Sunday, November 4, 2012

ನಾಟ್ಯದ ಹಾದಿ - ನಾಲ್ಕನೇ ಹೆಜ್ಜೆ.


ಕೂಡಿಯಾಟ್ಟಮ್‌ನಲ್ಲಿ ಆಟ್ಟಪ್ರಕಾರಮ್ ಅಂತ ಒಂದಿದೆ. ನಾಟಕ ಯಾವುದು ಅಂತ ತೀರ್‍ಮಾನಿಸಿದ ನಂತರ ಪಾತ್ರಕ್ಕೆ ಬೇಕಾದ ಚಲನೆಗಳನ್ನು, ಅಂಗಚೇಷ್ಟೆಗಳನ್ನು ಹುಡುಕಿಕೊಳ್ಳುವುದು ಮೊದಲ ಕೆಲಸ. ಅಂದರೆ ನಾಟಕದ ಪಾತ್ರಕ್ಕನುಗುಣವಾಗಿ ಮತ್ತು ನಾಟಕದ ಕತೆಗೆ ಹೊಂದುವ ಉಪಕತೆಗಳನ್ನು, ಅದರ ಮೂಲಕ ಪಾತ್ರದ ಘನತೆ ಹೆಚ್ಚಿಸಬಹುದಾದ ಸನ್ನಿವೇಷಗಳನ್ನು ನಿರ್ಮಾಣ ಮಾಡಿಕೊಳ್ಳುವುದು ಕೂಡಿಯಾಟ್ಟಮ್‌ನ ಕ್ರಮ. ಇದಕ್ಕೆ ಆಟ್ಟಪ್ರಕಾರಮ್ ಅನ್ನುತ್ತಾರೆ.  ಇದು ನಟನ ಪಠ್ಯ. ಅಂದರೆ ಉದಾಹರಣೆಗೆ ರಾವಣನ ಪಾತ್ರ ತೆಗೆದುಕೊಂಡರೆ ತೋರಣ ಯುದ್ಧಮ್‌ನ ರಾವಣನ ಪಾತ್ರವಾದರೆ ಅದು ಧೀರೋದ್ಧಾತ್ತ ಪಾತ್ರ. ಅಲ್ಲಿ ಆ ಪಾತ್ರದ ಘನತೆಯನ್ನ ಎಷ್ಟು ಮೇಲಕ್ಕೊಯ್ಯಲು ಸಾಧ್ಯವೋ ಅದಕ್ಕೆ ಬೇಕಾದ ಉಪಕರಣೆಗಳನ್ನ, ಉಪಕಥೆಗಳನ್ನ ನಟ ಹುಡುಕಿಕೊಳ್ಳತ್ತಾನೆ. ಇನ್ನೊಂದು ಉಧಾಹರಣೆ ಭೀಮನ ಪಾತ್ರದ್ದು. ಅವನ ಇಬ್ಬಂದಿತನವನ್ನು ವಿವರಿಸಲಿಕ್ಕೆನ್ನುವ ಹಾಗೆ ವನ ವರ್ಣನೆಯ ಭಾಗದಲ್ಲಿ ಆನೆಯದೊಂದು ಸನ್ನಿವೇಷವಿದೆ. ಆನೆ ಹೊಟ್ಟೆತುಂಬಾ ತಿಂದು ಮಲಗಿದೆ. ಅದರ ಕಾಲನ್ನು ಹಾವು ಹಿಡಿದು ನುಂಗಲು ಯತ್ನಿಸುತ್ತಿದೆ ಇತ್ತ ಸಿಂಹವೊಂದು ಅದರ ತಲೆಯಮೇಲೆ ಎರಗುತ್ತಿದೆ.  ಈ ಥರದ ವಿಶೇಷಣಗಳನ್ನು ಹಿಂದಿನ ಕಾಲದ ನಟರು ಆಯ್ದು ಬರೆದಿಟ್ಟಿದ್ದಾರೆ. ಇದನ್ನು ಆಟ್ಟಪ್ರಕಾರಮ್ ಅನ್ನುತ್ತಾರೆ. ಈ ಆಟ್ಟಪ್ರಕಾರಮ್ ಪೀಳಿಗೆಯಿಂದ ಪೀಳಿಗೆಗೆ ಬರುತ್ತಾ ಕೂಡುತ್ತಾ ಕಳೆಯುತ್ತಾ ಶುದ್ಧಗೊಳ್ಳುತ್ತಾ ಬಂದಿದೆ. ಅಲ್ಲದೆ ಪ್ರತೀ ಕಲಾವಿದನೂ ಅವನದ್ದೇ ಆದ ವಿಶೇಷಣಗಳನ್ನು ಹುಡುಕಿಕೊಳ್ಳುತ್ತಾನೆ. ಹಿಂದೆ ಪ್ರತೀ ಕುಟುಂಬಕ್ಕೂ ಅವರದ್ದೇ ಆಟ್ಟಪ್ರಕಾರಮ್ ಇತ್ತು. ಪ್ರತೀ ಕುಟುಂಬದವರದ್ದು ಬೇರೆ ಬೇರೆ ನಟನೆಯ ಕ್ರಮವಿರುತಿತ್ತು. ಕೆಲವು ಕುಟುಂಬ ಅಭಿನಯದಲ್ಲಿ ಪ್ರಸಿದ್ದರಾದರೆ ಮತ್ತೆ ಕೆಲವರು ವಾಚಿಕದಲ್ಲಿ, ಮತ್ತೆ ಕೆಲವರು ಆಂಗಿಕದಲ್ಲಿ ಪ್ರಸಿದ್ದರಾಗಿರುತಿದ್ದರು. ಹಾಗಾಗಿ ಆ ಕುಟುಂಬಗಳ ನಟನೆಗೆ ಬೇಕಾಗುವ ವಿಷಯಗಳನ್ನು ಹೆಕ್ಕಿ ಬೆಳೆಸಿದ್ದನ್ನು ಮುಂದಿನವರಿಗೆ ಹೇಳಿಕೊಡುತ್ತಿದ್ದರು. ಮತ್ತೆ ಕಲಿವುಯುವಾಗಲೂ ಕೂಡಾ ಬೇರೆ ಬೇರೆ ಕುಟುಂಬದವರು ಬೇರೆ ಬೇರೆ ಕುಟುಂಬದವರಲ್ಲಿ ಆಯಾ ವಿಷಯಗಳನ್ನು ಕಲಿಯುವ ಕ್ರಮವೂ ಇತ್ತು. ಇಂತಹಾ ಪ್ರಯತ್ನಗಳೇ ಇನ್ನೂ ಕೂಡಿಯಾಟ್ಟಮ್ ನಂತಹ ಕಲೆಯನ್ನು ಜೀವಂತವಾಗಿ ಉಳಿಸಿರುವುದು.  ಕಥೆ, ಪಾತ್ರಗಳು ಎಲ್ಲವೂ ಅದೇ ಆಗಿದ್ದರೂ ಕೂಡ ನಟಿಸುವನ ನಟನ ಕೈಮೆಯಿಂದ ಅದಕ್ಕೆ ಬೇರೆಯದೇ ಆದ ರೂಪ ಪ್ರತೀ ಪ್ರದರ್ಶನದಲ್ಲಿ ಪಡೆದುಕೊಳ್ಳುವುದರಿಂದಲೇ ಈ ಥರದ ಪ್ರದರ್ಶನ ಕಲೆಗಳು ಇನ್ನೂ ಬದುಕಿರುವುದು.

ಅಭಿನಯ ಶುರು ಮಾಡಿದಾಗ ಆಯಾ ಸಂದರ್ಭಕ್ಕೆ ಬೇಕಾದ ಭಾವಗಳನ್ನು ಮೊದಲು ನಿರ್ದರಿಸಿ ಅದನ್ನು ಪಕ್ಕಾ ಮಾಡಿಕೊಂಡನಂತರವೇ ಮುಂದಿನ ಬೆಳವಣಿಗೆ ಸಾಧ್ಯ. ಅಂದರೆ ಸಂತೋಷದ ಸನ್ನಿವೇಶ ಇದೆ ಅಂದಕೊಂಡರೆ ಸಂತೋಷದಲ್ಲಿ ಸಣ್ಣ ಸಣ್ಣ ವ್ಯೆತ್ಯಾಸಗಳನ್ನ, ಅದ್ಭುತ, ವೀರಗಳನ್ನ ಸಂಚಾರಿಯಾಗಿ ತರಲುಸಾಧ್ಯವಿದೆ. ಅದಕ್ಕೂ ಮೊದಲು ಸ್ತಾಯಿಯನ್ನು ಗಟ್ಟಿಮಾಡಿಕೊಳ್ಳಬೇಕು.


ಅಮ್ಮನ್ನೂರು ಮಾಧವ ಚಾಕ್ಯಾರ್ ಅವರನ್ನು ಒಮ್ಮೆ ಸಂದರ್ಶನ ಮಾಡುವಾಗ ಕೇಳಿದರಂತೆ- ನಿಮ್ಮ ಕೂಡಿಯಾಟ್ಟಮ್ ನಲ್ಲಿ ಪ್ರೇಕ್ಷಕರ ಸ್ಪಂದನೆ ಹೇಗೆ ತಿಳಿಯಲು ಸಾದ್ಯ? ಬೇರೆ ಪ್ರಕಾರಗಳಲ್ಲೆಲ್ಲ ಚಪ್ಪಾಳೆ ತಟ್ಟಿ ಸಂತೋಷವನ್ನು ಪ್ರಕಟಿಸುವುದುಂಟು. ನಿಮ್ಮಲ್ಲಿ ಹಾಗೆ ಎಲ್ಲಿಯೂ ನಡೆಯುವುದಿಲ್ಲ ಹಾಗಾಗಿ ನಿಮಗೆ ಹೇಗೆ ತಿಳಿಯುತ್ತದೆ? ಅಂತ.

ಅದಕ್ಕೆ ಅಮ್ಮನ್ನೂರು ಹೇಳಿದರಂತೆ- ಮೊದಲನೆಯದಾಗಿ ನಾನು ನಟಿಸುವುದು ಬೆಳಕಿನೆದುರು ಮತ್ತು ಆ ಬೆಳಕಿಗೆ. ಹಾಗಾಗಿ ಅದರಾಚೆ ಯಾರಿದ್ದರೂ ಇರದಿದ್ದರೂ, ನನಗದರ ಚಿಂತೆ ಇಲ್ಲ. ಆದರೆ ನಾನು ಅಭಿನಯಿಸಿದಾಗ ನನ್ನ ಸುಷುಮ್ನ ನಾಡಿಯಲ್ಲಿ ತಂಪು ಅನುಭವ ಆದರೆ ಅವತ್ತಿನ ನನ್ನ ಅಭಿನಯ ಸರಿಯಿತ್ತು ಮತ್ತು ಅದು ನನಗೆ ಖುಷಿ ಕೊಟ್ಟಿತು ಅಂತ ಅಂದುಕೊಳ್ಳುತ್ತೇನೆ. ನನಗೆ ಸಂತೋಷ ಆದರೆ ನೋಡುಗರಿಗೂ ಅದು ಅನುಭವಕ್ಕೆ ಬಂದಿದೆ ಅಂತ ಅರ್ಥ ಎಂದರಂತೆ.

ನಟನ ತಯಾರಿ ಬಹಳ ಮುಖ್ಯ. ಒಂದು ಪಾತ್ರದ ಕಲ್ಪನೆ ಮಾಡುವಾಗ ಅದರ ಅತಿ ಕೊನೆವರೆಗೂ ನಾವು ಕಲ್ಪಿಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ರಂಗದ ಮೇಲೆ ಬಂದಾಗ ನಮ್ಮ ಕಲ್ಪನೆಯ ಅರ್ದದಷ್ಟನ್ನಾದರೂ ನಟಿಸಲು ಸಾದ್ಯವಾಗುತ್ತದೆ. ಪ್ರತೀ ಪಾತ್ರದ ಬದುಕೂ, ಅದರ ಪ್ರಯಾಣ, ಅದರ ಜೀವಾಳ ನಮಗೆ ಗೊತ್ತಿರಬೇಕು. ನಾವದನ್ನು ಕಟ್ಟಿಕೊಳ್ಳಬೇಕು. ಹಾಗೆಯೇ ನಟಿಸುವ ಪ್ರತೀ ಕ್ಷಣವೂ ಪಾತ್ರದ ಯೋಚನೆಗಳನ್ನು, ಸ್ಪಂದನೆ, ಪ್ರತಿಸ್ಪಂದನೆಗಳನ್ನು, ಕ್ರಿಯೆ, ಪ್ರತಿಕ್ರಿಯೆಗಳನ್ನು ಅನುಕ್ರಮವಾಗಿ ಮನದೊಳಗೆ ಚಿತ್ರಿಸಿಕೊಳ್ಳಬೇಕು. ಮತ್ತು ಅದನ್ನು ಆಯಾ ಕ್ಷಣದಲ್ಲಿ ಮತ್ತೆ ಬದುಕಲು ಆಗಬೇಕು. ಆಗಲೇ ಜೀವಂತವಾಗಿ ಅಭಿನಯಿಸಲು ಸಾದ್ಯ. ಕೂಡಿಯಾಟ್ಟಮ್ ನಲ್ಲಿ ಭಾವಗಳನ್ನು ಮೊದಲೇ ಅಭ್ಯಾಸ ಮಾಡಲಾಗುತ್ತದೆ. ಅಂದರೆ ಭಾವಗಳಿಗೆ ಬೇಕಾದ ಹೊರಗಿನ ಅಂಶಗಳು - ಹುಬ್ಬು, ಕಣ್ಣಿನ ತಟ, ಕೆನ್ನೆ, ತುಟಿ- ಅದಕ್ಕೆ ಬೇಕಾದ ಉಸಿರಾಟ, ದೇಹಸ್ಥಿತಿ ಇವುಗಳನ್ನು ಚೆನ್ನಾಗಿ ಅಭ್ಯಾಸ ಮಾಡಿರುತ್ತಾರೆ. ಇದು ತಂತಾನೇ ಬೇಕಾದ ಸತ್ವವನ್ನು ಪಡೆದುಕೊಳ್ಳುವಷ್ಟು ಗಟ್ಟಿಯಾಗಿರುತ್ತದೆ. ಹಾಗಾಗಿ ಇಲ್ಲಿ ನಟನಿಗೆ ಬರೆ ಸನ್ನಿವೇಶ ಒಂದು ಸಿಕ್ಕಿದರೆ ಸಾಕು ಅವನು ಅಲ್ಲಿ ಬದುಕ ತೊಡಗುತ್ತಾನೆ. 


No comments:

Post a Comment