ಕವಿಗಳು
ಕಲೀಲ್ ಗಿಬ್ರಾನ್
ನಾಲ್ಕು ಮಂದಿ ಕವಿಗಳು ತುಂಬಿದ ಮದ್ಯ ಪಾತ್ರೆಯ ಮೇಜಿನ ಸುತ್ತೂ ಕುಳಿತಿದ್ದರು.
ಮೊದಲ ಕವಿ ನುಡಿದ
"ಪಚ್ಚೆಕಾನನದ ಮೇಲೆ
ಆಗಸದ ಆ ಅವಕಾಶದಲ್ಲಿ
ತೇಲುತ್ತಿರುವ ಹಕ್ಕಿಗಳ ಮುಗಿಲಂತೆ
ಈ ಮಧುವಿನ ಸುವಾಸನೆಯನ್ನು
ನನ್ನ ನಡುಗಣ್ಣಲ್ಲಿ ಕಾಣುತ್ತಿರುವೆ ನಾನು."
ತಲೆಯೆತ್ತಿದ ಎರಡನೆಯ ಕವಿ ನುಡಿದ
" ನನ್ನ ಒಳಗಿವಿಯಿಂದ ಕೇಳಬಲ್ಲೆ ನಾನು
ಆ ಮುಗಿಲ ಹಕ್ಕಿಗಳ ಗಾನ.
ಆ ಗಾನದ ನಾದ ತನ್ನ ಪಕಳೆಗಳಲ್ಲಿ
ದುಂಬಿಯನು ಸೆರೆಹಿಡಿದ ಗುಲಾಬಿಯ ಹಾಗೆ
ನನ್ನ ಹೃದಯವನು ಬಂಧಿಸಿಹುದು"
ಕಣ್ಣು ಮುಚ್ಚಿದ ಮೂರನೆಯ ಕವಿ ಆಕಾಶಕ್ಕೆ ಕೈ ಚಾಚಿ ಹೇಳಿದ
"ನನ್ನ ಬೆರಳುಗಳಲ್ಲಿ ಅದನ್ನು ಸೋಕಬಲ್ಲೆ,
ನಿದ್ದೆ ಹೋದ ಯಕ್ಷಿಣಿಯ ಉಸಿರಂತೆ
ಅವು ನನ್ನ ತಾಕುವುದ ಎಣಿಸಬಲ್ಲೆ."
ನಾಲ್ಕನೆಯ ಕವಿ ಮದ್ಯ ಪಾತ್ರೆಯನ್ನು ಎತ್ತಿ ಹಿಡಿದು ನಿಂತು ಹೇಳಿದ
"ಅಯ್ಯೋ ಗೆಳೆಯರೇ! ನನ್ನ ದೃಷ್ಟಿ, ಕಿವಿ ಮತ್ತು ಸ್ಪರ್ಷವೋ ಬಲು ಮಂದ. ಈ ಮಧುವಿನ ಗಂಧವನ್ನು ನಾನು ಕಾಣಲಾರೆ, ಅದರ ಗೀತವನ್ನೂ ಕೇಳಲಾರೆ ಮತ್ತು ಅದರ ರೆಕ್ಕೆ ಬಡಿತದ ಸ್ಪರ್ಷವನ್ನೂ ಅರಿಯಲಾರೆ. ಆದರೆ ಈ ಮಧುವನ್ನು ಮಧುವಾಗಿ ಅಷ್ಟೆ ತಿಳಿಯುವೆ ನಾನು. ಹಾಗಾಗಿ ನಾನು ಇದನ್ನು ಈಗ ಕುಡಿಯಲೇ ಬೇಕು. ಆ ಮಧು ನನ್ನ ಇಂದ್ರಿಯಗಳನ್ನು ಚುರುಕಾಗಿಸಿ ನಿಮ್ಮ ಆಮೋದದ ಎತ್ತರಕ್ಕೆ ನನ್ನನ್ನೂ ಒಯ್ಯಬಹುದು ಎಂದು ಆಶಿಸೋಣ."
ಹೀಗೆಂದವನೇ ಆ ಮಧು ಪಾತ್ರೆಯನ್ನು ಎತ್ತಿ ಕೊನೆಯ ತೊಟ್ಟೂ ಬಿಡದೆ ಕುಡಿದುಬಿಟ್ಟ.
ಬಿಟ್ಟ ಬಾಯಿ ಬಿಟ್ಟಂತೆ ಆ ಮೂರು ಕವಿಗಳೂ ಇವನನ್ನೇ ದಿಟ್ಟಿಸಿದರು. ಅವರೆಲ್ಲರ ಕಣ್ಣಲ್ಲಿ ಹೆಸರಿಸಲಾಗದಂಥ ದ್ವೇಷದ ನೀರಡಿಕೆ ಸೂಸುತ್ತಿತ್ತು.
No comments:
Post a Comment