ನಮ್ಮ ಕೊಲೆಗಡುಕನ ಮಿತ್ರರು ನಾವು
ಸಾಗರದಲೆಗಳಿಗೆ ನಮ್ಮನ್ನ ಬಲಿಕೊಡುವವನ
ಮಿತ್ರರು ನಾವು.
ಪ್ರೀತಿಸುತ್ತೇವೆ ನಾವು ಸಾವನ್ನು.
ದೂರ ಇಡು ಅದನ್ನು ಇವತ್ತೊಂದು ದಿನ
ಮತ್ತೆ ನಾಳೆ ಎನ್ನುವುದು ನಮ್ಮ ಮೂಢತನ ಮಾತ್ರ.
ಕತ್ತಿಯಲುಗಿನಿಂದ ದೂರ ಓಡಬೇಡ.
ಭಯಂಕರನಂತೆ ಕಾಣುತ್ತಿರಬಹುದು ಆ ಮಿತ್ರ
ಆದರೆ ನಿನ್ನ ಆತ್ಮಕ್ಕೆ ವಿಸ್ತಾರ ನೀಡುವವ ಅವ,
ಕಾಡ ಪ್ರಪಾತದಂಚಿಗೆ ತಂದು ನಿನ್ನ ಗರುಡನ ರೆಕ್ಕೆ
ಗಾಳಿಗೊಡ್ಡಿ ಹಾರಿಬಿಡುವವನೂ ಅವ.
ಶಿಲುಬೆ ಮೇಲಿನ ಏಸು,
ಕಣೆಯ ಮಂಚದ ಭೀಷ್ಮ.
ಆ ಅಸಂಗತ ಮರಣದಂಡನೆಗಳು
ಯಾವುದೋ ಗೂಢ ಹೊತ್ತುಕೊಂಡಿವೆ.
ಪ್ರತಿಯೊಂದು ಕ್ಷಣದಲ್ಲೂ ಅವರೇನು ಮಾಡುತ್ತಿದ್ದಾರೆ
ಮತ್ತೆ ಯಾಕೆ ಎನ್ನುವುದು ಅವರಿಗೆ ಗೊತ್ತಿದೆ
ಎಂದು ಕಣ್ಣುಮುಚ್ಚದ ಸಿನಿಕರು ವಾದಿಸುತ್ತಾರೆ.
ಅರ್ಪಿಸಿಕೋ ಪ್ರೇಮಕ್ಕೆ ಯೋಚಿಸದೆ ಹಿಂದುಮುಂದು
ಇವತ್ತು ಮುಂಜಾನೆ ಸೂರ್ಯ ಮೂಡಿ ಬೇಕಾಬಿಟ್ಟಿ
ನಮ್ಮ ದೀಪ-ಚುಕ್ಕೆಗಳ ಮನಸ್ಸನ್ನು ನಂದಿಸಿದಂತೆ.
ರೂಮಿಯ “ಮೋರ್ ರೇಂಜ್” ಕವನದ ಭಾವಾನುವಾದ
ಅನುವಾದ: ಶ್ರೀಧರ ಹೆಗ್ಗೋಡು
No comments:
Post a Comment