ಅಭಿನಯ ಅನ್ನುವ ಸಂಸ್ಥೆ ಸುಮಾರು ೨೦ ವರ್ಷಗಳಿಂದ ಕೇರಳದಲ್ಲಿ ನಾಟಕಗಳನ್ನ ಮಾಡಿಕೊಂಡು ನಡೆಯುತ್ತಿರುವ ಸಂಸ್ಥೆ. ತಂಡದ ರುವಾರಿಗಳು ಡಿ. ರಘುತ್ತಮನ್ ಅವರು ತ್ರಿಚೂರು ಸ್ಕೂಲ್ ಆಫ್ ಡ್ರಾಮದಲ್ಲಿ ಕಲಿತು ಬಂದವರು. ತಿರುವನಂತಪುರಮ್ ನಲ್ಲಿ ಅಭಿನಯ ಎಂಬ ಸಂಸ್ಥೆ ಕಟ್ಟಿ ಅನೇಕ ಉತ್ತಮ ನಾಟಕಗಳನ್ನೂ, ವಿಭಿನ್ನ ಪ್ರಯೋಗಗಳನ್ನು ತಯಾರಿಸಿ ದೇಶದಾದ್ಯಂತ ಪ್ರದರ್ಶನಗಳನ್ನು ಮಾಡಿದವರು, ಮಾಡುತ್ತಿರುವವರು.
ಸದ್ಯ ಅಭಿನಯ ತಂಡವು ಫ್ರಾನ್ಸಿನ ಫೂಟ್ಸ್ ಬಾರ್ನ್ ಥಿಯೇಟರ್ ಕಂಪನಿಯ ಸಹಯೋಗದೊಂದಿಗೆ ನಾಟಕದ ತಾಲೀಮನ್ನು ನಡೆಸುತ್ತಿದ್ದಾರೆ. ಹಾಗಾಗಿ ಕೂಡಿಯಾಟ್ಟಮ್ ನ ಅಭಿನಯದ ಪದ್ಧತಿ, ಮತ್ತು ನಮ್ಮ ದೇಶದ ಅತಿ ಪ್ರಾಚೀನ ಅಭಿನಯದ ಮಾದರಿ ಅವರಿಗೂ ಪರಿಚಯವಾಗಲಿ ಎಂಬ ಕಾರಣಕ್ಕೆ ಒಂದು ಸಂಜೆ ಅಲ್ಲಿ ನಮ್ಮ ಕೂಡಿಯಾಟ್ಟಮ್ ಗುರುಗಳ ಅಭಿನಯ ಪ್ರಾತ್ಯಕ್ಷಿಕೆಯನ್ನು ರಘುತ್ತಮನ್ ಅವರು ಏರ್ಪಡಿಸಿದ್ದರು.
ನಾನೂ ಕೂಡ ಅಪರೂಪಕ್ಕೆ ಸಿಗುವ ಇಂಥಾ ಅವಕಾಶವನ್ನು ಬಿಡದೆ ಅದನ್ನು ನೋಡಲು ಅಭಿನಯದ ಸ್ಥಳಕ್ಕೆ ಹೊರಟೆ. ಪೇಟೆಯ ಗೌಜು ಗದ್ದಲದಿಂದ ತುಂಬ ದೂರದಲ್ಲಿ ಈ ಸಂಸ್ಥೆಯಿರುವುದು. ತಿರುವನಂತಪುರಮ್ ನಿಂದ ಸುಮಾರು ೧೩ ಕಿಲೋ ಮೀಟರ್ ದೂರದಲ್ಲಿ. ಬೆಟ್ಟ, ಗುಡ್ಡದಂಥಹ ಪರಿಸರದಲ್ಲಿ ರಬ್ಬರ್ ತೋಟಗಳ ಮದ್ಯೆ ದುತ್ತೆಂದು ಒಂದು ಸಣ್ಣ ಬೋರ್ಡ್ ಕಾಣುತ್ತದೆ. ಆ ತಿರುವಿನಲ್ಲಿ ತಿರುಗಿ ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರ ಹೋದರೆ ಒಂದು ಎತ್ತರವಾದ ಕೋಣೆ ಅಥವಾ ಶೆಡ್ ಸಿಗುತ್ತದೆ. ಇದುವೆ ಅಭಿನಯದ ನಾಟಕಗಳ ತಯಾರಿಗೆ ಬೇಕಾಗಿ ಕಟ್ಟಿರುವ ಸ್ಥಳ. ಅದೇ ಕೋಣೆಯ ಬಲಬದಿಯಲ್ಲಿ ಚಿಕ್ಕದೊಂದು ಆಫೀಸು, ಎಡಬದಿಯಲ್ಲಿ ಅಡುಗೆ ಕೋಣೆ, ಬಿಟ್ಟರೆ ವಿಶಾಲವಾದ ಜಾಗವೆಲ್ಲ ನಾಟಕದ ತಾಲೀಮಿಗೇ ಮೀಸಲು. ರಿಹರ್ಸಲ್ ಮಾಡಲು ಹೇಳಿ ಮಾಡಿಸಿದಂತ ಜಾಗ. ರಬ್ಬರ್ ತೋಟದ ನಡುವೆ ವಿಶಾಲವಾಗಿ, ಎತ್ತರವಾಗಿ, ಯಾವುದೇ ರೀತಿಯಲ್ಲಿ ಮಾರ್ಪಾಡಿಸಲು ಸಾದ್ಯವಿರುವ ಕೋಣೆ, ಯಾವುದೇ ನಿರ್ಬಂಧವಿಲ್ಲದ ನಿರ್ಜನ, ನೀರವ ಸ್ಥಳ...
ಅಲ್ಲಿಗೆ ಹೋದದ್ದೆ ರಘುತ್ತಮನ್ ನನ್ನನ್ನು ನೋಡಿ "ಓಹ್ ಬಂದಿಯಾ ಅಂತೂ... ನೋಡು ಇದು ಅಭಿನಯ. ಈ ಬೆಟ್ಟದ ಈ ತಲೆಯಿಂದ ಇದರ ಬುಡದವರೆಗೂ ನಮ್ಮದೇ. ೩ ಎಕರೆ ಇದೆ. ಸದ್ಯ ರಬ್ಬರ್ ಹಾಕಿದೆ, ಇನ್ನು ಇದನ್ನ ನಿಮ್ಮ ಹೆಗ್ಗೋಡಿನ ಥರ ಮಾಡಬೇಕು... " ಅಂತ ಕನಸನ್ನು ಹೇಳಿದರು. ನಿಜಕ್ಕೂ ಜಾಗ ತುಂಬಾ ಚೆನ್ನಾಗಿದೆ, ಬೆಟ್ಟದ ಮೇಲೆ ಈ ಕೊಠಡಿ, ಆಫೀಸು. ಒಳಗಡೆ ಒಂದು ಅರ್ಧವನ್ನು ಮರದ ಹಲಗೆ ಹಾಕಿಸಿ ರಂಗಸ್ಥಳ ಮಾಡಿದ್ದರು. ಉಳಿದರ್ಧ ಹಾಗೇ ಬಿಟ್ಟಿದ್ದರು. ಆ ಉಳಿದರ್ಧದಲ್ಲಿ ಫ್ರಾನ್ಸಿನಿಂದ ಬಂದ ನಟರೊಡನೆ ನಮ್ಮ, "ತಕತಕಿಟ ತಕತಕಿಟ" ಆಟವಾಡುತಿತ್ತು. ಅಂದರೆ ಅವರು ನಮ್ಮ ೫ ಮಾತ್ರೆಯ ತಾಳವನ್ನು ಮೂರೂ ಕಾಲದಲ್ಲಿ ಹೇಳುವ ಕ್ರಮವನ್ನು ಕಲಿಯುವುದರಲ್ಲಿ ತೊಡಗಿಕೊಂಡಿದ್ದರು. ಅದಕ್ಕೆ ಕೇರಳದ ರಂಗ ಸಂಗೀತಗಾರ ಚಂದ್ರನ್ ಅವರು ಕಂಜರದಲ್ಲಿ ಸಾತ್ ಕೊಡುತ್ತಾ ಅವರನ್ನು ಸರಿಪಡಿಸುತ್ತಿದ್ದರು.
೬.೩೦ಕ್ಕೆ ರಘುತ್ತಮನ್ ಅವರು ಕೂಡಿಯಾಟ್ಟಮ್ ನ ಸಣ್ಣ ಪರಿಚಯ ಮಾಡಿ ಪ್ರಾತ್ಯಕ್ಷಿಕೆಗೆ ಚಾಲನೆ ಕೊಟ್ಟರು. ಮೊದಲು ಮಿಳಾವ್ ವಾದಕರು ರಂಗಕ್ಕೆ ಬಂದು ದೀಪವನ್ನು ಹಚ್ಚಿ ಪೂರ್ವರಂಗದ ಕ್ರಿಯೆಗಳನ್ನು ಮಾಡಿ ರಂಗಕ್ಕೆ ನಟನನ್ನು ಆಹ್ವಾನಿಸಿದರು. ಗುರುಗಳು ಕೂಡಿಯಾಟ್ಟಮ್ ಶೈಲಿಯ ರೇಖೆಗಳು ಕಾಣಲು ಬೇಕಾಗುವಷ್ಟೆ ಆಭರಣಗಳನ್ನು, ವಸ್ತ್ರವನ್ನು ತೊಟ್ಟು, ಹುಬ್ಬು, ಕಣ್ಣುಗಳಿಗೆ ಕಾಡಿಗೆ, ತುಟಿಗೆ ಕೆಂಪು, ಹಣೆಗೊಂದು ಕೆಂಪು ಬಣ್ಣವನ್ನು ಬರೆದು ಮುಖಕ್ಕೆ ತಾವರೆ ಹೂವಿನಂತಿರುವ ಗೊಂಡೆಯುಳ್ಳ ಹೆಗಲುವಸ್ತ್ರದ ಮರೆಯೊಡನೆ ಬಂದು ಮಿಳಾವಿಗೆ, ದೀಪಕ್ಕೆ, ರಂಗಕ್ಕೆ ಕೊನೆಗೆ ಪ್ರೇಕ್ಷಕರಿಗೆ ನಮಿಸಿ ರಂಗದ ಮುಂಬಾಗದಲ್ಲಿಟ್ಟಿದ್ದ ಮರದ ಸ್ಟೂಲ್ ಮೇಲೆ ಕುಳಿತರು. ದೂರದಲ್ಲಿ ಕುಳಿತಿದ್ದ ನಮ್ಮನ್ನು ನೋಡಿ ಇನ್ನೂ ಹತ್ತಿರಕ್ಕೆ ಬನ್ನಿ ಅಂತ ಕರೆದರು.
ಮೊದಲಿಗೆ ೨೪ ಮುದ್ರೆಗಳನ್ನು ಒಂದೊಂದಾಗಿ ತೋರಿಸಿದರು. ನಂತರ ಒಂದೊಂದು ಮುದ್ರೆಗಳ ಉಪಯೋಗಗಳನ್ನು ಉದಾಹರಿಸ ತೊಡಗಿದರು. ನಂತರ ಪ್ರತೀ ಮುದ್ರೆಯ ಒಂದೊಂದು ಉಪಯೋಗದ ಉದಾಹರಣೆಗಳನ್ನು ತೋರಿಸಿದರು. ನಂತರ ಇದೇ ಮುದ್ರೆಗಳಿಂದ ವಾಕ್ಯರಚಿಸುವುದು ಹೇಗೆ ಎಂದು ತೋರಿಸಿದರು. "ನಾನು ಇಲ್ಲಿ ತುಂಬಾ ಉರಿಯನ್ನು ಅನುಭವಿಸುತ್ತಿದ್ದೇನೆ" ಎನ್ನುವ ವಾಕ್ಯವನ್ನು ಅಭಿನಯಿಸಬೇಕಾರೆ ಪ್ರತೀ ಶಬ್ಧಕ್ಕೂ ಮುದ್ರೆಗಳಿವೆ ಅಂತ ಒಂದೊಂದನ್ನೇ ಬಿಡಿಸಿ ತೋರಿಸಿದರು. ಆಮೇಲೆ "ಇಲ್ಲಿ ನಾನು ಅನುಭವಿಸುತ್ತಿದ್ದೇನೆ ಅನ್ನೋದು ಅಷ್ಟು ಮುಖ್ಯವಲ್ಲ. ಉರಿ ಅನುಭಿಸ್ತಿರೋದು ಅದು ಮುಖ್ಯ ಅದನ್ನ ತೋರಿಸಿ ಆಮೇಲೆ ಅನುಭವಿಸುತ್ತಿರೋದನ್ನೂ ಅಭಿನಯಿಸ್ಬೇಕು..." ಹೀಗೆ ಪ್ರತಿಯೊಂದನ್ನೂ ಬಿಡಸಿ ಬಿಡಿಸಿ ಹೇಳಿ ಮಾಡಿತೋರಿಸಿದರು.
ಅದಾದ ನಂತರ ಭಾವಾಭಿನಯ. "ಇಲ್ಲಿ ನನಗೆ ಒಂದು ಭಾವದಿಂದ ಮತ್ತೊಂದು ಭಾವಕ್ಕೆ ಹೋಗಲು ಸಮಯ ಬೇಕಾಗುತ್ತದೆ. ಯಾಕೆಂದರೆ ಪ್ರತಿಯೊಂದು ಭಾವಕಕ್ಕೂ ಅದರದ್ದೇ ಆದ ಸ್ವಭಾವ, ಉಸಿರಿನ ಕ್ರಮ, ದೇಹ, ಮನಸ್ಸು ಬೇರೆ ಬೇರೆ, ಆ ಸ್ಥಿತಿಗೆ ಹೋಗಲು ಸಮಯ ಬೇಕಾಗುತ್ತದೆ. ನಾಟಕದಲ್ಲೋ, ನಮ್ಮ ಕೂಡಿಯಾಟ್ಟಮ್‌ನಲ್ಲೋ ಭಾವ ಎಷ್ಟು ಬೇಗಬೇಕಾದರೂ ಬದಲಾಗಬಲ್ಲದು. ಯಾಂಕೆಂದರೆ ಅಲ್ಲಿ ನಿಮಗೆ ಸ್ಪಷ್ಟವಾದ ವಿಭಾವಗಳ ಸರಣಿ ಇದೆ, ಹಾಗಾಗಿ ಸಂಚಾರಿಗಳವೆ. ಆದರೆ ಈಗ ನಾನು ಇಲ್ಲಿ ಪ್ರಾತ್ಯಕ್ಷಿಕೆ ಮಾಡುವಾಗ ಕೂಡಲೇ ಬದಲಾಗುವುದು ಕಷ್ಟ. ಅಲ್ಲದೇ ಅಷ್ಟೂ ಭಾವಗಳನ್ನು ಸ್ಪಷ್ಟವಾಗಿ ಅದರ ತೀವ್ರ ಅವಸ್ತೆಗೆ ಮುಟ್ಟಲಾಗದೆಯೂ ಇರಬಹುದು". ಅಂತ ಹೇಳಿ ಅಭಿನಯಿಸಿ ತೋರಿಸಿದರು.
ನಂತರ ಕೈಲಾಸೋದ್ಧರಣದ ಒಂದು ಚಿಕ್ಕ ಭಾಗವನ್ನು ಮತ್ತು ಜಿಂಕೆಯ ಮರಿ ತಪೋವನದಲ್ಲಿ ಹುಲಿಯ ಹಾಲನ್ನು ಕುಡಿಯುವ ಸನ್ನಿವೇಷವನ್ನು ಶ್ಲೋಕದ ವಾಚಿಕಾಭಿನಯದೊಂದಿಗೆ ಅಭಿನಯಿಸಿ ನಂತರ ಅದನ್ನು ವಿಸ್ತರಿಸಿ ಅಭಿನಯಿಸಿ ತೋರಿಸಿದರು. ಜಿಂಕೆಯ ಮರಿ ಹುಲಿಯ ಹಾಲನ್ನು ಕುಡಿಯುವಾಗ ಹಾಲು ಕೊಡದಿದ್ದನ್ನು ನೋಡಿ ತಾಯಿಯೆಂದೇ ಗಣಿಸಿ ತಲೆಯಲ್ಲಿ ಹುಲಿಯ ಎದೆಗೆ ಗುದ್ದುತ್ತದೆ, ಹುಲಿ ನೋವಿನಲ್ಲಿ ಒಮ್ಮೆ ಗರ್ಜಿಸುತ್ತದೆ, ಮರಿ ಹೆದರಿ ಓಡುತ್ತದೆ, ಮತ್ತೆ ಬಂದು ಹಾಲು ಕುಡಿಯುತ್ತದೆ... ಹೀಗೆ ಇಲ್ಲಿ ಅದ್ಭುತ, ಸಂತೋಷ, ಭಯ... ಬಹಳ ಚೆನ್ನಾಗಿ ಅಭಿನಯಿಸಿ ತೋರಿಸಿದರು.
ಫೂಟ್ಸಬಾರ್ನ್ ಕಂಪನಿಯ ನಟರು ಬಹಳ ವರ್ಷಗಳಿಂದ ನಾಟಕಗಳನ್ನು ಮಾಡುತ್ತ, ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಅಲ್ಲದೆ ನಮ್ಮ ಭಾರತದ ನಟರೂ ಕೂಡ ಅವರೊಂದಿಗೆ ಕೆಲಸ ಮಾಡಿದ್ದಾರೆ. ಅವರೂ ಕೂಡ ನಮ್ಮೊಂದಿಗೆ ಕುಳಿತು ೨ ಗಂಟೆ ಈ ಪ್ರಾತ್ಯಕ್ಷಿಕೆಯನ್ನು ನೋಡಿ ಅಸ್ವಾದಿಸಿದರು. ಮಾತ್ರವಲ್ಲ ತಮಗೆ ಅನಿಸಿದ್ದನ್ನ ಹೇಳುತ್ತ, ಕೇಳುತ್ತಾ ಅಲ್ಲಿ ನಟ, ಪ್ರೇಕ್ಷಕ ಅನ್ನುವ ಯಾವುದೂ ಇಲ್ಲದೆ ಗುರುಗಳೊಂದಿಗೆ ಚರ್ಚೆ ಮಾಡುತ್ತಾ ಗುರುಗಳು ಕೂಡಾ ತಮಗೆ ಗೊತ್ತಿರುವುದನ್ನು ನಮಗೆ ತಲುಪಿಸಲು ತುಂಬಾ ನಿಧಾನವಾಗಿ, ಅಷ್ಟೇ ಸ್ಪಷ್ಟವಾಗಿ ತೋರಿಸಿಕೊಡುತ್ತಿದ್ದರು. ಕೂಡಿಯಾಟ್ಟಮ್ ಪ್ರಕಾರವನ್ನು ಇನ್ನಷ್ಟು ತಿಳಿದುಕೊಳ್ಳಲು, ನಟನನ್ನು ಬಹಳ ಹತ್ತಿರದಿಂದ ನೋಡುತ್ತಾ ಅಭಿನಯಕ್ಕೆ ಬೇಕಾಗುವ ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳಲು ಬಹಳ ಸಹಾಯ ಮಾಡಿದ ಅವಕಾಶ ಈ "ಅಭಿನಯ"ದ ಸಂಜೆ.
ಪ್ರಾತ್ಯಕ್ಷಿಕೆಯ ಸಣ್ಣದೊಂದು ತುಣುಕು - ಚಂದ್ರೋದಯ
ರಂಗಭೂಮಿಯ ಸಾಧ್ಯತೆಗಳ ಮತ್ತು ಅಭಿನಯ ಮಾದರಿಗಳ ಸೂಕ್ಷ್ಮಗಳನ್ನು ತಿಳಿದುಕೊಳ್ಳುವುದಕ್ಕೆ ಇಷ್ಟು ಆಪ್ತವಾದ ಪ್ರಾತ್ಯಕ್ಷಿಕೆಗಳು ಮತ್ತು ಸಂವಾದಗಳು ಬಹಳ ಅಗತ್ಯ.


No comments:
Post a Comment