Sunday, December 23, 2012

ನಾಟ್ಯದ ಹಾದಿ - ಐದನೇ ಹೆಜ್ಜೆ.


ಕಣ್ಣಿನ ಅಭ್ಯಾಸ:

ಕಣ್ಣು ದೇಹದ ಮುಖ್ಯ ಭಾಗ. ನಟನಾದವನ ಕಣ್ಣು ಸ್ಪಷ್ಟವಾಗಿ, ಶಕ್ತಿಯುತವಾಗಿರಬೇಕು. ಅದಕ್ಕೇ ಕೂಡಿಯಾಟ್ಟಮ್‌ನ ಮುಖ್ಯ ಭಾಗ ಎಲ್ಲವೂ ನಟನ ತಯಾರಿಗೇನೆ. ಕಣ್ಣಿಗೆ ಶಕ್ತಿ ಬಂದ್ರೆ ಅರ್ಧ ಕೆಲಸ ಆದ ಹಾಗೆ. ನೀನು ಏನೇ ಮಾಡು ಕಣ್ಣಲ್ಲಿ ಶಕ್ತಿ ಇಲ್ಲಾಂದ್ರೆ ಮಾಡಿದ್ದೇನೂ ತಲುಪೋಲ್ಲ ಕಣ್ಣಿನ ಯಾವುದೇ ಚಲನೆ ಕರಾರುವಾಕ್ಕಾಗಿ ಉದ್ದೇಶಪೂರಿತವಾಗಿಯೇ ಇರಬೇಕು. ಕಣ್ಣಿನ ಚಲನೆಯಲ್ಲಿ ಸ್ವಲ್ಪ ವೆತ್ಯಾಸವಾದರೂ, ನಟ ತಡವರಿಸಿದರೆ ಪ್ರೇಕ್ಷಕನೂ ನಡುದಾರಿಯಲ್ಲಿ ದಾರಿತಪ್ಪಿದಂತಾಗುತ್ತಾನೆ. ಅಂತ ಹೇಳಿ, ನೋಡೋಣ ಎರಡೂ ಕಣ್ಣ ಎರಡೂ ರೆಪ್ಪೆಗಳನ್ನ ಬೆರಳಿಂದ ಹಿಡಿದು ವಿಶಾಲವಾಗಿ ತೆರೆಯಿರಿ ಕಣ್ಣನ್ನು ಅಂದರು. ನಾವು ಎರಡೂ ಕಣ್ಣನ್ನು ಎರಡೂ ಕೈಗಳ ಬೆರಳು ಸಹಾಯದಿಂದ ಬಿಡಿಸಿ ಹಿಡಿದುಕೊಂಡೆವು. ನಂತರ ನಮ್ಮ ನೇರಕ್ಕೆ ದಿಟ್ಟಸಿ ಶಕ್ತಿಕೊಟ್ಟು ನೋಡಬೇಕು. ಹಾಗೇ ಸ್ವಲ್ಪ ಹೊತ್ತು ನೊಡಿಯಾದ ಮೇಲೆ ನಿಧಾನವಾಗಿ ಅಷ್ಟೇ ಶಕ್ತಿಯಿಂದ ಎಡಬದಿಯ ಕೊನೆಯ ತನಕ ಅಂದರೆ ನಮ್ಮ ದೃಷ್ಟಿ ಎಲ್ಲಿಯವರೆಗೆ ತಲುಪುತ್ತದೋ ಅಷ್ಟು, ಶಕ್ತಿಕೊಟ್ಟು ನೋಡಬೇಕು. ನಂತರ ಹಾಗೆ ಬಲಬದಿಯ ಕೊನೆತನಕ. ಹೀಗೆ ೫೦-೬೦ಸಲ ಆದನಂತರ ಅದರ ವೇಗವನ್ನು ಹೆಚ್ಚಿಸಿ ಮತ್ತೆ ೫೦-೬೦, ಮತ್ತೂ ವೇಗದಿಂದ ೫೦-೬೦ಸಲ. ನಂತರ ಹಾಗೇ ಮೇಲೆ ಕೆಳಗೆ ನೋಡುವುದು. ಕೆಳಗೆ ನೋಡುವಾಗ ಸಾಮಾನ್ಯವಾಗಿ ನಮ್ಮ ಕಣ್ಣು ಮುಚ್ಚಿದಂತೆ ಇರುತ್ತದೆ. ಅದಕ್ಕೆ ಕೆಳಗೆ ನೋಡುವಾಗ ಮತ್ತಷ್ಟು ಶಕ್ತಿ ಕೊಟ್ಟು ಮೇಲಿನ ರಪ್ಪೆ ತೆರೆದೇ ಇರುವಂತೆ ಹಿಡಿಯಲು ಪ್ರಯತ್ನಿಸಬೇಕು. ದಿವಸವೂ ಇದನ್ನು ಅಭ್ಯಾಸ ಮಾಡಬೇಕು.

ಎರಡೂ ಕೈಗಳಿಂದ ಕಣ್ಣಿನ ರೆಪ್ಪೆಗಳನ್ನ ಬಿಡಿಸಿ ಅಗಲವಾಗುವಂತೆ ಹಿಡಿದುಕೊಳ್ಳಿ. ನಂತರ ಕಣ್ಣಿಗೆ ಎಷ್ಟು ಸಾಧ್ಯವೋ ಅಷ್ಟು ಶಕ್ತಿಕೊಟು ನೇರ ನೋಡಿ. ನಂತರ ನಿಧಾನವಾಗಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬಹಳ ನಿಧಾವಾಗಿ ಶಕ್ತಿಕೊಟ್ಟು ದೃಷ್ಟಿ ಹರಿಸಿ. ಎಷ್ಟು ಸಾದ್ಯವೋ ಅಷ್ಟು ಎಡ ಬಲದ ಕೊನೆಯವರೆಗೆ ಹೋಗಲಿ ದೃಷ್ಟಿ. ಇದು ಅಭ್ಯಾಸವಾದನಂತರ ವೇಗಹೆಚ್ಚಿಸುತ್ತಾ ಹೋಗಬೇಕು. ನಂತರ ಹಾಗೆ ಮೇಲಿನಂದ ಕೆಳಕ್ಕೆ. ನಂತರ ವಿರುದ್ದ ದಿಕ್ಕಿನಲ್ಲಿ ಅಂದರೆ ಎಡದಿಂದ ಬಲಕ್ಕೆ ಗುಣಿಸು ಆಕಾರದಲ್ಲಿ, ಕಾಮನ ಬಿಲ್ಲಿನ ಹಾಗೆ, ಮತ್ತೆ ಅದೆ ಕಾಮನ ಬಿಲ್ಲಿನ ತಲೆಕೆಳಗು ರೀತಿಯಲ್ಲಿ. ಇದನ್ನು ಪ್ರತಿ ದಿನವೂ ಮಾಡಬೇಕು. ನಂತರ ನಿಧಾನವಾಗಿ ಕೈಯಯಲ್ಲಿ ಬಿಡಿಸಿ ಹಿಡಿಯದೇ ಕಣ್ಣನ್ನ ತೆರದು ಶಕ್ತಿಕೊಟ್ಟು ಹಿಡಿಯಲಿಕ್ಕೆ ಆಗಬೇಕು.

ಕಣ್ಣಿನ ಚಲನೆಗಳ ನಂತರ ಹುಬ್ಬನ್ನು ಶಕ್ತಿಕೊಟ್ಟು ಮೇಲೆ ಎತ್ತಿ ಹಿಡಿಯುವುದು, ನಂತರ ನಿಧಾನವಾಗಿ ಬಿಡುವುದು. ನಂತರ ಇದನ್ನು ವೇಗವಾಗಿ ಮಾಡುವುದು. ನಂತರ ತುಂಡರಿಸದೆ ಒಂದೇ ವೇಗದಲ್ಲಿ ಹುಬ್ಬನ್ನು ಆಡಿಸುವುದು, ನಿಧಾನವಾಗಿ ಸಣ್ಣಗೆ ಹುಬ್ಬು ಆಡಿಸುತ್ತಾ ನಂತರ ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ಹುಬ್ಬನ್ನು ಆಡಿಸುವುದು. ನಂತರ ಕಣ್ಣನ್ನು ಪೂರ್ತಿ ತೆರೆದು ಕೆಳ ತಟಗಳನ್ನು ಅಲುಗಿಸುವುದು. ಇಲ್ಲಿ ಬಹಳ ಎಚ್ಚರವಿರಬೇಕು. ಅಭ್ಯಾಸಮಾಡುವಾಗಲೇ ಕೆಳತಟಗಳುಮಾತ್ರವೇ ಅಲುಗುವಂತೆ ಕಣ್ಣನ್ನು ಪೂರ್ತಿ ಬಿಡಿಸಿ ಹಿಡಿಯಬೇಕು. ಮೇಲಿನ ರೆಪ್ಪೆ ಅಲುಗಬಾರದು. ಹಾಗೆ ತುಟಿಗಳ ಕಡೆಗಳನ್ನು ಅಲುಗಿಸಲು, ಮತ್ತು ಬಾಯೊಳಗೆ ಗಾಳಿ ತುಂಬಿಸಿ ಕೆನ್ನೆಯನ್ನು ಅಲುಗಿಸಲು ಅಭ್ಯಾಸ ಮಾಡಬೇಕು.

ಮಣಿ ಮಾಧವ ಚಾಕ್ಯಾರ್
ಈ ಅಭ್ಯಾಸಗಳು ದಿನವೂ ನಡೆಯುತ್ತಿರಬೇಕು. ನಾವು ಯೋಚಿಸಿದಾಗ ನಮ್ಮ ಮುಖ ನಮಗೆ ಬೇಕಾದ ಹಾಗೆ ಮಾಡಲು ಬರಬೇಕು. ಅಂದರೆ ಸಂತೋಷಕ್ಕೆ ಹುಬ್ಬು ಒಂದೇ ರೀತಿಯ ವೇಗದಲ್ಲಿ ಅಲುಗಾಡುತ್ತಿರಬೇಕು, ಶೃಂಗಾರಕ್ಕೆ ಮುಖದಲ್ಲಿ ನಗುವಿದ್ದು ಹುಬ್ಬು ಕೆನ್ನೆಗಳು ಒಂದೇ ವೇಗದಲ್ಲಿ ಅಲುಗುತ್ತಾ ಕೊನೆಗೆ ಅದು ತೀವ್ರವಾಗುತ್ತಾ ಹೋಗಬೇಕು. ರೌದ್ರಕ್ಕೆ ಕಣ್ಣಿನ ತಟಗಳು ಅಲುಗಬೇಕು... ಹೀಗೆ ಮುಖದ ಭಾಗಗಳ ಮೇಲೂ ಹತೋಟಿ ಇದ್ದೆರೆ ಮಾತ್ರ ಇದೆಲ್ಲ ಮಾಡಲು ಸಾಧ್ಯ.

ಎಲ್ಲಾ ಭಾವಗಳನ್ನು ನಮಗೆ ಬಹಳ ಹೊತ್ತು ಹಿಡಿದಿಡಲು ಆಗುವುದಿಲ್ಲ, ಹಾಗಾಗಿ ಆಯಾ ಭಾವಗಳಿಗೆ ಇರುವ ಕೆಲವು ವಿಶಿಷ್ಟವಾದ ದೇಹ ವಿನ್ಯಾಸಗಳನ್ನು ನಾವು ಅನುಕರಿಸುವುದರಿಂದ ಆ ಭಾವಗಳನ್ನ ಸ್ವಲ್ಪ ಮಟ್ಟಿಗೆ ದೀರ್ಘವಾಗಿ ಅಭಿನಯಿಸಬಹುದು. ಉತ್ಸಾಹಕ್ಕೆ ಕಣ್ಣುಗಳನ್ನ ಪೂರ್ತಿ ಬಿಡಿಸಿ ಹುಬ್ಬುಗಳನ್ನ ಎತ್ತಿ ಹಿಡಿಯುವುದು, ಎದೆ ಉಬ್ಬಿಸಿ ಉತ್ಸಾಹವನ್ನು ತುಂಬಿಕೊಳ್ಳುತ್ತಾ ಹೋಗಬೇಕು. ಹಾಗೆ ಶೃಂಗಾರಕ್ಕೆ ಹುಬ್ಬುಗಳನ್ನು ಮತ್ತು ಕೆನ್ನೆಗಳ ಕೊನೆಯನ್ನು ಒಂದೇ ಗತಿಯಲ್ಲಿ ಅಲುಗಿಸುತ್ತ ಅದರ ವೇಗ ಹೆಚ್ಚಿಸುತ್ತಾ ಹೋಗಬೇಕು. ಹಾಸ್ಯಕ್ಕೆ ಕಣ್ಣು ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಅರ್ದಚಂದ್ರಾಕೃತಿಯಲ್ಲಿ ಚಲಿಸಿ ಕೊನೆಗೆ ಎದೆಯನ್ನು ಸಣ್ಣಗೆ ಅಲುಗಿಸುವುದು...  


ಸಿವನ್ ನಂಬೂದಿರಿ


ಕಣ್ಣನ ಚಲನೆಗಳೇ ನಮ್ಮ ಅಭಿನಯದ ಅರ್ದ ಕೆಲಸ ಮಾಡಿಬಿಡುತ್ತದೆ. ಉದಾಹರಣೆಗೆ ಯೋಚನೆ ಮಾಡುತ್ತಿದ್ದ ಎನ್ನುವಲ್ಲಿ ನಿಧಾನವಾಗಿ ಮೇಲಕ್ಕೆ ನೋಡುತ್ತಾ ಹೋದರೆ ತಂತಾನೆ ಅದು ನಮ್ಮನ್ನು ಯೋಚನೆ ಮಾಡುವಂತೆ ಮಾಡುತ್ತದೆ. ಹಾಗೆ ಮೇಲಿದ್ದ ನೋಟವನ್ನು ವೇಗವಾಗಿ ನೇರ ನೋಡಿದರೆ ಏನೋ ಹೊಳೆದಂತೆ ಕಾಣಿಸುತ್ತದೆ. ಈ ರೀತಿಯ ಅನೇಕ ಚಲನೆಗಳು ಕೂಟಿಯಾಟ್ಟಮ್‌ನಲ್ಲಿ ಇವೆ. ಅದನ್ನು ಅಭ್ಯಾಸ ಮಾಡಿ ಅದನ್ನು ಸಾಧಿಸ ಬೇಕು. ಆಗ ಅಭಿನಯ ಸುಲಭವಾಗುತ್ತದೆ. ಸಹಜವಾಗುತ್ತದೆ. ನಟನ ಕಣ್ಣುಗಳು ಮನಸ್ಸಿನ ಕನ್ನಡಿಯಂತೆ ಇರಬೇಕು. ಕಣ್ಣಲ್ಲೇ ಭಾವಗಳು ಪ್ರಕಟವಾಗಬೇಕು. ಅಂದರೆ ಅಷ್ಟು ಸಾಧನೆ ಬೇಕು. ಸ್ಪಷ್ಟತೆ ಬೇಕು. ಅದಕ್ಕೆ ಕಣ್ಣಿನ ಸಾಧನೆ ಮುಖ್ಯ. ದಿವಸವೂ ಕಣ್ಣಿನ ಈ ಚಲನೆಗಳ ಅಭ್ಯಾಸದಿಂದ ಭಾವಗಳಿಗೆ ಬೇಕಾಗುವ ಕಣ್ಣಿನ ಸ್ಥಾನಗಳು ನಮಗೇ ಗೊತ್ತಾಗಲು ತೊಡಗುತ್ತದೆ.  ರೌದ್ರಕ್ಕೆ ಕಣ್ಣು ನೇರಕ್ಕಿಂತ ಸ್ವಲ್ಪ ಕೆಳಗಿರಬೇಕು. ಶೃಂಗಾರಕ್ಕೆ ನೇರ ನೋಡುವದೇ ಆದರೂ ಕಣ್ಣಿನ ದೃಷ್ಟಿ, ಶಕ್ತಿ ಬೇರೆಯೆ. ಶಾಂತಕ್ಕೆ ನೇರಕ್ಕಿಂತ ಸ್ವಲ್ಪ ಮೇಲೆ ಶಕ್ತಿ ಜಾಸ್ತಿ ಬೇಕಾಗಿಲ್ಲ. ವೀರಕ್ಕೆ ಉತ್ಸಾಹಭರಿತ ನೇರ ದೃಷ್ಟಿಯ ಕಣ್ಣುಗಳು, ಅದ್ಭುತಕ್ಕೆ ಶಕ್ತಿ ಎಷ್ಟು ಕೂಡಲು ಸಾಧ್ಯವಾಗುತ್ತದೋ ಅಷ್ಟು ಕೂಡಿಸಿ ಕಣ್ಣನ್ನು ಅಗಲಿಸಿ ಹಿಡಿಯಬೇಕು. ಭಯಕ್ಕೆ ನೋಟ ಒಂದೆಡೆ ನಿಲ್ಲವದಿಲ್ಲ, ಕರುಣಕ್ಕೆ ದೃಷ್ಟಿ ಕೆಳಗೆ, ದುಖದ ದೃಷ್ಟಿಯೇ ಬೇರೆ. ಹೀಗೆ ಪ್ರತಿಯೊಂದೂ ಭಾವಕ್ಕೂ, ಸಂಚಾರಿಗೂ ಕಣ್ಣಿ ಸಂಚಾರ ಬಹಳ ಮುಖ್ಯ. ಅದಕ್ಕೆ ಹಿರಿಯರು ಹೇಳೀರುವುದು "ರಸಭಾವಸ್ತು ಕರಯೋ ನೇತ್ರಮಾರ್ಗೇಣ ಶೋಭತೆ, ನೇತ್ರಂ ಮನಃ ಪಧಾನಂಹಿ ಮನೋ ಭಾವಸ್ಯ ಕಾರಣಂ"   ಹಾಗೇ "ಯತೋ ಹಸ್ತ ತಥೋ ದೃಷ್ಟಿ ಯತೋ ದೃಷ್ಟಿಸ್ ತಥೋ ಮನಃ ಯತೋ ಮನಃಸ್ ತಥೋ ಭಾವೋ ಯತೋ ಭಾವೋಸ್ ತಥೋ ರಸಾಃ." ಅಂದರೆ ನಾವು ಏನು ಮಾಡುತ್ತೇವೆ, ಏನು ಯೋಚಿಸುತ್ತೇವೆ, ಎಲ್ಲವೂ ಕಣ್ಣಿನ ಮೂಲಕ ಪ್ರಕಟವಾಗುತ್ತದೆ. ಮನಸ್ಸಿನ ಕನ್ನಡಿ ಕಣ್ಣು ಅಂತಾರಲ್ಲ ಹಾಗೆ. ನಾವು ಕಣ್ಣಿನ ಅಭ್ಯಾಸ ಮಾಡುವಾಗಲೇ ನಮಗೆ ಭಾವಕ್ಕೆ ಬೇಕಾದ ಕಣ್ಣಿನ ಸ್ಥಾನಗಳು ಗೊತ್ತಾಗತೊಡಗುತ್ತದೆ. ಅಭ್ಯಾಸ ಮುಖ್ಯವಾಗುವುದೇ ಇಲ್ಲಿ. ನಮಗೆ ಬೇಕಾದ ಭಾವಕ್ಕೆ ಬರಲು ಸಾಧ್ಯಾಗಬೇಕು ಅಂತಹ ಸಾಧನೆ ಅದು.  ನಾವು ಯೋಚಿಸಿದೊಡನೆಯೇ ನಮಗೆ ಬೇಕಾದ ಭಾವಸ್ತಿಥಿಯನ್ನು ತಲುಪಲು ಸಾಧ್ಯವಾಗಬೇಕು. ನಾವು ಅಭ್ಯಾಸ ಮಾಡುವಾಗ ಭಾವಸ್ತಿಥಿಯನ್ನು ಅದರ ಎತ್ತರದವರೆಗೆ(ತೀವ್ರ ಅವಸ್ಥೆ) ತಲುಪಲು ಸಾಧ್ಯವಾಗಬೇಕು.




ಚಿತ್ರಗಳನ್ನು ಅಂತರ್ಜಾಲದಿಂದ ಬಳಸಲಾಗಿದೆ.
ದಿಗ್ವಿಜಯ.



1 comment:

  1. WOW really nice lesson. will ask my daughter to read this. She is pursuing Bharathanatyam.
    Eyes are windows to the soul...
    Watching fishes is also a good exercise for the eye.(my fav passtime is to gaze into my fish bowl. its therapeutic) :-)
    malathi S

    ReplyDelete