಿವಿಧ ಸಂಗೀತ ಪ್ರಕಾರಗಳನ್ನು ಅರಿತು ಆಸ್ವಾದಿಸುವ ಬಗೆಯನ್ನು, ಭಾಷೆಯೊಳಗಿನ, ಭಾವಸ್ತಿತಿಯೊಳಗಿನ ನವಿರು ಸಂಗೀತದ ಛಾಯೆಗಳನ್ನು, ಮೌನ, ಶಬ್ಧ, ನಾದದ ವಿಸ್ತಾರ, ಅಗತ್ಯ, ಅನುಕೂಲತೆಗಳ ಸಾಧ್ಯತೆಗಳನ್ನು ಕಲಿತುಕೊಂಡಿದ್ದು ನಾನು ಭಾಸ್ಕರ್ ಸರ್ ಅವರಿಂದ.

ಕ್ರಮೇಣ ನೀನಾಸಮ್ ತಿರುಗಾಟದ ನಾಟಕಗಳಿಗೆ ಸಂಗೀತ ಸಂಯೋಜಕನಾಗಿ, ಕೆಲವೊಮ್ಮೆ ಸಹ ನಿರ್ದೇಶಕನಾಗಿ ಕೆಲಸ ಮಾಡಲು ತೊಡಗಿದೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಸಂಗೀತ ಮತ್ತು ನಟನೆಯ ಪ್ರಾದ್ಯಾಪಕನಾಗಿ ಧ್ವನಿ, ಉಸಿರಾಟ, ಸಂಗೀತ ಈ ಎಲ್ಲಾ ವಿಭಾಗಗಳಲ್ಲಿ ಕೆಲಸಮಾಡುವಾಗಲೆಲ್ಲಾ ಭಾಸ್ಕರ್ ಸರ್ ಅವರಿಂದ ಕಲಿತದ್ದು ಮತ್ತೆ ಮತ್ತೆ ನನ್ನ ನೆರವಿಗೆ ಬಂದಿದೆ, ನನ್ನ ಅರಿವನ್ನು ವಿಸ್ತಾರಗೊಳಿಸಿದೆ. ಈ ಮಧ್ಯೆ ಪ್ರತೀ ವರ್ಷ ಸಂಸ್ಕೃತಿ ಶಿಭಿರದ ಅವಧಿಯಲ್ಲಿ ಭೇಟಿಮಾಡುತ್ತಿದ್ದ ಅವರನ್ನು ನನ್ನ ಹಲವು ಸಂದೇಹಗಳಿಂದ ಕಾಡಿದ್ದೇನೆ. ಅತೀ ಸಣ್ಣ ಸಣ್ಣ ಸಮಸ್ಯೆಗಳಿಗೂ ಬೇಸರಗೊಳ್ಳದೆ ಅವರು ಉತ್ತರಿಸಿದ್ದನ್ನು ಈಗ ವಿಸ್ಮಯದಿಂದ ನೆನೆಸಿಕೊಳ್ಳುತ್ತೇನೆ. 

ನೀನಾಸಮ್ ಒಮ್ಮೆ ೫ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಸಂಧಾನ ಎನ್ನುವ ರಸಗ್ರಹಣ ಶಿಬಿರವನ್ನು ಆಯೋಜಿಸಿತು. ಆಗ ಭಾಸ್ಕರ್ ಸರ್ ಜೊತೆಗೆ ಸಂಗೀತ ರಸಗ್ರಹಣ ಶಿಬಿರದಲ್ಲಿ ಅವರ ಸಹಾಯಕನಾಗಿ  ಐದು ಊರುಗಳಲ್ಲಿ ಅಷ್ಟೂ ಹೊತ್ತು ಅವರೊಡನೆ ಕಳೆಯುವ ಅಪರೂಪದ ಅವಕಾಶ ನನಗೆ ಸಿಕ್ಕಿತು. 

ಎಲ್ಲ ವಿದ್ಯಾರ್ಥಿಗಳೊಡನೆ ಬೆರೆಯುವ, ಅವರ ಕುತೂಹಲವನ್ನು ಕೆರಳಿಸುವ, ಸಣ್ಣಸಣ್ಣ ಸಂದೇಹಗಳನ್ನೂ ತಣಿಸುವ, ಸಂಗೀತವನ್ನು ಅವರೊಡನೆ ಸುಖಿಸುವ  ಭಾಸ್ಕರ್ ಸರ್ ಅವರ ಅಪಾರ ಚೈತನ್ಯಕ್ಕೆ ಬೆರಗಾಗಿದ್ದೇನೆ. ರಾತ್ರಿ ಮಲಗಿದ ಹೋಟೇಲು ಕೋಣೆಯೊಳಕ್ಕೆ ಮಳೆ ನೀರು ನುಗ್ಗಿಬಂದು ತೊಂದರೆಯಾದರೂ ನಕ್ಕು, ಪೇಟೆ ಹೋಟೇಲಿನ ದೋಸೆ ಚಹಾದೊಂದಿಗೆ ದೇಶಕಾರಕ್ಕೂ ಭೂಪ್ ರಾಗಕ್ಕೂ ಇರುವ ವ್ಯತ್ಯಾಸವನ್ನು ಹೇಳಿಕೊಡುವ ಅವರ ಹೃದಯವೈಶಾಲ್ಯಕ್ಕೆ ಮರುಳಾಗಿದ್ದೇನೆ. ನನ್ನೊಳಗಿನ ಭಾಸ್ಕರ್ ಸರ್ ಜಗತ್ತನ್ನು ಅರಿಯುವ, ಆಸ್ವಾದಿಸುವ ಬೆಳಕಾಗಿ ಸೃಜನಶೀಲತೆಯ ಕಿಡಿಯಾಗಿ ನಂದದೆ ಯಾವಾಗಲೂ ಬೆಳಗುತ್ತಲೇ ಇದ್ದಾರೆ.

ಅವರ ಜ್ಞಾನವಾಗಲೀ, ಅಥವಾ ವ್ಯೆಕ್ತಿತ್ವವನ್ನಾಗಲೀ ವಿವರಿಸಲು ನನ್ನ ದೃಷ್ಟಿ ತೀರಾ ಸಣ್ಣದು,  'ಇವನು ಶ್ರೀಧರ ಹೆಗ್ಗೋಡು, ಇವನ ಹಲವು ಗುರುಗಳಲ್ಲಿ ನಾನೂ ಒಬ್ಬ' ಎಂದು ನನ್ನನ್ನೊಮ್ಮೆ ಅವರ ಮಿತ್ರರಿಗೆ ಪರಿಚಯಿಸಿದ್ದು ನನಗೆ ನೆನಪಾಗುತ್ತದೆ. ಅವರ ಶಿಷ್ಯ ನಾನೆಂಬ ಭಾವ ಹಲವು ನೆನಪುಗಳ ಸಮೇತ ಹೇಳಲಾಗದ ಎಷ್ಟೋ ಸಂಗತಿಗಳನ್ನು ನನ್ನೊಳಗೆ ತುಂಬುತ್ತದೆ.

ಶ್ರೀಧರ ಹೆಗ್ಗೋಡು

2 comments:

  1. Dear Sridhar Heggodu,Nice of you to introduce your Guru and sharing ur reminisces of the time u spent with him....good luck to you
    malathi S

    ReplyDelete