Sunday, September 15, 2013

ನಾಟ್ಯದ ಹಾದಿ-ಒಂಬತ್ತನೇ ಹೆಜ್ಜೆ

ಇತ್ತೀಚೆಗೆ ನಮ್ಮ ಗುರುಗಳು ಮತ್ತು ಅಮ್ಮನ್ನೂರು ಕುಟುಂಬದ ಕಲಾವಿದರು ಸೇರಿಕೊಂಡು ಭಾಸನ ಮಧ್ಯಮ ವ್ಯಾಯೋಗ ಏಕಾಂಕವನ್ನು ಕೂಡಿಯಾಟ್ಟಮ್ಮಿನ ಆಕಾರವನ್ನಿಟ್ಟುಕೊಂಡೇ ನಾಟಕವಾಗಿ ಅಭಿನಯಿಸುವ ಪ್ರಯತ್ನವನ್ನು ಮಾಡಿದ್ದರು. ಮೊದಲ ಪ್ರದರ್ಶನ ಎರಡು ದಿನದ ಆಟವಾಗಿತ್ತು. ಕೂಡಿಯಾಟ್ಟಮ್ ನಲ್ಲಿ ನಾಟಕಾವಧರಣ ಎಂಬುದೊಂದು ಕ್ರಮ ಇದೆ. ಅಲ್ಲಿ ನಾಟಕವನ್ನು ಪೂರ್ಣವಾಗಿ ಅಭಿನಯಿಸುವುದೇ ಮುಖ್ಯ. ಹಾಗಾಗಿ ಮೊದಲಬಾರಿಗೆ ಭಾಸನ ನಾಟಕವನ್ನು ತಯಾರಿ ಮಾಡುವಾಗ ನಡೆದ ಕೆಲವು ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡದ್ದನ್ನು ಇಲ್ಲಿ ಕನ್ನಡಕ್ಕೆ ಇಳಿಸಿ ಬರೆಯುತ್ತಿದ್ದೇನೆ. ರಂಗಭೂಮಿಯಲ್ಲಿ ಕೆಲಸ ಮಾಡುವ ನಮಗೆ ನಮ್ಮ ಭಾರತದ ಹಳೆಯ ರಂಗಪ್ರಕಾರದವರು ನಾಟಕಕ್ಕೆ ಬೇಕಾಗುವ ಸರಕನ್ನು ಹೇಗೆ ಒದಗಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳುವಲ್ಲಿ ಸಹಾಯವಾದೀತು ಎಂಬುದೊಂದು ಆಶೆ.
ಗುರುಗಳು ಈ ನಾಟಕದಲ್ಲಿ ಹಿಡಿಂಬೆಯ ಪಾತ್ರವನ್ನು ಅಭಿನಯಿಸಿದರು. ಕೂಡಿಯಾಟ್ಟಮ್ನಲ್ಲಿ ರಾಕ್ಷಸಿಯ ಪಾತ್ರಗಳನ್ನು ಹೆಚ್ಚಾಗಿ ಗಂಡಸರೇ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಶೂರ್ಪನಖಿ. (ಆ ಪಾತ್ರವೊಂದೇ ಸದ್ಯದಲ್ಲಿ ಕೂಡಿಯಾಟ್ಟಮ್ನಲ್ಲಿರುವ ರಾಕ್ಷಸಿಯ ಪಾತ್ರ.) ಅದು ಕೂಡ ಒಂದು ಥರದ ವಿಧೂಷಕನ ಪಾತ್ರದಂತೆ ಎರಡೂ ಜಾತಿಯ ಅಭಿನಯ ಕ್ರಮವನ್ನು ಒಳಗೊಂಡಿರುವಂಥಾದ್ದು.

ಕೂಡಿಯಾಟ್ಟಮಿನಲ್ಲಿ ವಿಧೂಷಕನಿಗೆ ಎರಡೂ ಭಾಷೆಯಲ್ಲಿ ಮಾತಾಡುವ ಅವಕಾಶ ಇದೆ. ಕೆಲವೊಮ್ಮೆ ಸಂಸ್ಕೃತ, ಪ್ರಾಕೃತ, ಮತ್ತು ಮಲೆಯಾಳಮ್ ಮೂರೂ ಭಾಷೆಯಲ್ಲಿ ಮಾತಾಡುವುದೂ ಉಂಟು. ಒಂದೇ ಶ್ಲೋಕವನ್ನು ಮೂರೂ ಭಾಷೆಯಲ್ಲೂ ವಾಚಿಸಿ ಅಭಿನಯಿಸುವುದೂ ಇದೆ. ಅದೇ ಕ್ರಮ ಶೂರ್ಪನಖಿಯ ಪಾತ್ರಕ್ಕೂ ಅನ್ವಯಿಸುತ್ತದೆ.

ಕೆಲವೊಮ್ಮೆ ರಾಮನ ಮಾತಿಗೂ ಶೂರ್ಪನಖಿ ಸ್ಪಂದಿಸುವುದಿದೆ. ರಾಮನು ಸೀತೆಗೆ “ದೇವಿ ಹೆದರಬೇಡ ಹೆದರಬೇಡ” ಅನ್ನುತ್ತಿದ್ದಂತೆ ಶೂರ್ಪನಖಿ ಮಲೆಯಾಳದಲ್ಲಿ “ಏನೂ ರಾಮ? ಸೀತೆಗೆ ಹೆದರಬೇಡ ಅನ್ನುತ್ತಿದ್ದೀಯಲ್ಲ! ಊಹೂ ಹೆದರಬೇಕು, ಹೆದರಲೇಬೇಕು” ಅನ್ನುತ್ತಾಳೆ. ಈ ಥರದ ಮುಖಾಮುಖಿ ವಿದೂಷಕನಿಗೆ ಮಾತ್ರ ಇರುವ ಸ್ವಾತಂತ್ರ. ಸುಭದ್ರಾ ಧನಂಜಯದ ಅರ್ಜುನನೊಡನೆ ಬರುವ ವಿದೂಷಕನೂ ಅರ್ಜುನನ ಶ್ಲೋಕಕ್ಕೆ ಬೇರೆಯದೇ ಅರ್ಥ ಸೃಷ್ಟಿಸುತ್ತಾನೆ.

ಶೂರ್ಪನಖಿಯ ಪಾತ್ರಕ್ಕೂ ಭಾಸನ ಹಿಡಿಂಬೆ ಪಾತ್ರಕ್ಕೂ ಬಹಳ ವ್ಯತ್ಯಾಸ ಇದೆ. ಶೂರ್ಪನಖಿ ಮೂಲತಃ ರಾಕ್ಷಸಿ, ಕುಟಿಲೆ, ಮಾಯಾವಿ. ಆದರೆ ಹಿಡಿಂಬೆ ಪಾತ್ರ ಹಾಗಲ್ಲ. ಅವಳು ರಾಕ್ಷಸಿಯೇ ಆದರೂ ಕೂಡ ಮುಖ್ಯವಾಗಿ ಅವಳೊಬ್ಬ ತಾಯಿ, ಸುಶೀಲೆ, ಸುಸಂಸ್ಕೃತೆ. ಭಾಸ ಅವಳು ರಾಕ್ಷಸಿಯೇ ಆದರೂ ಪತಿಗಾಗಿ ಕಾಯುತ್ತಿರುವ ಹೆಣ್ಣು ಎಂಬದನ್ನೂ ಮರೆತಿಲ್ಲ. ಹಾಗಾಗಿ ಇಲ್ಲಿ ಎರಡೂ ಬಹಳ ಮುಖ್ಯ. ಅವಳ ರಾಕ್ಷಸಿ ಸತ್ವವನ್ನು ಬಿಡದೆ ಅವಳ ತಾಯಿತನ, ಹೆಣ್ಣುತನವನ್ನು ತೋರಿಸಬೇಕಾದುದು ಮುಖ್ಯ, ಹಾಗಾಗಿ ನಾಟಕವನ್ನು ರಂಗಕ್ಕೆ ಅಳವಡಿಸುವ ಮೊದಲೇ ಪಂಡಿತರನ್ನು, ಕುಡಿಯಾಟ್ಟಮ್ ನ ಹಳೆಯ ಕಲಾವಿದರನ್ನೂ ಸೇರಿಸಿ ಇದರ ಬಗೆಗೆ ಒಂದು ಮಾತುಕತೆ ತೊಡಗಿಕೊಂಡೆವು. ಅಲ್ಲಿ ಚರ್ಚೆಯಲ್ಲಿ ಕೊನೆಗೂ ಬಂದ ನಿರ್ಧಾರ ಏನೆಂದರೆ ಇದನ್ನು ಗಂಡಸರೇ ಅಭಿನಯಿಸಬೇಕು. ಶೂರ್ಪನಖಿಯ ಪಾತ್ರವನ್ನೇ ತಳಹದಿಯಾಗಿಸಿ ಅದರ ಮೇಲೆ ಹಿಡಿಂಬೆಯ ಪಾತ್ರವನ್ನು ಕಟ್ಟಬೇಕು ಎನ್ನುವುದು. ಹಾಗಾಗಿ ಪಾತ್ರದ ಹೊರಮೈ ಒಂದು ಥರದಲ್ಲಿ ಸ್ಪಷ್ಟವಾಗಿ ಬಿಟ್ಟಿತು.

ನಾನು ಶೂರ್ಪನಖಿ ಪಾತ್ರವನ್ನು ಬಹಳಷ್ಟು ಸಲ ಮಾಡಿದ್ದೇನೆ. ಹಾಗಾಗಿ ನಾನು ಏನು ಯೋಚಿಸಿದರೂ ಶೂರ್ಪನಖಿಯ ಪಾತ್ರವೇ ಕಣ್ಣಿಗೆ ಬರುತಿತ್ತು. ಒಮ್ಮೆ ಮಾಡಿದ ಪಾತ್ರವನ್ನು ಮತ್ತೊಮ್ಮೆ ಮಾಡುವುದು ಸುಲಭ. ಆದರೆ ಅದ ರೀತಿಯ ಬೇರೆ ಪಾತ್ರವನ್ನು ಮಾಡುವ ಸಂದರ್ಭ ಬಂದಾಗ ಬಹಳ ಕಷ್ಟವಾಗುತ್ತದೆ. ಹೊರಮೈ ಅಂದರೆ ಪಾತ್ರ ಈ ಥರದ್ದು ಅಂತ ಹೋಲಿಕೆ ಬಂದಾಗಲೆಲ್ಲಾ ಆ ಸುಲಭ ಅನುಕರಣೆಗೆ ಸಿಕ್ಕಿ ನಿಜವಾಗಿಯೂ ಇದ್ದಿರಬಹುದಾದ ಪಾತ್ರದ ಸತ್ವವನ್ನ ಹುಡುಕದೇ ಹೋಗುವ ಸಂದರ್ಭವೇ ಹೆಚ್ಚು.  ಹಾಗಾಗಿ ಮೊದಲು ನಾನು ಮಾಡಿದ ಕೆಲಸ ಏನಂದರೆ  ಶೂರ್ಪನಖಿಯ ಪಾತ್ರವನ್ನೇ ಹೊಸದಾಗಿ ಸೃಷ್ಟಿಸಿಕೊಳ್ಳುವುದಾದರೆ ಹೇಗೆ ಮಾಡುತ್ತಿದ್ದೆವು ಎಂದು ಯೋಚಿಸುತ್ತಾ ಹೊರಡುವುದು. ಅದೇ ರೀತಿ ಹಿಡಿಂಬೆಯನ್ನೂ ಸೃಷ್ಟಿಸಿ ಕೊಳ್ಳವುದು.

ಹಿಡಿಂಬೆಯ ಪ್ರವೇಶ ಹೇಗೆ ಎಂಬಲ್ಲಿಂದ ಶುರು ಮಾಡಿದೆವು. ಕೂಡಿಯಾಟ್ಟಮ್ನಲ್ಲಿ ಉತ್ಖಟ ಎನ್ನುವ ಕ್ರಮವೊಂದಿದೆ. ಅಂದರೆ ಅಲ್ಲಿ ಚಾರಿ(ನಡೆಯುವ ಕ್ರಮ), ಅಭಿನಯ ಮತ್ತು ವಾಚಿಕ, ಪ್ರವೇಷ ಎಲ್ಲವೂ ಒಟ್ಟಿಗೆ  ನಡೆಯುತ್ತದೆ. ಹಾಗಾಗಿ ಹಿಡಿಂಬೆಯು ತನ್ನ ವೃತದ ಭಾಗವಾಗಿ ಬೇಕಾದ ಮನುಷ್ಯನ ಹುಡುಕಾಟಕ್ಕೆ ಮಗನ ಕಳುಹಿ ಉತ್ಸಾಹದಿಂದ ಕಾಯುವ ವಾಚಿಕದ ಭಾಗವನ್ನು ವಾಚಿಸುತ್ತಾ ಚಾರಿ ಅಂದರೆ ರಾಕ್ಷಸಿಯ ಪ್ರವೇಷದ ನಡೆಯೊಂದಿಗೆ ರಂಗ ಪ್ರವೇಷ ಮಾಡಿದೆ. ಇದಾದನಂತರ ಸ್ತೋಭಮ್! ಅಂದರೆ ಪಾತ್ರದ ವಿಷೇಶ ನಡತೆಯನ್ನ ತೋರಿಸುವ ಭಾಗ. ಇಲ್ಲಿಯೂ ಕೂಡ ಅವಳ ರಾಕ್ಷಸಿತನವನ್ನು ಬಿಟ್ಟು ಮಗನಿಗಾಗಿ ಕಾಯುವ, ಗಂಡನ ಬರುವಿಕೆಯನ್ನು ಎದುರು ನೋಡುತ್ತಿರುವ ಹೆಂಗಸಿನಂತೆ ಚಿತ್ರಿಸಿಕೊಂಡೆ. ವೇಷದಲ್ಲೇ ರಾಕ್ಷಸಿ ಎಂದು ಕಾಣಿಸಿದ ಮೇಲೆ ಮತ್ತೆ ಅದನ್ನು ಅಭಿನಯಿಸಬೇಕಾಗಿಲ್ಲವಲ್ಲ.

ಒಂದು ಪಾತ್ರವನ್ನು ಅಭಿನಯಿಸುವುದು ಅಂದರೆ ಮತ್ತೆ ಅದಕ್ಕೆ ಜೀವ ಕೊಡುವುದು ಅಂದಾಗ ಅದು ಬಹಳ ದೊಡ್ಡ ಕೆಲಸ. ನಾಟಕಕಾರನ ಕಾಣ್ಕೆ, ನಮ್ಮ ಅನಿಸಿಕೆ, ನಿರ್ದೇಶಕನ ಕಲ್ಪನೆ, ಮತ್ತು ನಮ್ಮ ಸಮಕಾಲೀನ ಸಮಾಜ ಎಲ್ಲವೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೆಲಸ ಮಾಡುತ್ತದೆ.


No comments:

Post a Comment