Monday, December 10, 2012

ತರಕಾರಿಯವರು


ಇಲ್ಲಿನ ಯಾವುದೇ ಸಂತೆ, ಮಾರುಕಟ್ಟೆಗೆ ಹೋಗಿ ವ್ಯಾಪಾರಕ್ಕೆ ಕುಳಿತವರಲ್ಲಿ ವಿಶೇಷವಾಗಿ ಹಣ್ಣುಹಣ್ಣು ಮುದುಕಿಯರು ಒಂದೋ ತೆಂಗಿನಕಾಯಿಯೋ, ಹರಿವೆ ಸೊಪ್ಪೋ, ಲಿಂಬೆ ಹಣ್ಣು, ಸೂಜಿ ಮೆಣಸು, ಬಾಳೆಯ ದಿಂಡು, ಬಾಳೆಯ ಗೊನೆಯ ಹೂವು... ಹೀಗೆ. ಹೀಗೆ ಯಾವತ್ತೂ ಅಂಗಡಿಗಳಲ್ಲಿ ಸಿಕ್ಕುವ ತರಕಾರಿಗಿಂತ ಥರದ ಅಪರೂಪಕ್ಕೆ ಸಿಕ್ಕುವ ಕಂಡೊಡನೇ ತೆಗದು ಕೊಳ್ಳಲೇ ಬೇಕೆನಿಸುವ ಸರಕನ್ನಿಟ್ಟಿರುತ್ತಾರೆ. ಇವರು ಮಾರುಕಟ್ಟೆ ಶುರುವಾಗುವಲ್ಲೇ ಸಣ್ಣಕ್ಕೆ ಚೀಲ ಹಾಸಿ ಕೂತಿರುತ್ತಾರೆ. ಮಾರುಕಟ್ಟೆಯ ಎಲ್ಲವೂ ಇವರಿಂದಲೇ ಆರಂಭವಾಗುತ್ತದೆ. ಮೊದಲೇ ಯಾವ ಯಾವುದೋ ಊರಿನಿಂದ ಬಂದು ಇಲ್ಲಿ ನೆಲೆಯಾಗಲು ಒದ್ದಾಡುತ್ತಾ ಹೇಗೋ ಉಸಿರಾಡುತ್ತಿರುವ ಇಲ್ಲಿನ ಜನರನ್ನ ತರಕಾರಿಯ ಅಜ್ಜಿಯಂದಿರು ಬಹಳ ಚೆನ್ನಾಗಿ ಒಲೈಸಿ ಸಂತೈಸಿ ಕಳುಹಿಸುತ್ತಾರೆ. ಪಟ್ಟಣಕ್ಕೆ ನಾಗಾಲೋಟದ ಗಡಿಬಿಡಿಯಲ್ಲಿ ಯಾವುದನ್ನೂ ಗಮನಿಸುವಷ್ಟು ಸಮಯ ಉಳಿದಿಲ್ಲ. ಕೆಲಸದ ಬಿಗುವನ್ನು ಕಳಚಿ ಮನೆಗೆ ಓಡುವ ಮುನ್ನ ಮಾರುಕಟ್ಟೆಗೆ ನುಸುಳಿ ಹೋಗುವ ಎಲ್ಲರನ್ನೂ ನಮ್ಮ ತರಕಾರಿಯವರು ಚೆನ್ನಾಗಿ ಬಲ್ಲರು. ದೂರದಲ್ಲಿ ಕಂಡೊಡನೇ ಮೋಳೆ, ಮಕ್ಕಾಳೇ, ಎನ್ನುತ್ತಾ ಕರೆದು ಇದು ಬೇಕಾ ಅದು ಬೇಕಾ? ಹರಿವೆ ತಗೋ ತುಂಬಾ ಚೆನ್ನಾಗಿದೆ. ನೋಡು ಸೂಜಿ ಮೆಣಸು! ನೆನ್ನೆ ಇಡೀ ದಿನ ಇದೇ ಕೆಲಸ ಆಗಿತ್ತು ನನಗೆ. ಎರಡು ಹಿಡಿಯಷ್ಟೂ ಇಲ್ಲ. ಆದರೆ ಹತ್ತು ಮೆಣಸು ಸಾಕು ಒಂದು ಬಾಟ್ಲಿ ಉಪ್ಪಿನಕಾಯಿಗೆ. ಹತ್ತು ರೂಪಾಯಿಗೆ ಕೊಡ್ಲಾ? ಅನ್ನುತ್ತಾ ಅದನ್ನು ಏನು ಮಾಡಬೇಕು, ಹೇಗೆ ಮಾಡಬೇಕು ಅಂತಾನೂ ಹೇಳಿಕೊಡುವವರಿವರು. ಇವರನ್ನು ಕಂಡು ಯಾಂತ್ರಿಕ ಬದುಕಿಂದ ಕ್ಷಣ ವಿರಾಮ ಪಡೆದು ನಮ್ಮ ಬಾಲ್ಯದ ನೆನಪ ಕೆದಕಿ ದಿನದ ಶ್ರಮವನ್ನಲ್ಲೇ ಕೊಡವಿ ಮತ್ತೆ ಉತ್ಸಾಹದ ಬುಗ್ಗೆಯಾಗಿ ಬಿಡಬಹುದು. ಅದಕ್ಕೇ ಇರಬೇಕು ಮಾರುಕಟ್ಟೆಯ ಮೊದಲಿಗೇ ಇವರಿರುವುದು.











ಹಾಗೇ ಇನ್ನೂ ಕೆಲವರು ಮನೆಮನೆಗೆ ತಲೆಯಲ್ಲಿಬಗಲಲ್ಲೊಂದು ಚೀಲ ಹಿಡಿದುಕೊಂಡು ಬಂದು ವ್ಯಾಪಾರ ಮಾಡುವವರೂ ಇದ್ದಾರೆ. ಹಾಗೆ ಬರುವವರಲ್ಲಿ  ನಮ್ಮ ಮನೆಗೂ ಒಂದಿಬ್ಬರ ನಂಟು ಇದೆ. ಅವರ ಲೋಕವೇ ಬೇರೆ. ಅವರನ್ನ ಕಂಡಾಗ ಒಮ್ಮೆಲೆ ನಗರದ ಲಯವೇ ತಪ್ಪಿ ಹೋಗಿ ನಮ್ಮ ನಿಜ ಲಯಕ್ಕೆ ಬಂದು ಬಿಡುತ್ತೇವೆ. ಅಷ್ಟು ಶಕ್ತಿವುಳ್ಳ ಮಾಂತ್ರಿಕರಿವರು. ನಮ್ಮಲ್ಲಿಗೆ ರೀತಿಯ ಇಬ್ಬರು ಆಗಾಗ ಬರುವವರು ಇದ್ದಾರೆ. ಒಬ್ಬರು ಬೆಳಿಗ್ಗೆ  ಏಳುಗಂಟೆಗೆಲ್ಲಾ ಬಂದು ಏರುದನಿಯಲ್ಲಿ ತರಕಾರಿಯ ಪಟ್ಟಿಯೊಂದಿಗೇ ಸುಪ್ರಬಾತ ಹೆಳುವವರು, ಅರವತ್ತು ದಾಟಿದ ಅಜ್ಜಿಯಂತು ನಮ್ಮ ಇಷ್ಟದವರು. ಯಾಕೆಂದರೆ ಇವರು ವ್ಯಾಪಾರಮಾಡುವ ರೀತಿಯೇ ಬೇರೆ. ಇವರು ತರುವ ತರಕಾರಿಯಂತೂ ಅದನ್ನು ಮತ್ತೆ ಹುಳುಕಿದೆಯೋ, ಹೇಗೋ ಏನೋ ಅಂತ ನೋಡಬೇಕಾಗಿಯ ಇಲ್ಲ. ಅಷ್ಟು ಚೆನ್ನಾಗಿರುತ್ತದೆ.  ಇದಕ್ಕಿಂತಲೂ ಮುಖ್ಯವಾದದ್ದು ಇವರ ವಯಸ್ಸಿನ ಜೊತೆಯಲ್ಲೇ ಬಂದಿರುವ ಪ್ರೀತಿ. ಅವರಿಗೆ ಎಲ್ಲರೂ ಮಕ್ಕಳ ಹಾಗೇ ಕಾಣುತ್ತದೆ ಇರಬೇಕು. ಮೋನೇ ಎಂದ ವೇಣುಂ? ಪಿನ್ನೆ ನೋಕು ನಿಂಡೆ ಅಮ್ಮ ಉಂಡೋ? ಅಂತ ಶುರು ಮಾಡಿದರೆ ಮತ್ತೆ ವ್ಯಾಪಾರವಾಗದೆ ಅಲ್ಲಿಂದ ಏಳುವುದೇ ಇಲ್ಲ ಇವರು.


ಅಜ್ಜಿಗೆ ವ್ಯಾಪಾರವೇ ಮುಖ್ಯ ಅಲ್ಲ. ಇವರಿಗೆ ಸಂಬಂಧವೂ ಅಷ್ಟೇ ಮುಖ್ಯ. ಇವರು ಸುತ್ತಮುತ್ತಲಿನ ಎಲ್ಲರಿಗೂ ಬೇಕಾದವರು. ಮತ್ತೆ ಇವರೇ ಕೆಲವರ ಮನೆಯ ಅಡಿಗೆಯ ಪ್ಲಾನ್ ಕೂಡ! ಕೆಲವೊಮ್ಮೆ ಇವರು ಬಂದು ಪ್ಲಾನ್ ಬದಲಾಗುವುದೂ ಇದೆ. ಹೆಚ್ಚಾಗಿ ಅಜ್ಜಿ ತರುವುದು ಹರಿವೆಸೊಪ್ಪು. ಅದೂ ಕೆಂಪು ಹರಿವೆ ಹೆಚ್ಚಾಗಿ. ಅಪರೂಪಕ್ಕೆ ಹಸಿರೂ ತರುವುದುಂಟು. ಅಲ್ಲದೆ ವಿಶೇಷವಾಗಿ ಅವರೊಡನೆ ಹೇಳಿಕೊಂಡರೆ ಅಲ್ಲ ಕೇಳಿದರೆ ಏನೂ ತಂದಾರು. ನುಗ್ಗೆ ಎಲೆ, ಒಂದೆಲಗದ ಎಲೆ, ಬಾಳೆಯ ಹೂವು, ಬಾಳೆಯ ದಿಂಡು, ಮನೆಯಲ್ಲೇ ಬೆಳೆದ ಹಾಗಲಕಾಯಿ, ಬೆಂಡೆ ಕಾಯಿ…  ಅವರು ಹೇಳಿದ್ದೇ ರೇಟು! ಅದಕ್ಕೆಲ್ಲ ಚೌಕಾಸಿ ಮಾಡಲಿಕ್ಕಿಲ್ಲ. ಆದರೆ  ನಮ್ಮ ಮನೆಗೆ ಬಂದವರೇ ಅವರದೇ ಚೀರಲು ದಾಟಿಯಲ್ಲಿ ನಮ್ಮನ್ನೆಲ್ಲ ಎಬ್ಬಿಸಿ ಅಮ್ಮ ಬರುವವರೆಗೂ ಕಾದು ನಾವು ಚೌಕಾಸಿ ಮಾಡುವುದಿಲ್ಲ ಎಂಬುದು ತಿಳಿದಿರೋದ್ರಿಂದ ಮೊದಲು ೨೦ ರೂಪಾಯಿಗೆ ಕಟ್ಟು ಮಾತ್ರ ಅಂದು ನಿಧಾನಕ್ಕೆ ಸಣ್ಣ ಸಣ್ಣ ಎರಡು ಕಟ್ಟುಗಳನ್ನು ಸೇರಿಸಿ ಮುಖ ದಪ್ಪ ಮಾಡಿ ನಿಮಗಾದ್ದಕ್ಕೆ ಫ್ರೀ ಕೊಡುತ್ತಿರುªÀÅzÀÄ £ÀÄßvÀÛ¯Éà ಹೊರಡಲು ತಯಾರಾಗುವವರಿವರು. ಕೆಲವೊಮ್ಮೆ ಎಲ್ಲೆಡೆ ತಿರುಗಿ ಅವರ ಲೆಕ್ಕಾಚಾರ ತಪ್ಪಿ ಏನಾದರು ಸೊಪ್ಪು ಉಳಿದರೆ ಸೀದ ಿಲ್ಲಿಗೇ ಬರ್ತಾರೆ, ಮಕ್ಕಾಳೆ ನನಗೆ ವಯಸ್ಸಾಯಿತು. ಆ ಫ್ಲಾಟ್ ನವರು ಸೊಪ್ಪು ತಾ ಅಂದಿದ್ರು. ನೋಡು ೆಷ್ಟು ಎಳೇ ಸೊಪ್ಪು? ಅವಳಿಗೆ ಗೊತ್ತಾದ್ರೆ ತಾನೆ? ಚೆನ್ನಾಗಿಲ್ಲ ಅಂತಾಳೆ. ಪಾಟ್ ಅಲ್ಲಿ ಬೆಳೆಸ್ತಾಳಂತೆ ಸೊಪ್ಪನ್ನು. ನೋಡು ಎಷ್ಟು ಚೆನ್ನಾಗಿದೆ. ಅಂತ ಹೇಳಿ ಸಪ್ಪೆ ಮುಖ ಮಾಡಿ ಕೂರುತ್ತಾರೆ. ನಾವು ಅವರ ಹಾಗೆ ಸಪ್ಪೆ ಆಗಿಬಿಡಬೇಕು ಹಾಗೆ. ಕ್ಷಣ ಬಿಟ್ಟು ಮಕ್ಕಾಳೆ ತಗೋ ಹಣ ಿಲ್ಲದಿದ್ರೆ ಮತ್ತೊಮ್ಮೆ ಬಂದಾಗ ಕೊಡೋವಂತೆ. ನಾನು ಇನ್ನು ತಿರಗಾಡೋದಕ್ಕೆ ಆಗಲ್ಲ. ಬಿಸಿಲಾಯ್ತು ಮನೆಗೆ ಹೋಗ್ತೇನೆ. ಅಂತಂದು ನಮ್ಮ ಪ್ರತಿಕ್ರಿಯೆಗೂ ಕಾಯದೆ ಹೊರಡುವರು. ತಡೀರಿ ಅಜ್ಜಿ ಚಾಕುಡಿದು ಹೋಗಿ ಅಂದರೆ ಚಾ ಬೇಡ ಮಗಾ ಹಣ ಇದ್ರೆ ಕೊಡು. ಅಂತಾರೆ. ಎಷ್ಟು ಅಂತ ಕೇಳಲು ಮನಸಾಗದೆ ಐವತ್ತರದ್ದೋ ನೂರರದ್ದೋ ನೋಟು ಕೊಟ್ಟರೆ ಅವರು ಕೊಡುತ್ತಿರುವ ಸೊಪ್ಪಿನ ಹಣ ಮಾತ್ರ ತೆಗೆದುಕೊಂಡು ಬಾಕಿ ವಾಪಾಸ್ ಮಾಡಿ ನಿಲ್ಲದೆ ಮಾಯವಾಗುತ್ತಾರೆ.

ಹೆಚ್ಚಾಗಿ ಹರಿವೆಯನ್ನೆ ತರುವ ಇವರು ನಮ್ಮ ಸುತ್ತಮುತ್ತಲಲ್ಲೆಲ್ಲ ಓಡಾಢುತ್ತ ಇವರು ಎಲ್ಲರಿಗೂ ಬೇಕಾದವರು. ಒಂದನೆಯದಾಗಿ ಅಜ್ಜಿಗೆ ಎಲ್ಲರಲ್ಲೂ ಒಂದು ಥರದ ಪ್ರೀತಿ. ಎಲ್ಲರನ್ನೂ ನಗುತ್ತಲೇ ಮಾತಾಡಿಸುತ್ತ, ವಿಚಾರಿಸುತ್ತ ಹೋಗುವವರಿವರು. ಮತ್ತೆ ಇವರದ್ದೂ ರೂಟ್ ಪ್ಲಾನ್ ಇದೆ. ಇಂಥಹ ದಿನ ಮಾತ್ರ ಇಲ್ಲಿಗೆ ಬರೋದು ನಾನು. ನಾಳೆ ಅಲ್ಲಿಗೆ ಬರ್ತೇನೆ ಅಂತ ಹೇಳಿದ್ದೇನೆ. ನಾಡಿದ್ದು ಅಲ್ಲಿಗೆ ಹೋಗ್ಬೇಕು, ನೋಡು ಇನ್ನು ನಾಲ್ಕು ದಿನ ನಾನು ಬರೋದೇ ಇಲ್ಲ. ಏನೇನು ಬೇಕೋ ಎಲ್ಲ ಈಗಲೇ ತಗೊ. ಎನ್ನುತ್ತಾ ನಮ್ಮನ್ನೇ ನೋಡುತ್ತಾ ನಿಲ್ಲುತ್ತಾರೆ. ಅವರಿಂದಲೇ ನಾವೆಲ್ಲ ಬದುಕುತ್ತಿರುವುದು. ಅವರಿಲ್ಲವಾದರೆ ನಮಗೇ ತರಕಾರಿಯೇ ಇಲ್ಲ ಎನ್ನುವ ಹಾಗೆ  ಅವರ ಮಾತಿನ ಧಾಟಿ.ಅವರಿಗೆ ಗೊತ್ತು ಯಾರು ಎಷ್ಟು ಖರೀದಿ ಮಾಡ್ತಾರೆ ಅನ್ನೋದು




ನನಗೆ ಆಶ್ಚರ್ಯ ಅಂದರೆ ಬೆಳಿಗ್ಗೆ ಏಳಕ್ಕೆಲ್ಲ ಇಲ್ಲಿಗೆ ಬರಬೇಕಾದರೆ ಮುದುಕಿ ಎಷ್ಟು ಬೇಗ ಎದ್ದು ಬಂದಿರಬೇಕು! ಅದೂ ಎಷ್ಟು ಖುಷಿ ಅಜ್ಜಿಗೆ, ಹಾಗೆ ಅವರನ್ನು ನೋಡುವ ನಮಗೂ ಕೂಡ ಅನ್ನಿಏನು ಅಜ್ಜಿ ಮನೇಲಿ ಸುಮ್ಮನೆ ಕೂರಬಾರದ? ಅಂದರೆ, ನೋಡು ನನ್ನ ಇಬ್ರು ಮಕ್ಕಳೂ ಇದ್ನೇ ಹೇಳ್ತಾರೆ, ಏನು ಮನೇಲಿರಬಾರದಾ? ನಾವು ದುಡಿತಿದ್ದೀವಲ್ಲಾ? ಯಾಕೆ ಕಷ್ಟಪಡಬೇಕು ಇನ್ನೂನು? ಅಂತ. ಒಬ್ಬ ಎಲೆಕ್ಟ್ರೀಶಿಯನ್, ಇನ್ನೊಬ್ಬ ಆಟೋ ಓಡಿಸ್ತಾನೆ, ವರ್ಷ ಸ್ವಂತ ಆಟೋ ಮಾಡ್ಬೇಕಂತಿದ್ದಾನೆ... ದಾರಿಯಲ್ಲಿ ಏನಾದ್ರು ಆದ್ರೆ ನಮಗೆ ಹೇಗೆ ಗೊತ್ತಾಗಬೇಕು. ಮನೇಲೆ ಅಂಗಡಿ ಮಾಡುವ? ಅಂತಾರೆ. ನನಗೆ ಹೊತ್ತು ಹೋಗ್ಬೇಕಲ್ವಾ? ಮತ್ತೆ ನೀವೆಲ್ಲ ನನಗೆ ಹೇಗೆ ಸಿಕ್ಬೇಕು? ಅನ್ನುತ್ತಾ ಗಂಟು ಬಿಚ್ಚಿ ಒಮ್ಮಲೇ ಸಿಟ್ಟಾದವರಂತೆ ಏನು ಮಾತಾಡಿಸಿ ಹಾಗೇ ಕಳಿಸ್ಬೇಕು ಅಂತಾನಾ? ಏನು ಕೊಡ್ಲಿ? ಅಂತಾರೆ, ಹರಿವೆಸೊಪ್ಪು ಮಾತ್ರ ಇದ್ದರೂ. ಅವರಿಗೆ ಎಲ್ಲೆಲ್ಲಿ ಏನೇನು  ಎಷ್ಟು ವ್ಯಾಪಾರ ಆಗುತ್ತೆ ಅಂತ ಚೆನ್ನಾಗಿ ಗೊತ್ತಿದೆ, ಆದರೂ ಹೊಸಬರೊಡನೆ ವ್ಯವಹರಿಸುವವರಂತೆ ಮತ್ತೊಮ್ಮೆ ಕೇಳುತ್ತಾರೆ. ಒಮ್ಮಮ್ಮೆ ಶಬರಿ ರಾಮನಿಗಾಗಿ ಕಾಡೆಲ್ಲ ಅಲೆದಾಡಿದ ಹಾಗೆ ಪೇಟೆಯ ಕಾಡಲ್ಲಿ ರಾಮನ ಹುಡುಕುವವಳಂತೆ ಕಾಣಿಸುತ್ತಾರೆ. ಕ್ಷಣದಲ್ಲೇ ನಮ್ಮ ಅಜ್ಜಿಯಂತೆಯೂ ಅನ್ನಿಸ ತೊಡಗುತ್ತಾರೆ. ನಿಜವಾಗಿಯೂ ಇವರು ಪಟ್ಟಣದ ಸುತ್ತಮುತ್ತಲಿನ ಮನೆಗಳ ಹಲವರಿಗೆ ಅಜ್ಜಿಯೂ, ಅಮ್ಮಳೂ, ಅತ್ತೆಯೂ ಆಗುತ್ತಾ, ಯಾರಿಗೂ ಸಿಗದೆಯೂ, ಸಿಕ್ಕಿಯೂ, ಬೇಸರಿಸದೆ, ಬೇಕು ಬೇಕಾದಲ್ಲಿ ಸರಿಯಾಗಿ ಸಲಹೆಗಳನ್ನು ಕೊಡುತ್ತಾ ಯಾಂತ್ರಿಕ ಬದುಕಿಗೆ ತನ್ನ ಮಾಂತ್ರಿಕ ಶಕ್ತಿಯಿಂದ ಕ್ಷಣ ಬಿಡುಗಡೆಗೊಳಿಸಿ ಬದುಕಿಗೆ ಬೇಕಾದ ಹುರುಪನ್ನು ನೀಡಿ ಮಾಯವಾಗುವ ಯಕ್ಷಿಣಿಯೆ.

ಜೀವನವಿಡೀ ಬದುಕಿದ ಈ ಹಣ್ಣಾದ ಅಜ್ಜಿಯರು ನಮ್ಮನ್ನೆಲ್ಲಾ ನಾಚಿಸುವಂತೆ ದಿನವೆಲ್ಲ ದುಡಿದು ಯಾರ ಹಂಗಿಗೂ ಸಿಗದೆ, ಸ್ವತಂತ್ರವಾಗಿ ಬದುಕುವ ಇವರು ಸಾವಿಗೇ ವಂಚಿಸುವ ತವಕದಲ್ಲಿ ಉಳಿದ ಬದುಕನ್ನು ಸಂಪೂರ್ಣವಾಗಿ ಬದುಕಲು ಪಣತೊಟ್ಟವರಂತೆ ಕಾಣುತ್ತಾರೆ.


ದಿಗ್ವಿಜಯ.

2 comments:

  1. waah!emotion ನ್ನ ಕರೆಕ್ಟ್ ಆಗಿ grasp ಮಾಡಿದ್ದೀರಿ. ಶ್ರೀಕಾಂತ್ ಪ್ರತೀ ರವಿವಾರ ಅದಕ್ಕೆ ಯಶವಂತಪುರ ಸಂತೆಗೆ ಹೋಗೋದು. ಶ್ರೀಕಾಂತ ಗೆ ಇಂತಹ ಅಜ್ಜಿಯರ ಮೇಲೆ ಎಷ್ಟು ಪ್ರೀತಿಯೋ ಅಷ್ಟೆ ಅವರಿಗೂ ಶ್ರೀಕಾಂತ ಅಂದ್ರೆ ಕಳಕಳಿ, ಮಗಾ ಹಿಂದಿನ ವಾರ ಒಯ್ದ ಸೊಪ್ಪು ವೈನಾಗಿತ್ತಾ'?ಅಂತೆಲ್ಲ ಕೇಳ್ತಾರೆ. ಆಕಸ್ಮಾತ್ ಊರಲ್ಲಿಲ್ಲದೇ ಆ ದಿನ ಸಂತೆ ಹೋಗದಿದ್ರೆ, ಹಿಂದಿನ ವಾರ ಯಾಕ್ ಬರಲಿಲ್ಲ ಮಗಾ ಅಂತ ವಿಚಾರಿಸ್ತ್ತಾರೆ.. . ಕೆಲವೂಮ್ಮೆ ಯಾವುದಾದರೂ ಹೊಸ ಸೊಪ್ಪನ್ನು ನೋಡಿ ಇದರ ಬಗ್ಗೆ ಗೊತ್ತಿಲ್ಲ ಅಂದ್ರೆ ಅದರ recipe ಕೂಡ 'ನಿಮ್ಮ ಹೆಂಡ್ರಿಗೆ ಹೇಳಿ ಮಾಡಿಸಿ' ಅಂತ ಹೇಳಿ ಕಳಿಸ್ತಾರೆ..:-) ಅಪರೂಪಕ್ಕೊಮ್ಮೆ i accompany him and enjoy their light hearted banter. yes they make this earth a better place and are an exmaple for all of us..good write up..
    malathi S

    ReplyDelete