Sunday, March 31, 2013

ನಾಟ್ಯದ ಹಾದಿ – ಆರನೇ ಹೆಜ್ಜೆ




ಕೂಡಿಯಾಟ್ಟಮ್ ನಲ್ಲಿ ವಾಚಿಕದ ಬಳಕೆ ಬಹಳ ಕಡಿಮೆ. ಆದರೆ ಬಳಸುವ ವಾಚಿಕವೂ ನಾಟ್ಯದ ಪರಿಣಾಮವನ್ನು ಹೆಚ್ಚಿಸಲಿಕ್ಕಾಗಿಯೇ ಇರುವಂಥದ್ದು.

ನಾನು ಒಮ್ಮೆ ಗುರುಗಳೊಂದಿಗೆ ನನ್ನ ನಾಟಕದ ಬಗ್ಗೆ ಹೇಳುತ್ತಾ ಅವರು ವಾಚಿಕ ಬೇಡ, ವಾಚಿಕವಿಲ್ಲದೇ ನಾಟಕ ಮಾಡು, ನನಗೆ ಕನ್ನಡ ಗೊತ್ತಿಲ್ಲ ಹಾಗಾಗಿ ನಿನ್ನ ಮಾತಿನ ಅರ್ಥ ಗೊತ್ತಿಲ್ಲದೆ ನಾನು ನಿನಗೆ ಹೇಗೆ ಹೇಳಿಕೊಡೋದು? ಅಂದರು. ನನಗೆ ಗುರುಗಳು ಇದೇನು ನನ್ನ ಪಠ್ಯದ ವಾಚಿಕದ ಬಗ್ಗೆ ಇಷ್ಟು  ಗಂಭೀರವಾಗಿ ಯೋಚಿಸುತ್ತಿದ್ದಾರೆ ಅಂತ ಯೋಚನೆ ಆಯಿತು. ಮತ್ತೊಂದು ದಿನ ಅವರಿಗೆ  ಕೂತ್ತು ಪ್ರದರ್ಷನ ಇತ್ತು. ಬೆಳಿಗ್ಗೆ ನಾನು ಹೋದಾಗ ಗುರುಗಳು ತಮ್ಮ ತಂದೆ ಹೇಳಿದ ಕೂತ್ತಿನ ರೆಕಾರ್ಡನ್ನು ಕೇಳುತ್ತಾ ಕೂತಿದ್ದರು.  ನಾನು ಹೋದದ್ದೇ ಅವರೇ ಮಾತಿಗೆ ತೊಡಗಿದರು.

ವಾಚಿಕ ಉಂಟಲ್ಲ  ಅದು ಬಹಳ ಕಷ್ಟದ್ದು. ಮಾತಾಡಿದ ಮೇಲೆ ಮುಗೀತು, ಮತ್ತೆ ಅದನ್ನು ಸರಿಮಾಡೋದಕ್ಕಾಗೋದಿಲ್ಲ, ಹಾಗಾಗಿ ಅದರ  ಅರ್ಥ, ಭಾವ, ಕಾಕು ಸ್ಪಷ್ಟವಾಗಿ ಇದ್ದಲ್ಲಿ ಮಾತ್ರ ಎಲ್ಲವೂ ಸರಿಯಾಗುತ್ತದೆ.  ಅಭಿನಯ ಹಾಗಲ್ಲ,  ಅಲ್ಲಿ ನಮ್ಮ ಅಭಿನಯದಿಂದ ಪ್ರೇಕ್ಷಕನಿಗೆ ಅವರವರ ಅನುಭವಕ್ಕೆ ಆಗುವಂತೆ ಅವರಿಗೆ ರಸಪ್ರಾಪ್ತಿಯಾಗುತ್ತದೆ. ಮಾತು ಬಂದಾಗ ಶಬ್ದಕ್ಕೆ ಅರ್ಥ ಅಂತ  ಇದೆಯಲ್ಲ ಹಾಗಾಗಿ ಅದು ಆಯಾ ಸನ್ನಿವೇಷಕ್ಕೆ ಬೇಕಾದ ಹಾಗೆ ನುಡಿಯುವಂತಾಗಬೇಕಲ್ಲ  ಅದು ಕಷ್ಟ. ಈಗ ಬಿಡು ಎಲ್ಲವೂ ಮಾತಿನಲ್ಲೇ ಆಗಿಬಿಡುತ್ತದೆ, ಅದಕ್ಕೆ ಅಭಿನಯ ಬೇಕಾಗಿಲ್ಲ…

ಅದಕ್ಕೇ ನಾನು ಹೇಳಿದ್ದು ನಿನಗೆ ನಿನ್ನ ನಾಟಕದಲ್ಲಿ ವಾಚಿಕ ಬೇಡ  ಅಂತ. ಕೂಡಿಯಾಟ್ಟಮ್ ನಲ್ಲಿ ಇಪ್ಪತ್ತನಾಲಕ್ಕು ರಾಗಗಳಿವೆ. ಇದನ್ನು ರಾಗ  ಅನ್ನೋದಕ್ಕೆ ಬರುವುದಿಲ್ಲ. ಸ್ವರ ಮಾದರಿಗಳು ಅನ್ನಬಹುದು. ಪ್ರತಿಯೊಂದು ಭಾವಕ್ಕೆ, ವಿಕಾರಕ್ಕೆ ಇಂಥದೇ ಸ್ವರಮಾದರಿಗಳಲ್ಲಿ ಶ್ಲೋಕಗಳನ್ನು ಹೇಳಬೇಕು ಅಂತ ಕ್ರಮ ಇದೆ.


ವಾಚಿಕಾಭಿನಯ ಎಂದಾಗ ನಾವಾಡುವ ವಾಚಿಕದಿಂದಲೇ ಅದರ ಅನುಭವ ರಸಿಕರಿಗಾಗಬೇಕು. ನಟನೆ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವನ್ನು ಒಳಗೊಡದ್ದು ಎಂದಾಗ ಪ್ರತೀ ವಿಭಾಗವೂ ಕೂಡಾ ಅಷ್ಟೇ ಸತ್ವಯುತವಾಗಿದ್ದಾಗ ಮಾತ್ರ ನಾಟ್ಯ ಅಥವ ನಾಟಕ ಅರ್ಥಪೂರ್ಣ ಅಥವಾ ಅನುಭವಪೂರ್ಣವಾಗಲು ಸಾಧ್ಯ. ಹಾಗಾಗಿಯೇ ಕೂಡಿಯಾಟ್ಟಮ್ ನಲ್ಲಿ ಪ್ರತಿಯೊಂದು ವಿಭಾಗವೂ ಅಷ್ಟೇ ಮುಖ್ಯ ಮತ್ತು ಸತ್ವಪೂರ್ಣವಾಗಿದೆ. ಅವರ ಆಂಗಿಕಾಭಿನಯ, ವೇಷಭೂಷ,  ಎಲ್ಲವೂ ಪರಿಣಾಮಕಾರಿಯಾದ ಬಳಕೆಯನ್ನು ಹೊಂದಿದೆ.

ಅಂಕದ ಅವಸಾನಕ್ಕೆ, ಅಂಕದ ಪ್ರಾರಂಭಕ್ಕೆ ಇಂಥದೇ ಸ್ವರ ಸಮುಚ್ಛಯದಲ್ಲಿ ಶ್ಲೋಕಗಳನ್ನು ಹೇಳಬೇಕು ಅಂತ ಕ್ರಮ ಇದೆ. ಮತ್ತೆ ನಾವು ಆಡುವುದು ಸಂಸ್ಕೃತವಾದರೂ ಕೂಡ ಅದು ನಾಟಕದ ನೇರ ಪಠ್ಯವೇ ಆದರೂ ಕೂಡಾ ಹೇಳುವ, ಉಚ್ಛರಿಸುವ ಕ್ರಮ ಬೇರೆ. ಹಾಗಾಗಿ ಸಂಸ್ಕೃತದ ವಿದ್ವಾಂಸರಿಗೆ ನಮ್ಮ ವಾಚಿಕ ಎಂದೂ ಸರಿ ಅನ್ನಿಸುವುದಿಲ್ಲ. ಕಾರಣ ಇಷ್ಟೆ- ಪಠ್ಯ ನಾಟಕದಲ್ಲಿ ಅಂದರೆ ರಂಗದಲ್ಲಿ ನುಡಿಯುವ ಕ್ರಮ ಬೇರೆ, ನಾಟಕದ ಓದಿನಲ್ಲಿ ನುಡಿಯುವ ಕ್ರಮ ಬೇರೆ. ಓದಿನಲ್ಲಿ ಓದುಗ ಪಠ್ಯವನ್ನು ಓದುತ್ತಿರುತ್ತಾನೆ, ಹಾಗಾಗಿ ಅಲ್ಲಿ ನಾಟಕ ಅವನ ಮನಸ್ಸಿನಲ್ಲಿ ನಡೆಯುತ್ತಿರುತ್ತದೆ. ಆದರೆ ರಂಗದ ಮೇಲೆ ಹಾಗಲ್ಲ ಆ ಪಾತ್ರ ಇಲ್ಲಿ  ಆ ಮಾತನ್ನ ನುಡಿಯುವಾಗ ಪಾತ್ರ ಆ ಸನ್ನಿವೇಷದಲ್ಲಿ ಬದುಕುತ್ತಿರುವುದರಿಂದ ಅಲ್ಲಿ ವಾಚಿಕದ ಅಭಿನಯ ಮುಖ್ಯ.
ಎಲ್ಲವೂ ಶೈಲೀಕೃತವಾಗಿ ಇರುವ ಕೂಡಿಯಾಟ್ಟಮ್ ನಲ್ಲಿ ವಾಚಿಕವೂ ಹಾಗೇ ಶೈಲೀಕೃತವೇ.  ಸ್ವರಗಳ ದೀರ್ಘ, ಒತ್ತಕ್ಷರಗಳನ್ನು ಎಳೆದು, ಒತ್ತಿ, ಅದರ ಭಾವಕ್ಕೆ ಪ್ರಾಮುಖ್ಯತೆ ನೀಡುವ ಕ್ರಮ ಅದು.

No comments:

Post a Comment