Sunday, February 19, 2012

ಸಂತ



ಪರ್ವತದ ತಪ್ಪಲಿನ ನೀರವದ ಗುಹೆಯೊಳಗೆ 
ಒಮ್ಮೆ ನಾನೊಬ್ಬ ಸಂತನ ಕಂಡಿದ್ದೆ ಬಹಳ ಹಿಂದೆ.
ಮೌಲ್ಯಗಳ ಬಗೆಗಿನ ತರ್ಕ, ವಿಚಾರ ಚರ್ಚೆಗಳ ನಡುವೆ
ಭಾರ ಹೆಜ್ಜೆಗಳೊಡನೆ ಏಳುತ್ತ ಬೀಳುತ್ತ ಒಬ್ಬ ಬಂದ,
ಬಂದವನೇ ಸಂತರಲ್ಲಿ-
" ಓ ಸ್ವಾಮಿ ಹೆಣಭಾರ ಪಾಪಗಳ ಹೊರೆ ಹೊತ್ತಿದ್ದೇನೆ ಬೆನ್ನ ಮೇಲೆ
ನನ್ನನ್ನು ಹಗುರಾಗಿಸಿ" ಎಂದ.
ಅದಕೆ ಸಂತರು " ನನ್ನ ಬೆನ್ನ ಮೇಲೂ ನನ್ನ ಪಾಪಗಳ ಹೊರೆ ಇದೆ " ಎಂದರು.
ಅದಕೆ ಅವ " ನಾನೊಬ್ಬ ಕಳ್ಳ ಸ್ವಾಮೀ" ಎಂದ
ಸಂತರೂ " ನಾನೂ ಕಳ್ಳ, ಕದೀಮ"ಎಂದರು.
ಆತ " ನಾನೋ ಕೊಲೆಗಡುಕ, ಹಲವು ಮಂದಿಯ ರಕ್ತ ನನ್ನ ಕೈಯ್ಯಲ್ಲಿ" ಎಂದ.
ಸಂತರು "ನಾನೂ ಕೂಡ...ಎಷ್ಟೋ ಜನರ ಅಳು ನನ್ನ ಕಿವಿಯೊಳಗೆ"  ಎಂದರು.
ಅದಕೆ "ಆತ ನಾನು ಕೇಡಿಗ" ಎಂದ.
ಸಂತರು " ನಾನು ಲೆಕ್ಕವಿಲ್ಲದಷ್ಟು ತಪ್ಪನ್ನ, ಕೇಡನ್ನ ಮಾಡಿದ್ದೇನೆ" ಎಂದರು.


ಅದ ಕೇಳಿ ಆ ಪಾಪಿ ಸಂತರೆಡೆಗೆ ದಿಟ್ಟಿಸಿ ನೋಡಿದ, ಸೆಟೆದು, ಕ್ಷಣ ನಿಂತು
ತಟ್ಟನೆ ಹಾಡುತ್ತ ಕೆಳಗಿಳಿಯ ತೊಡಗಿದ.


ನಾನಾಗ ಸಂತರೊಡನೆ "ಮಾಡದ ತಪ್ಪ ಹೊರಿಸಿಕೊಂಡಿರಿ ಆ ಪಾಪಿ ನಿಮ್ಮ ನಂಬದೇ  ಓಡಿ ಹೋದ"  ಎಂದೆ.
ಅವರು ನಗುತ್ತ "ಓಡಿದ ಆದರೆ ಹಗುರಾಗಿ" ಎಂದರು.


ದೂರದಲ್ಲಿ ಅವ ಹಾಡಿದ ಆ ಹಾಡು ತುಂಬುತಿತ್ತು ಅವರ್ಣನೀಯ ಖುಷಿಯ ಎಲ್ಲೆಡೆಯೂ.


ಕಲೀಲ್ ಗಿಬ್ರಾನ್

No comments:

Post a Comment