Monday, December 31, 2012

ಹೊಸ ವರುಷಕೆ ಹೊಸ ಹೊತ್ತಿಗೆ.


ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು. 


ಹೊಸ ವರ್ಷದ ಸಂಭ್ರಮಾಚರಣೆಗೆ ನಮ್ಮದೊಂದು ಪುಸ್ತಕ ಪ್ರಕಟವಾಗಿದೆ. ಶ್ರೀ ರವೀಂದ್ರನಾಥ ಠಾಗೂರರ ಸ್ಟ್ರೇ ಬರ್ಡ್ಸ್ ಸಂಕಲನದ ಪದ್ಯಗಳ ಅನುವಾದ ಪುಸ್ತಕ - ತಿರುಕವಕ್ಕಿಗಳು.

ದಯವಿಟ್ಟು ಕೊಂಡು ಓದಿ, ನಿಮ್ಮ ಅಬಿಪ್ರಾಯಗಳನ್ನು ತಪ್ಪದೆ ತಿಳಿಸಿ.

ಮಿತ್ರ ಚನ್ನಕೇಶವ ಪುಸ್ತಕದ ವಿನ್ಯಾಸ ಮಾಡಿದ್ದಾನೆ.
ಪ್ರಕಾಶಕರು: ನುಡಿ ಪುಸ್ತಕ, ಬೆಂಗಳೂರು.












(ಶ್ರೀ ರಘುನಂದನ ಅವರು ಈ ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಿಂದ  ಆಯ್ದಿರುವ ಕೆಲವು ಭಾಗ.)

ಒಳ್ಳೆಯ ಕವಿತೆಯೊಂದು ಮೊದಲನೋಟ, ಮೊದಲ ಓದಿನಲ್ಲಿಯೇ ನಮ್ಮನ್ನು ಸೆಳೆದುಕೊಂಡುಬಿಡುತ್ತದೆ. ಮೊದಲನೋಟದಲ್ಲಿ ಆಗುವ ಪ್ರೇಮದಂತೆ ಅದು, ಮೊದಲ ಪ್ರೇಮದಂತೆ. ಆದರೆ, ಹಾಗೆ ಆ  ಕವಿತೆಗೊಲಿಯಲು ಅದರ ಮೊದಲನೋಟ, ಮೊದಲ ಓದಿನಿಂದಾಗುವ ಎದೆಮುಲುಕೇ ನಮಗೆ ಮೀಟುಗೋಲಾಗಬೇಕಾದರೆ, ನಾವು ಹಲವುಹಲವು ಕವಿತೆಗಳಿಗೊಲಿದು ಒಲಿಸಿಕೊಂಡ, ಪಳಗಿದ, ಮಾಗಿದ ನಲ್ಲನಲ್ಲೆಯರಾಗಿರಬೇಕು, ಅಷ್ಟೇ! 

ಶ್ರೀಧರ ಅವರ ಈ ಅನುವಾದದ ಕೆಲವು ಪದ್ಯಗಳು ನನ್ನನ್ನ ಸೆಳೆದೆದ್ದು ಹಾಗೆ, ಮೊದಲನೋಟದಲ್ಲಿ, ಮೊದಲ ಓದಿನಲ್ಲಿ.


ಇಲ್ಲಿನ ಅನೇಕ ಪದ್ಯಗಳು ಸಮೃದ್ಧವಾದ ಕಲ್ಪನಾಶೀಲತೆ, ಸೃಜನಶೀಲವಾದ ಎದೆಗಾರಿಕೆ, ನುಡಿಗಟ್ಟಿನ ಮತ್ತು ಮಾತಿನ ಕಾಕಿನ ನಾಟಕೀಯತೆಗಳಿಂದ ಮೈದುಂಬಿಕೊಂಡಿವೆ. ಠಾಕೂರರ ಸ್ಟ್ರೇ ಬರ್ಡ್ಸ್ ಶ್ರೀಧರ ಅವರ ತಿರುಕವಕ್ಕಿಗಳು ಆಗಿರುವುದರ ಹಿಂದಿನ ಕಲ್ಪಕತೆಯೇ ಎಷ್ಟು ಚೆನ್ನಾಗಿದೆ, ನೋಡಿ! ಮೇಲಾಗಿ, ಶ್ರೀಧರರ ಈ ಅನುಸೃಷ್ಟಿಯಲ್ಲಿ, ಠಾಕೂರರ ಪದ್ಯಗಳಲ್ಲಿ ಅಷ್ಟಾಗಿ ಕಾಣಿಸದ ಒಂದು ವಿಶೇಷವಿದೆ. ಇಲ್ಲಿನ ಪದ್ಯಗಳ ನುಡಿಗಟ್ಟಿನಲ್ಲಿ, ಉದ್ದಕ್ಕೂ, ಎಂಥ ಭಾವಾಭಿನಯವಿದೆ, ನಾಟಕೀಯವಾದ ಎಂಥ ಕಾಕುಗಳಿವೆ ಎಂದರೆ, ನಾವು ಅವುಗಳನ್ನು ಓದುತ್ತ, ಒಳಗಿಂದೊಳಗೇ, ಕೂತಲ್ಲಿಯೇ, ಕತ್ತುಕೊಂಕಿನ, ತೋಳುಕೈಗಳ ಭಾವಮುದ್ರೆಯ, ಕೊರಳದನಿ ಮತ್ತು ಮಾತಿನ ದನಿಯ, ಆಂಗಿಕ-ಸಾತ್ತ್ವಿಕ ಭಂಗಿಗಳನ್ನು ತಾಳುವಂತಾಗುತ್ತದೆ. ರಂಗಭೂಮಿಯ ಸತ್ತ್ವವಿದು, ನನ್ನ ಮತ್ತು ಶ್ರೀಧರನ ಕಸುಬಿನದ್ದು! ಆದ್ದರಿಂದಲೇ, ದೇಶಕಾಲ ೨೬ರ ಆ ಸಂಚಿಕೆಯಲ್ಲಿನ ಆ ಕೆಲವು ಪದ್ಯಗಳನ್ನು ನೋಡಿದಾಗ ನಾನು ಅಷ್ಟು ಬೆರಗಾದ್ದು, ಹಿಗ್ಗಿದ್ದು.  

ಈ ಸಂಕಲನದ ಮುಕ್ಕಾಲುಪಾಲುಮೂರುವೀಸೆಯಷ್ಟು ಪದ್ಯಗಳು ತಮತಮಗೆ ಆಧಾರವಾದ ಠಾಕೂರರ ಪದ್ಯಕ್ಕಿಂತ ಉದ್ದವಾಗಿವೆ; ಕಾವ್ಯದೇವತೆ ಶ್ರೀಧರರ ಕೈಹಿಡಿದೆಡೆಯಲ್ಲೆಲ್ಲ ಅವುಗಳು ತಮತಮಗೆ  ಆಧಾರವಾದ ಪದ್ಯಗಳು ಹೊರಡಿಸುವ ಅರ್ಥ ಮತ್ತು ಧ್ವನಿಗಳಿಗಿಂತ ಹೆಚ್ಚಿನ ಅರ್ಥ ಮತ್ತು ಧ್ವನಿಯ ಅಲೆಗಳನ್ನು ಹೊರಡಿಸುತ್ತವೆ; ಹಲಕೆಲವು ಪದ್ಯಗಳು ಠಾಕೂರರು ಬರೆದ ಮೂಲಪದ್ಯಗಳಿಗಿಂತಲೂ ಚೆನ್ನಾಗಿವೆ; ಹೆಚ್ಚುಕಡಿಮೆ ಎಲ್ಲ ಪದ್ಯಗಳೂ ಅಂತ್ಯಪ್ರಾಸದಿಂದ ಕೂಡಿವೆ. ಹಲವು ಪದ್ಯಗಳು, ತಮಗೆ ಆಧಾರವಾದ ಪದ್ಯಗಳಲ್ಲಿ ಕಾಣಲು ಸಿಕ್ಕದ ಸನ್ನಿವೇಶವಿವರ ಮತ್ತು ಭಾವವುಳ್ಳವುಗಳಾಗಿ, ಠಾಕೂರರ ಆಯಾಪದ್ಯಗಳ ಅರ್ಥಬಂಧದಲ್ಲಿ ಇದ್ದು ಮೇಲುನೋಟಕ್ಕೆ ಕಾಣಿಸದಿರುವ, ಕೇಳಿಸದಿರುವ ಮತ್ತೊಂದು ಮಗ್ಗುಲನ್ನು ನಮಗೆ ಅರುಹುತ್ತವೆ; ಇನ್ನು ಹಲವು, ತಮತಮಗೆ ಆಧಾರವಾದ ಪದ್ಯದ ಹಾದಿಯನ್ನು ಬಿಟ್ಟು ತುಂಬ, ಅಥವಾ ಪೂರ್ತಿ, ಬೇರೆಯಾದ ಹಾದಿಹಿಡಿಯುತ್ತವೆ; ಠಾಕೂರರ ಪದ್ಯವು ಹೊಮ್ಮಿಸುವ ಅರ್ಥ ಮತ್ತು ಧ್ವನಿಗಳನ್ನು ತೊರೆದು ಬೇರೆಯೇ ಆದ ಅರ್ಥ ಮತ್ತು ಧ್ವನಿಗಳನ್ನು ಹೊಮ್ಮಿಸಿಬಿಡುತ್ತವೆ. 


ಪುಸ್ತಕವನ್ನು ಬಿಡಿಯಾಗಿ ಕೊಂಡಲ್ಲಿ ಅಂಚೆಯ ವೆಚ್ಚ ಭಾರಿಯಾದೀತು. ಮಿತ್ರರು ಹಲವರು ಸೇರಿ 5-10 ಪುಸ್ತಕಗಳನ್ನು ಒಟ್ಟಿಗೇ ತರಿಸಿಕೊಳ್ಳುವಿರಾದರೆ ಕೆಳಗಿನ ವಿಳಾಸವನ್ನು ಸಂಪರ್ಕಿಸಿ.

ಚನ್ನಕೇಶವ-gchannakeshava@gmail.com

ಕಿರಣ್ ಹೊನ್ನಾವರ -9901234161  /9916820374  



2 comments: