ಕೆಂಪಿಗೆ ಕುಂಕುಮದ
ಪಚ್ಚೆಗೆ ಪೈರಿನ
ನೀಲಿಗೆ ಬಾನಿನ ಹಂಗು ಯಾಕೆ ಹೇಳು?
ರವಿಯ ಬೆಳಕಿನಲ್ಲಿ ಇವೆಲ್ಲ ಇದ್ದೂ
ಏನನ್ನೂ ಕಾಣೆವಲ್ಲ!
ವಿಕಾರಿಗಳು ನಾವು;
ವಿಕಾರ ಆಕಾರದ ಮೂಲಕವಷ್ಟೇ ನಮ್ಮಅರಿವು.
ಬಣ್ಣ ಕಾಣಲು ರೂಪ, ರೂಪಕ್ಕೆ ಆಕಾರ,
ಆಕಾರಕ್ಕೆ ಗಾತ್ರ, ಗಾತ್ರಕ್ಕೆ ಅವಕಾಶ,
ಅವಕಾಶಕ್ಕೆ ಭಾರ... ಹೀಗೇ...
ದೃಷ್ಟಿ ಎಷ್ಟೋ ಅದಷ್ಟೆ ಸೃಷ್ಟಿ.
ಬಿಳುಪಿಗೆ ಬೇಜಾರಾಗಬೇಡವೆಂದು ಹೇಳು;
ಸತ್ಯ ಸೂರ್ಯ ಕಿರಣದ ಹಾಗೆ.
ಎಲ್ಲ ಬಣ್ಣಗಳಿದ್ದೂ ಕಂಡಷ್ಟೆ ಕಾಣಿಸುವ ಕನ್ನಡಿ
ಹಾಗಾಗಿ ಸತ್ಯಕ್ಕೆ ಸೋಲಿಲ್ಲ.
ಸ್ವರೂಪವಿದ್ದರೆ ತಾನೆ ದಣಿವೂ - ಸೋಲೂ?
ಸೂರ್ಯ ದಣಿದರೆ ಹೇಗೆ!
ಕಲೆಯೂ ಅಂತಹ ಒಂದು ಸತ್ಯ.
ವಿಕಾರ ಆಕಾರದ ಹಂಗು ಮೀರಿದ
ಸಮಷ್ಟಿಯನ್ನು ಮುಷ್ಟಿಯಲ್ಲಿ ಹಿಡಿದು
ಕ್ಷಣದಲ್ಲಿ ಅನಂತವನ್ನು ಬಿಂಬಿಸುವ
ಕಿರಣಕಣ - ನಿತ್ಯ ನಿರಂತರದ ಪಥ್ಯ.
after a long time i read a poem which really made my day...felt each word and much more...keep on writinig.....
ReplyDelete