Saturday, January 21, 2012

ಗುಳ್ಳೆ


ಕಥೆಯ ಆರಂಭದ ನಾಂದಿ ಸಂಗೀತ

ಧುತ್ತೆಂದು ಎದುರಾದ ಆ ಅಪಘಾತ ದಿವಿಯ ಪಾಲಿಗೆ ಊಹೆಗೂ ಮೀರಿದ್ದಾಗಿತ್ತು. "ಹಾಳಾದ ಈ ಹಳ್ಳೀಲಿ ಏನೇನೂ ಬದಲಾಗಿಲ್ಲ... ಥತ್" ಎಂದು ಮನಸ್ಸಿನಲ್ಲೇ ಒದರಿಕೊಳ್ಳುತ್ತಾ ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಸರು ನೀರು ಹರಿಯುತ್ತಿದ್ದ ಆ ತೋಡಿನೊಳಕ್ಕೆ ಕೈಚಾಚಿ ಅಂಗಿಯ ಉದ್ದ ತೋಳಿಗೆ ಕೆಸರು ತಾಗದಂತೆ ಕುಕ್ಕುಟ ನೃತ್ಯ ಮಾಡುತ್ತಾ ಮುಳುಗಿದ್ದ ಮೊಬೈಲ್ ಎತ್ತಿಕೊಳ್ಳಲು ಹೋಗಿ ಮುಗ್ಗರಿಸಿ ಹೇಗೋ ಸಾವರಿಸಿಕೊಂಡು ಮೊಣಕಾಲುಗಳಿಗೆ ಕೆಸರು ಮೆತ್ತಿಕೊಂಡು ಮೊಬೈಲ್ ಹಿಡಿದು ಮೇಲೆದ್ದ. ಕೆಸರು ತುಂಬಿ ಮಬ್ಬಾಗಿದ್ದ ಮೊಬೈಲನ ಕಲರ್ ಸ್ಕ್ರೀನ್ ಜೀವದ ಯಾವ ಸುಳಿವನ್ನೂ ತೋರದಿದ್ದಾಗ ಕೈಲಾಗದ ಆತ ಇದಕ್ಕಿಂತ ದೊಡ್ಡ ಬೇರಾವ ವಿನಾಶವೂ ಸಂಭವಿಸಿದ್ದಿಲ್ಲ ಎನ್ನುವಂತೆ ಮೊಬೈಲನ್ನು ತಾರಾಮಾರು ತಲೆಕೆಳಗೆ ಬುಡುಬುಡಿಕೆ ಆಡಿಸುತ್ತಾ ಪ್ರಯತ್ನ ಫಲಕಾರಿ ಆಗದಿದ್ದಾಗ ಶಿವನೇ ಎನ್ನುತ್ತಾ ಆಕಾಶದಲ್ಲಿ ಹೋಗುತ್ತಿದ್ದ ವಿಮಾನ ನೋಡಿ ಕಡಿದ ಸಂಪರ್ಕದ ಕೊಂಡಿ ತನ್ನ ಇರವನ್ನೇ ಮರೆಮಾಡಿ ಬಿಡುತ್ತದಲ್ಲಾ? ಎಂದು ವಿಭ್ರಾಂತನಾದ.

ದಿವಿ ಪುರಾತತ್ವ ಇಲಾಖೆಯ ಉನ್ನತ ಹುದ್ದೆಯನ್ನು ತನ್ನ ಎಳವೆಯಲ್ಲೇ ಏರಿ ಹಲವು ವಲಯಗಳಲ್ಲಿ ಹೆಸರು ಮಾಡಿದವ. ದೊಡ್ಡ ಸೆಮಿನಾರ್ ಹಾಲುಗಳಲ್ಲಿ ಅಂತರಾಷ್ಟ್ರೀಯ ಗೋಷ್ಠಿಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಸಿಗುವ ಹಳೆಯ ಚೈತ್ಸ, ಬಸದಿ, ದೇಗುಲ, ಬೇರೆ ಬೇರೆ ವೀರ-ಮಾಸ್ತಿ ಕಲ್ಲುಗಳು ಇತ್ಯಾದಿ ಹೇಗೆ ಜೀವನದ ಅಂಗವಾಗಿ, ಅಷ್ಟೇ ಅಲ್ಲ ಜೀವನೋತ್ಸಾಹದ ನಿತ್ಯನಿರಂತರ ಒಸರುಗಳಂತೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ತರ್ಕಬದ್ಧವಾಗಿ ವಾದಿಸುತ್ತಿದ್ದ, ಅದರಲ್ಲಿ ದೊಡ್ಡ ದೊಡ್ಡವರನ್ನು ಒಪ್ಪಿಸಿಯೂ ಬಿಡುತ್ತಿದ್ದ. 

ದಿವ್ಯಾಂಶ ಸಂಸ್ಥಾನಿಕ್! "ಹೀಗೆ ಪವರ್ ಪೊಯಿಂಟ್ ಪ್ರೊಜೆಕ್ಟ್ ಮಾಡುತ್ತಾ ಅಂತರ್ಜಾಲದಿಂದ ಎನೇನೋ ಬರಗಿ ಕೈಯಲ್ಲಿ ಲೇಸರ ಟಾರ್ಚ್ ಹಿಡಿದು, ಯಾವ ಸಂಬಂಧವೂ ಬೇಡದ ಆಸಕ್ತಿಯೂ ಇಲ್ಲದ, ಏಸೀ ಹಾಲಿನ ಜನಗಳಿಗೆ ಜೀವನ, ನಂಬಿಕೆ, ಅಂತೆಲ್ಲ ಸುತ್ತೋದು ಸುಲಭಕಣೋ. ಹಲ್ಮಿಡಿ ಶಾಸನ ನೋಡೋಕೆ ಬಿಸಿ ಬೆಟ್ಟ ಏರಬೇಕು. ಸಾಲು ಸಾಲು ನಿಂತಿರೋ ಕಲ್ಲುಗಳು ಏನು ಹೇಳ್ತವೆ ಅನ್ನೋದನ್ನ ಕಂಡುಕೊಳ್ಳೋದಕ್ಕೆ ಬಿರುಬಿಸಿನ ಝಳ ತಿನ್ಬೇಕು...  ಪೇಟೆಯ ಬಿಸಿ ಗಾಳಿ ಹಗುರ ಕಣೋ! ಅದು ಯಾವದನ್ನೂ ಸ್ಥಿರಗೊಳಿಸಲ್ಲ. ಎಲ್ಲವನ್ನೂ ತೇಲಿಸುತ್ತಾ ಹೋಗುತ್ತೆ. ಆದರೆ ಹಳ್ಳಿ ಹಳಕ್ಕೆ ಹಾಕಿರೋ ಕಟ್ಟು ಮಳೆ ಆರ್ಭಟಕ್ಕೆ ಕೊಚ್ಚಿ ನೆರೆ ನುಗ್ಗಿದಾಗ ಎಲ್ಲ ಸಪಾಟಾಗಿ ಚಂದಕಂಡ್ರೂ, ಮುಳುಗಿರೋ ತೇಲಿಹೋಗಿರೋ ಪೈರಿನ ಚಿಂತೆ ತಳದಲ್ಲಿ ಕೊರೆದೇ ಕೊರೆಯುತ್ತೆ. ಅಷ್ಟು ಹಗುರ ಅಲ್ಲ ಕಣೋ ಎಲ್ಲ" ಎಂದು ವಿಧಿ ಅಣಕಿಸ್ತಿದ್ದರೆ "ಯಾಕಪ್ಪಾ ಮಾಡ್ದೆ ಈ ಕವಿಯಿತ್ರಿ ಸಹವಾಸ?" ಎಂದು ದಿವಿ ಜಾರಿಕೊಳ್ಳೋಕೆ ಪ್ರಯತ್ನಿಸಿ ಗೆಲ್ಲೋಕಾಗ್ದಿದ್ದಾಗ ರೇಗಿ "ಆಯ್ತಮ್ಮ. ನಾನು ಬರಿ ಮೇಲೆ ಮೇಲೆ ಬುರುಡೆ ಬಿಡೋನು. ಜೀವನ, ನಂಬಿಕೆಗಳ ಜೊತೆಗೆ ಯಾವ ಸಂಬಂಧವೂ ಇಲ್ಲದಿರೋನು ಅನ್ನುವವಳು ನೀನು. ಯಾವುದೋ ಊರಿಂದ ಬಂದು ಈ ಊರಲ್ಲಿದ್ದು, ಯಾವುದಕ್ಕೂ ನನ್ನದು ಅನ್ನುವಂಥಹ ತಳಹದಿ ಇಲ್ದಿರೋರು ಯಾರು ಅಂತ ಎಲ್ರಿಗೂ ಗೊತ್ತು... ಸರಿ ಸರಿ... ಬರ್‍ತೇನೆ ಒಂದು ವಾರ ಬಿಟ್ಟು" ಅಂದವನೇ ರಜೆ ಅರ್ಜಿ ಗೀಚಿ ಬಿಟ್ಟಿದ್ದ. ವಿಮಾನ ನಿಲ್ದಾಣದಲ್ಲಿ ವಿಮಾನ ಏರುವವರಗೂ ಮೊಬೈಲಗೆ ಕರೆ ಮಾಡುತ್ತಿದ್ದ ವಿದಿಯ ಕರೆಗಳನ್ನು ನಿರ್ಲಕ್ಷಿಸಿದವ, ವಿಮಾನ ಇಳಿದವನೇ ತಡೆಯಲಾರದೆ ವಿಧಿಗೆ ತಾನೇ ಫೋನ್ ಮಾಡಿ "ಮರವಂತೆ ಸಮೀಪದ ಹಳ್ಳಿಗೆ ಹೋಗುತ್ತೇನೆ ಕರೆ ಮಾಡುತ್ತಿರು" ಎಂದಿದ್ದ.

ಬ್ರಹ್ಮಾಂಡದ ಬಟ್ಟ ಬಯಲಲ್ಲಿ ಬತ್ತಲಾಗಿ ಅಖಂಡ ವಿಶ್ವದ ಯಾವ ಸಂಪರ್ಕದ ತಂತುವೂ ಇಲ್ಲದೆ ಅನಾಥನಾಗಿ ನಿಂತುಬಿಟ್ಟಂತೆನಿಸಿ ಗಪ್ಪಾದ ದಿವಿಗೆ ತನ್ನ ಹಿಂದಿನಿಂದ "ಓಯ್ ಓಯ್ ಓಯ್ ಓಯ್ ಓಯ್ ಏಳ್ರೀ ಏಳ್ರೀ" ಅನ್ನುವ ಕೂಗು ಕೇಳಿಸಿತು. ಏನಾಯಿತೆಂದು ಬೆಚ್ಚಿ ತಿರುಗಿ ನೋಡುವಷ್ಟರಲ್ಲಿ ತನಗಿಂತ ಎತ್ತರದ ಸೈಕಲ್ಲನ್ನೇರಿದ್ದ ಸವಾರನೊಬ್ಬ ಬದುವಿನಲ್ಲಿ ಬರುತ್ತಿದ್ದವನು ಅತ್ತ ಸೈಕಲು ನಿಲ್ಲಿಸಲಿಕ್ಕೂ ಆಗದೆ, ಇತ್ತ ಕಾಲೂರಲೂ ಆಗದೆ, ಬಡಲ್ಲನೆ ಕೆಸರು ಗದ್ದೆಗೆ ಬಿದ್ದ. ಕೆಳಗೆ ಬಿದ್ದರೂ ಮೀಸೆ ಮುಕ್ಕಾಗದವರಂತೆ ಕೊರಳ ಸರದ ಪದಕವನ್ನು ಆಕಾಶಕ್ಕೆ ಎತ್ತಿ ಹಿಡಿದಿದ್ದ. ದಿವಿ ಗಾಬರಿಯಿಂದ "ಸಾರಿ, ಸಾರಿ, ಸಾರಿ" ಎನ್ನುತ್ತಾ ಆತನನ್ನು ಎತ್ತಲು ಮುಂದಾದರೆ ಆತ "ಧೂಮ್ ಮಚಾಲೆ ಧೂಮ್ ಮಚಾಲೆ" ಎನ್ನುತಿದ್ದ ಕೈಯೊಳಗೆ ಹಿಡಿದಿದ್ದ ಪದಕವನ್ನು ಕೆಸರು ಮೆತ್ತಿದ್ದ ಕಿವಿಗೆ ಒತ್ತಿಕೊಂಡು "ಎಷ್ಟು- ಮೂರಾ...... ಸರಿ, ಸರಿ, ಆಮೇಲೆ..... ಆಮೇಲೆ..... ಆಮೇಲೆ ಮಾತಾಡೋಣ" ಎನ್ನುತ್ತಾ ದಿವಿಯತ್ತ ತಿರುಗಿ "ಒಳ್ಳೆ ಜನ! ಜಗತ್ತೇ ಕವುಚಿ ಬಿದ್ದವರ ಹಾಗೆ ತಲೆ ಮೇಲೆ ಕೈಹೊತ್ತುಕೊಂಡು, ಇಡೀ ಹಾದಿನೇ ಬರಿಸ್ಕೊಂಡೋರ ತರಾ ನಿಂತಿದ್ರಲ್ಲಾ? ಹಳ್ಳಿ ಹಾದಿ ಇದು, ಎಚ್ಚರ ಇರ್‍ಬೇಕು ಮೈಮೇಲೆ" ಎನ್ನುತ್ತಾ ದಬಾಯಿಸತೊಡಗಿದ. 

ಅದೂ........ ಅದೂ........ ಎನ್ನುತ್ತಾ ದಿವಿ ಕೆಸರು ಮೆತ್ತಿದ್ದ ಮೊಬೈಲ್ ತೋರಿಸಹೋದರೆ "ಮಣ್ಣು ತಿಂತಾ? ಅದಕ್ಕೆ ಈ ತರಾ ಒಂದು ಸರಹಾಕ್ಕೊಬೇಕು, ಏನು? ಎಲ್ಲಿಂದ ಬರ್‍ತಿದೀರಿ? ವಿದ್ಯಕ್ಕನ ಮನೆಗಾ?" ಅಂದವನೇ ಗದ್ದೆಯಿಂದ ಮೇಲಕ್ಕೆದ್ದು ಕೆಸರು ಸೀಟಿಕೊಳ್ಳುತ್ತಾ 'ನಾನು ಸಣ್ಣಪ್ಪ' ಎಂದವನೆ ಸ್ವಪರಿಚಯಕ್ಕಾರಂಭಿಸಿದ. 

ತಾನೆಲ್ಲಿಗೆ ಹೊರಟಿದ್ದೇನೆಂದು ತನಗೇ ಗೊತ್ತಿಲ್ಲ, ಇದ್ಯಾವುದೋ ವಿದ್ಯಕ್ಕ ಅವರ ಮನೆಗೆ ಇವನೇ ದಾರಿತೋಸೋ ಹಾಗಿದೆಯಲ್ಲಾ ಅಂದುಕೊಳ್ಳುತ್ತಾ ದಿವಿ "ವಿದ್ಯಕ್ಕವರ ಮನೆ?" ಎಂದು ಪ್ರಶ್ನೆ ಮಾಡಿದ. ಗಿಡ್ಡಕಿದ್ದ ಸಣ್ಣಪ್ಪ, "ಇಲ್ಲಿ ಫೋನ್ ಇರೋದು ಅವರ ಮನೇಲಿ ಮಾತ್ರ ಈ ಊರಲ್ಲಿ. ಬನ್ನಿ ತೋರಿಸ್ತೇನಂತೆ ಮನೆ." ಎನ್ನುತ್ತಾ ಸೈಕಲ್ ಎತ್ತತೊಡಗಿದ. "ಇಲ್ಲಪ್ಪಾ, ಈ ಊರಲ್ಲ್ಪಿ ನಂಗೆ ಯಾರ ಗುರ್ತೂ ಇಲ್ಲ." ಎಂದು ವಿದಿ ಎನ್ನುತ್ತಿದ್ದರೆ "ಗುರ್‍ತಾಗುತ್ತೆ ಬರ್ರೀ" ಎನ್ನುತ್ತಾ. ಕೆಸರು ಮೆತ್ತಿದ್ದ ಸೈಕಲನ್ನು ಗದ್ದೆಯಲ್ಲೇ ಸ್ಟ್ಯಾಂಡ್ ಹಾಕಿ ನಿಲ್ಲಿಸಿ ಸಣ್ಣಪ್ಪ ಮುಂದಾಗತೊಡಗಿದ. ತನಗೊಳ್ಳೆ ಗೈಡ್ ಆದನಲ್ಲ ಈತ! ಅಂದುಕೊಳ್ಳುತ್ತಾ ದಿವಿ ಹಿಂದು ಮುಂದು ನೋಡುತ್ತಿದ್ದರೆ  "ಇಲ್ಲಾ ತಕ್ಕಳ್ಳಿ, ಸದ್ಯಕ್ಕೆ ನನ್ನ ಮೊಬೈಲ್‌ನ ಇಟ್ಕೊಳ್ಳಿ. ನಿಮ್ಮ ಮೊಬೈಲ್‌ನ ನಾಳೆ ರಿಪೇರಿ ಮಾಡ್ಸಿ ಕೊಡ್ತೀನಿ. ಹಳ್ಳಿ ಇದು, ನಾನು ಕೈಕೊಟ್ಟೇನು ಎಂಬ ಯಾವ ಭಯವೂ ಬೇಡ. ಯಾರ ಹತ್ರನಾದ್ರು 'ಸಣ್ಣಪ್ಪ' ಅಂದ್ರೂ ನನ್ನ ಜುಟ್ಟು ಹಿಡಿದು ನಿಮ್ಕೈಲಿ ಕೊಡ್ತಾರೆ" ಅಂದವನೇ ತನ್ನ ಮೊಬೈಲನ್ನು ಸರದ ಸಮೇತ ದಿವಿಯ ಕೈಯಲ್ಲಿಟ್ಟ. ಯಾರು, ಏನು, ಎತ್ತ, ಎಲ್ಲಿ, ಯಾವ ಗುರುತು ಪರಿಚಯವೂ ಇಲ್ಲದವನೊಬ್ಬ ಈ ರೀತಿ ಆಡುತ್ತಿದ್ದರೆ ಇನ್ನಷ್ಟು ಗಾಬರಿಯಾದ ದಿವಿ "ಬೇಡ ಬೇಡ... ವಿದ್ಯಕ್ಕ ಅವರ ಮನೇನೆ ತೋರ್‍ಸು ನನಗೆ ಇದು ನಿನ್ನ ಹತ್ರಾನೇ ಇರಲಿ" ಅನ್ನಹೋದ್ರೆ "ಅವ್ರ ಮನೇನೂ ತೋರಿಸ್ತೇನಂತೆ ಬರ್ರಿ" ಎನ್ನುತ್ತಾ ಮುಂದೆ ಹೋಗತೊಡಗಿದ. ಸಣ್ಣಪ್ಪನ ಮೊಬೈಲಿಂದ ಮೊದಲಿಗೆ ವಿಧಿಗೊಂದು ಕರೆಮಾಡಿ 'ಸದ್ಯ ಇದಕ್ಕೆ ಕರೆ ಮಾಡು... ಬೇರೆ ಯಾರಿಗೂ ಈ ನಂಬರ್ ಕೊಡಬೇಡ' ಅಂದ.


ವಿದ್ಯಕ್ಕನ ಮನೆಯ ಭಾವ ಸಂಗೀತ 

"ಸರಿಯಾಗಿಯೇ ಯಾಮಾರಿಸಿದ ಬಿಡಿ ಅವನು ನಿಮ್ಮನ್ನ. ಬೆಲೆ ಬಾಳೋ ನಿಮ್ಮ ಮೊಬೈಲ್ ಯಾಮಾರಿಸಿ ತನ್ನ ನಾಲ್ಕ್ಕಾಣೆ ಮೊಬೈಲ್ ನಿಮ್ಗೆ ಗಂಟು ಹಾಕಿದ್ದಾನೆ. ನಾಳೆಗೆ ಏನಾದ್ರೂ ಇದು ಮಾತಾಡಿದ್ರೆ ಅದು ನಿಮ್ಮ ಪುಣ್ಯ. ಈ ಊರಿಂದ ನೀವು ಹೊರಬಿದ್ರಿ ಅಂತ ಗೊತ್ತಾಗೋವರೆಗೂ ಅವ ಈ ಕಡೆ ತಲೆನೇ ಹಾಕೋದಿಲ್ಲ" ಗಡಿಬಿಡಿಯಲ್ಲಿ ಓಡಾಡುತ್ತಾ ಕೋಣೆ ಅಣಿ ಮಾಡುತ್ತಾ ವಿದ್ಯಾ ಹೇಳುತ್ತಿದ್ದರೆ ದಿವಿ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗದೆ ಅವಳನ್ನೇ ನೋಡುತ್ತಿದ್ದ. "ಇದು ನಿಮ್ಮ ಕೋಣೆ. ಫೋನ್ ಅಲ್ಲೇ ಜಗಲಿ ಮೇಲಿದೆ. ಪಕ್ಕದಲ್ಲೇ ಗಡಿಯಾರ ನೇತ್ಹಾಕಿದೀನಿ, ಕೆಳಗಿರೋ ಆ ಪುಸ್ತಕದಲ್ಲಿ ಎಲ್ಲಿಗೆ ಎಷ್ಟು ನಿಮಿಷ ಅಂತ ಬರ್‍ದಿಟ್ಟುಬಿಡಿ. ಬೆಲೆ ಮಾತ್ರ ನಾನು ಹೇಳಿದ್ದೆ" ಎಂದಳು ವಿದ್ಯಾ. ಒಂದೇ ಸಲ ಸಣ್ಣಪ್ಪನ ಮೊಬೈಲ್ 'ಧೂಮ್ ಮಚಾಲೆ' ಅಂದದ್ದೇ ದಿವಿ "ಹಲೋ ಯಾರು ಯಾರು?" ಅಂದ. "ಮತ್ತೇ... ಇವತ್ತು ಗುಡ್ಡೆ ಬಯಲಲ್ಲಿ ಆಟ. ನಾಗವಲ್ಲಿ... ಎಲ್ಲ ಮನೆ ಖಾಲಿ ಮಾಡಿಕೊಂಡು ಅಲ್ಲಿ ಬಿದ್ದಿರ್ತಾರೆ. ರಾತ್ರಿ ೧೨ ಕ್ಕೆ ಫಾರೆಸ್ಟ್ ಗಾರ್ಡ್ ತಿಪ್ಪಣ್ಣನ ಮನೆ ಮುಂದಿನ ಗಂಧದ ಮರ ಮಾಯ... ಆಯಿತು... "

"ಊಟ ತಿಂಡಿ ಫ್ರೀ" ಅಂದ ವಿದ್ಯಾ ನಕ್ಕು ಸುಮ್ಮನೆ ಬೈಸಿಕಲ್ ಏರಿ "ಹಾಲಿನ ಡೈರಿ ಮೀಟಿಂಗ್ ಇದೆ. ಮುಗಿಸ್ಕೊಂಡು ಬಂದುಬಿಡ್ತೇನೆ. ಬೋರ್ ಆದ್ರೆ ಆ ನನ್ನ ಲೈಬ್ರೇರಿಲಿರೋ ಪುಸ್ತಕಗಳ ಧೂಳು ಕೊಡಬಹುದು. ಬಂದೆ" ಎಂದು ಬೆಲ್ ಮಾಡುತ್ತಾ ಗದ್ದೆಬದುಗಳ ಮೇಲೆ ಬ್ಯಾಲೆ ಮಾಡುತ್ತಾ ಮರೆಯಾದಳು. 

ಈ ಎಲ್ಲ ಅನಿರೀಕ್ಷಿತ ಆಘಾತ, ಪರಿಚಯ, ಆಥಿತ್ಯ, ಏನು ವಾಸ್ತವವೋ ಇಲ್ಲ ಭ್ರಮೆಯೋ ಎಂಬಂತೆ ದಿವಿಯನ್ನು ಕಾಡಿ ಮರವಟ್ಟಿಸಿ ಬಿಟ್ಟಿದ್ದವು. ಎಷ್ಟೋ ಹೊತ್ತು ಹಾಗೇ ಕೂತಿದ್ದವನು ಒಮ್ಮೆಲೇ 'ಧೂಮ್ ಮಚಾಲೆ ಧೂಮ್ ಮಚಾಲೆ' ಕೇಳಿಸಿ ಇದು ತನ್ನ ಜೇಬಿನಿಂದಲೇ ಬರುತ್ತಿರುವುದೆಂಬುದು ನೆನಪಾಗಿ ಅದನ್ನೆತ್ತಿಕೊಂಡು 'ಹಲೋ' ಎಂದ. "ನಾಲ್ಕಕ್ಕೆ ೧೦ ರೂಪಾಯ್ ೯ಕ್ಕೆ ೫ ರೂಪಾಯ್. ನಾಳೆ ಗ್ಯಾರಂಟಿ ೯ಕೆ. ಗಿಡ್ಡಪ್ಪ ಬರ್‍ಕೊಳಕೆ ಮರೀಬೇಡ. ನಾನು ವೆಂಕಿ" ಅಂತ ಜಂಗಮವಾಣಿಯು ಮೂಕವಾದಾಗ ಮತ್ತೊಮ್ಮೆ ತಲೆ ಕೊಡವಿಕೊಂಡು ದಿವಿ ವಿದ್ಯಾಳ ಮನೆಯ ಗ್ರಂಥಾಲಯದೊಳಗೆ ಪ್ರವೇಶಿಸಿದ. ಬಾಗಿಲು ತೆಗೆದು ಒಳ ಹೋಗುತ್ತಿದ್ದಂತೆ ದೀಪಗಳು ಬೆಳಗಿದವು. ಉಪನಿಷತ್ತುಗಳಿಂದ ಹಿಡಿದು ಪೊಲೀಸ್ ಡೈರಿಯವರೆಗೆ ವಿಚಿತ್ರ ಅಭಿರುಚಿಯ ಎಲ್ಲಾ ಸರಕುಗಳೂ ತುಂಬಿದ್ದ ಆ ಕೋಣೆ ನೋಡಿ ತಾನು ಸಾರಿ ಸಾರಿ ಹೇಳುತ್ತಿದ್ದ ಹಳ್ಳಿಯ ಜೀವನ, ನಂಬಿಕೆ ಮುಂತಾದ ಪದಗಳಿಗೂ ಇಲ್ಲಿಯ ಜೀವಿತದ ರಿವಾಜುಗಳಿಗೂ ಇರುವ ಅಂತರಕ್ಕೆ ಮನಸ್ಸಿನಲ್ಲಿಯೇ ತನ್ನನ್ನು ಶಪಿಸಿಕೊಳ್ಳುತ್ತಾ 'ಧೂಮಚಾಲೆ ಧೂಮಚಾಲೆ' ಕರೆಗೆ ಕಿವಿಕೊಟ್ಟ, ಅತ್ತಲಿಂದ "ವಿಧಿ ಎಲ್ಲಿದ್ದಿಯೋ?" ಅಂದರೆ ಇಂತಿಂತಲ್ಲಿ ಎಂದಾಗ "ಹೋ ಅಲ್ಲಾ? ಹೋಗಿ ಹೋಗಿ..." ಅಂದರೆ "ಹಾಗಾದ್ರೆ ನಿನಗೆ ಗೊತ್ತಾ ಈ ಜಾಗ?" ಎನ್ನುತ್ತಲೇ ಈತ "ಸರಿ ಸರಿ... ಬೇಗ ಅಲ್ಲಿಂದ ವಾಪಾಸ್ ಬಂದ್ಬಿಡು" ಎಂದು ದಿವಿ ಮಾತು ತುಂಡರಿಸಿದಳು.

ಅರೆಗಳಲ್ಲಿನ ಪುಸ್ತಕಗಳನ್ನು ತಡಕುತ್ತಾ, ಕೋಣೆಯ ಮೂಲೆಯಲ್ಲಿದ್ದ ಓದುವ ದೀಪ ಬೆಳಗುತ್ತಿದ್ದ ಮೇಜಿನ ಬಳಿಗೆ ಬಂದವನು 'ಕಳ್ಳಿಯ ಬಣ್ಣದ ಲೋಕ' ಕವನ ಸಂಕಲನವನ್ನು ನೋಡಿ ವಿಸ್ಮಿತನಾದ. ದಿವಿ ಬರೆದ ಇತ್ತೀಚಿನ ಕವನ ಸಂಕಲನ ಅದು. ಮುಖಪುಟ ಮಗಚುತ್ತಲೇ 'ಅಕ್ಕರೆಯಿಂದ ವಿದ್ಯಕ್ಕನಿಗೆ' ಬರದಿದ್ದ ದಿವಿಯ ಹಸ್ತಾಕ್ಷರಗಳನ್ನು ಮತ್ತು ರುಜುವನ್ನು ನೋಡಿ ಮೊದಲ ಕವನ ಓದತೊಡಗಿದ. 

ಬದಿ ಬೇಲಿಯ ಕಳ್ಳಿ
ಒಡೆದಾಗ ಎಲೆ 
ಕನಸುಗಳ ಬಣ್ಣದ ಲೋಕ. 
ಕನಸುಗಳ ತುಂಬೆಲ್ಲಾ ಊರನದಿ...

ಅತ್ತಲಿಂದ ವಿದ್ಯಾ "ಮೊರೆವಂತ ಮರವಂತೆ ಹಾಡು" ಎನ್ನುತ್ತಾ ನಗುಚಿಮ್ಮಿ ಪೂರ್ಣಗೊಳಿಸಿದಳು. 

"ದೂರ ಪಟ್ಟಣದಲ್ಲಿರೋ ಈ ಮಹಾನ್ ಕವಿಯಿತ್ರಿ ಬಂಡವಾಳ ಮಾಡಿಕೊಳ್ಳೊದು ಅಜ್ಜಿ  ಕಥೆಗಳನ್ನು, ಊರಿನ ಬೊಳ್ಳ, ಹಳ್ಳಕೊಳ್ಳ ಹೀಗೆ ಎಲ್ಲಾ ಕಳವಿನ ಮಾಲುಗಳನ್ನೇ. ಚೆನ್ನಾಗಿದೆಯಲ್ಲಾ ಆ ಕವನ ಸಂಕಲನದ ಹೆಸರು 'ಕಳ್ಳಿಯ ಬಣ್ಣದ ಹಾಡು.' ಇಲ್ಲಿದ್ದಾಗ ವಿಧಿ ಈಗೇನೆನೆಲ್ಲ ಬರೀತಾಳಲ್ಲ ಅವುಗಳ ಕಡೆ ಕಣ್ಣೆತ್ತಿಯೂ ನೋಡುತ್ತಿದ್ದವಳಲ್ಲ. ಇಲ್ಲಿಯ ಬದುಕು, ನಂಬಿಕೆ, ಆಚಾರ, ಆಚರಣೆ ಎಲ್ಲವನ್ನೂ ತಾತ್ಸಾರದಿಂದ ಕಾಣುತ್ತಿದ್ದಳು. ಈಗ ಅವುಗಳನ್ನೇ ಬುರುಡೆ ಹೊಡೆದು ದೊಡ್ಡ ಕವಿಯಿತ್ರಿ ಅಲ್ಲ ಕವಿಛತ್ರಿ ಆಗಿಬಿಟ್ಟಿದ್ದಾಳೆ. ಈ ಅಕ್ಕನ ನೆನಪಾಗೋದು ಅವಳಿಗೆ ತನ್ನ ಸಂಕಲನಗಳ ಬಿಡುಗಡೆಯಾದಾಗ ಮಾತ್ರ. ಮತ್ತೆ ಅವುಗಳನ್ನು ನನಗೆ ಕಳುಹಿಸುವುದು ಖುಷಿಯಾಗ್ಲಿ ನಾನೂಂತ ಅಲ್ಲ. ಹೊಟ್ಟೆ ಉರೀಲಿ, ತನ್ನ ಹಟ ತಾನು ಸಾಧಿಸಿಬಿಟ್ಟೆ ಅನ್ನೋದು ಗೊತ್ತಾಗ್ಲಿ ಅನ್ನೋ ಕಾರಣಕ್ಕೆ. ಅಪ್ಪ ಹೋದಾಗ ಬಂದು ಮುಖ ಹಾಕಿದವಳು ಈ ಕಡೆಗೆ ಮತ್ತೆ ತಲೆ ಹಾಕಲೇ ಇಲ್ಲ." ಎಂದು ಹೇಳುತ್ತಾ ವಿದ್ಯಾ ಕೊನೆಯ ಪದ್ಯ ಓದತೊಡಗಿದಳು.

ಏಳು ಸಾಗರದಾಚೆ ಸುತ್ತು ಕೋಟೆಯ ಒಳಗೆ 
ಸಿಲುಕಿರುವ ಆ ಪ್ರಾಣಪಕ್ಷಿ
ಕೂಗುತ್ತ ಚೀರುತ್ತ ಸಾರುತ್ತಲಿದೆ ಕೇಳಿ
ತವರಲ್ಲೆ ಕಳಕೊಂಡೆ ಅಕ್ಷಿ!
ಹುಡುಕ ಹೊರಟರೆ ಸ್ವಂತ ತವರೇ ನಾಪತ್ತೆ
ಮರೆತಂತೆ ಇರುವಿಕೆಯ ಸಾಕ್ಷಿ!

ತನ್ನ ಕಂಪ್ಯೂಟರನಲ್ಲಿ ತಾನು ಇತ್ತೀಚೆಗೆ ವಿನ್ಯಾಸ ಮಾಡಿದ ವಾಸ್ತುಗಳನ್ನು ತೋರಿಸುತ್ತ ವಿದ್ಯಾ ಪಟ್ಟಣಿಗರ ವಸ್ತುಪ್ರೀತಿ, ನಂಬಿಕೆಗಳನ್ನು ಗೇಲಿ ಮಾಡುತ್ತಾ ಆದರೆ ತಾನು ಇಲ್ಲಿಯ ವ್ಯವಸಾಯವೊಂದರ ಮೇಲೆ ನಿರ್ಭರಳಾಗಲು ಸಾಧ್ಯವಿಲ್ಲವಾದುದರಿಂದ ಮತ್ತೆ ಒಮ್ಮೆ ಕ್ರೀಯಾಶೀಲವೆನಿಸಿದ ಅಭ್ಯಾಸ ಕ್ರಮ ಪ್ರಸಿದ್ಧಿಯಾಗಿ ಬದಲಾದ ಒತ್ತಡದಿಂದ ಇದನ್ನು ಮುಂದುವರಿಸುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳಲೇಬೇಕಾಯ್ತು ಎಂದು ವಿವರಿಸಿತೊಡಗಿದಳು. ಮಹಾನಗರಗಳಲ್ಲಿ ನಿರ್ಮಿತವಾಗಿದ್ದ ತನ್ನ ವಿನ್ಯಾಸದ ಕಟ್ಟಡಗಳು ಹಳ್ಳಿಯ ಏಕಾಂತದ ಹಾಗೂ ಸರಳ ಶ್ರೀಮಂತಿಕೆಯ ಅದ್ಭುತ ಚಿಹ್ನೆಗಳು ಎಂಬ ಪ್ರಶಂಸೆಗಳನ್ನು ವ್ಯಂಗ್ಯವಾಡುತ್ತ "ನೀವು ಅಡುಗೆಗೆ ಬೇಕಾದ್ರೆ ನಂಗೆ ಸಹಾಯ ಮಾಡ್ಬೋದು. ಇಲ್ದಿದ್ರೆ ನಾನು ಕೊಟ್ಟಿದ್ದು ಉಣ್ಬೇಕಾದೀತು" ಎನ್ನುತ್ತಾ ವಿದ್ಯಾ ಅಡುಗೆ ಕೋಣೆಗೆ ನಡೆದಳು.

ಜೀವನದ ವೈರುದ್ಯಗಳು ಸವಾಲೆಸೆಯುವ ವೈವಿಧ್ಯತೆಗಳಿಗೆ ಕಾರಣವಾಗುವುದು ಪರಿಚಯವೇ ಇಲ್ಲದ ಹಲವು ತೀರಗಳಿಗೆ ಕೊಂಡೊಯ್ದು ಮುಟ್ಟಿಸುವುದು. ವ್ಯಕ್ತಿ ವಿಶಿಷ್ಟ ನಿರ್ಧಾರಗಳಿಂದ ಎಂಬ ತನ್ನ ನಂಬಿಕೆಗೆ ತಕ್ಕ ಪಾಠ. ಈ ಹಳ್ಳಿಯಲ್ಲಿ ತನಗಾಗುತ್ತಿದೆಯೆಲ್ಲ ಎಂದು ತಲೆ ಚಚ್ಚಿಕೊಂಡ ದಿವಿ ಕಿರುಗುಡುತ್ತಿದ್ದ ಮೊಬೈಲನ್ನು ಕೈಗೆತ್ತಿಕೊಂಡ. 

"ಸಣ್ಣಪ್ಪ, ಇವತ್ತು ಯಾರ್‍ದೊ ನಂಬರ ಕಟ್ಟಿಸ್ಕೊಬೇಡ. ಬೊಂಬೇಲಿ ಮತ್ತೆ ಸರಣಿ ಬಾಂಬ್ ಸ್ಪೋಟ. ಮತ್ತೆ ನಾನ್ ಫೋನ್ ಮಾಡೋವರ್‍ಗೆ ಮಟ್ಕಾ ಗಿಟ್ಕಾ ಎಲ್ಲ ಬಂದ್. ಸಧ್ಯ ಕೈಗೆ ಬಂದಿರೋ ಕಾಸು ಗುಳುಂ ಮಾಡೋಕೆ ಇದೇ ಒಂದು ಛಾನ್ಸು ಮತ್ತೆ ಪೋನ್ ಮಾಡ್ತೀನಿ. ಜೈ ಬಾಂಬೆ, ಜೈಬಾಂಬೆ" ಎನ್ನುತ್ತಾ ಮಾತು ತುಂಡರಿಸಿತು ಅತ್ತಲಿನ ಧ್ವನಿ. ದಿವಿ ಮತ್ತೆ ತಬ್ಬಿಬ್ಬು!
  

ಭರತವಾಕ್ಯದ ಸಂಗೀತ

ಹಿಂತಿರುಗಿ ಹೊರಟಿರುವ ದಿವಿ ಮಳೆಗಾಲದ ಕೆಸರು ನೀರು ಕೊಚ್ಚಿ ಹರಿಯುತ್ತಿರುವ ತೊರೆಯೊಂದರ ಸೇತುವೆಗೆ ಕೈಯೂರಿ ನಿಂತಿದ್ದಾನೆ. ಓ.ಸಿ ಕಳ್ಳತನ, ಗಂಧದ ವ್ಯಾಪಾರ ಹೀಗೆ ಎಲ್ಲದರ ಕೊಂಡಿಯಾಗಿರುವ ಪುಟ್ಟ ಮೊಬೈಲನ್ನು ಕೈಯಲ್ಲಿ ತಿರುಗಿಸುತ್ತಾ ತಾನೇನು ಮಾಡಬೇಕು ಎಂದು ಯೋಚಿಸುತ್ತಿದ್ದಾನೆ. ಹಲವು ಗೊಂದಲಗಳಿಗೆ ಪಕ್ಕಾಗಿರುವ ಆತನ ಮನಸ್ಸು ತನ್ನ ನಗರದ ಸೀಮಿತ ಅರಿವಿನ, ಅದನ್ನೆ ಮಹತ್ ಎಂದು ಸಾರುವ ಢಾಂಬಿಕತೆಯ, ಅದು ತಪ್ಪೆಂದು ಗೊತ್ತಿದ್ದರೂ ಮೋಜಿನ ಮಾಯೆಯಲ್ಲಿ ಎಲ್ಲದನ್ನು ಒಪ್ಪಿಕೊಳ್ಳುವ, ಪರಸ್ಪರರನ್ನು ಒಪ್ಪಿಸುವ ಗೀಳನ್ನೇ ಒಪ್ಪಿಕೊಳ್ಳಲೇ? ಮರೆತ ಕನವರಿಕೆಗಳನ್ನು ಬಂಡವಾಳ ಮಾಡಿಕೊಳ್ಳುವ ಅಲ್ಪತನವನ್ನೇ ನೆಚ್ಚಲೇ? ಯಾವ ಭರವಸೆಯ ಕುರುಹೂ ಇರದಿರುವ ಹೊಚ್ಚ ಹೊಸ ಜಾರು ದಾರಿಹಿಡಿಯಲೇ ಎಂಬ ತಲ್ಲಣಗಳಿಂದ ತಪ್ಪಿಸಿಕೊಳ್ಳಲು ಅನುವಾಗುವಂತೆ ಸೇತುವೆಯ ಮುಂಬಾಗದೊಳಗೆ ಮೊಬೈಲ ಸರವನ್ನು ನೇತುಬಿಟ್ಟು ಧೀರ್ಘವಾಗಿ ಒಮ್ಮೆ ಉಸಿರೆಳೆದುಕೊಂಡು ಕೈಗಳಿಂದ ಕಣ್ಣುಗಳನ್ನುಜ್ಜಿಕೊಂಡು ಹೊಸದಾಗಿ ದಾರಿ ಕಂಡವನಂತೆ ಮುಂದೆ ನಡೆದಿದ್ದಾನೆ. ಸೇತುವೆಯ ಕೆಳಗೆ ಕೆಸರು ನೀರು ಹರಿಯುತ್ತಲಿದೆ. ಸೇತುವೆಯೊಳಗೆ ನೇತು ಹಾಕಿದ ಮೊಬೈಲ್ ರಿಂಗಣಿಸುತ್ತಲೇ ಇದೆ.  


ಸಪ್ಟಂಬರ ೧೨, ೨೦೦೬ 




2 comments:

  1. ಇನ್ನೂ ಇದೆ ಅನ್ನಿಸುತ್ತಿದೆ.. ನಿಮ್ಮ ಧಾಟಿ ತುಂಬಾ ಚಂದವಿದೆ.

    ReplyDelete