Sunday, March 4, 2012

ಎರಡು ಚಿತ್ರಗಳು


ಶುಭ ಪ್ರಯಾಣ


ಹಾದಿಯುದ್ದಕ್ಕು ತುಳುಕುವ  ಹಾಡಿನಿಂದ
ಹೊರ ಪುಟಿವ  ಎರಡು ಉದ್ಗಾರ ಕಿಡಿಗಳು
ಚಿಟಿಕೆ ಪುಳಕಕ್ಕೆ ಗೆಜ್ಜೆ ಕುಣಿತಕ್ಕೆ 
ಭಜನೆ ಮೀಯುವ ಮಿಂಚುಹುಳಗಳು...

ಕಣ್ಣ ಬಿಂಬಕ್ಕೆ ರೂಪಕೊಡುವ
ಅಪರೂಪದೊಂದು ನಾದ
ಹೂವ ಗಂಧಕ್ಕೆ ಶಶಿಯ ಸೂಸಲಿಗೆ
ಮರುನುಡಿವ ಕುಲುಕು ತೊರೆಗಳು...

ಸವೆದಷ್ಟೂ ಬದುಕು 
ನಡೆದಷ್ಟೂ ಹಾದಿ
ನುಡಿದಷ್ಟೂ ಕಥನ
ಕಂಪಿಸಿದಷ್ಟೂ ತನನ...




ಲೋಚೋ ಡ್ರೋಮ್ ಚಿತ್ರದ  ಒಂದು ಸಣ್ಣ ತುಣುಕು


ಕುಣಿ ಕುಣಿ ಪೀನಾ


ಕೊಂಕುವೊಂದು ಹುಬ್ಬು
ಬಿಮ್ಮು ಬಿಟ್ಟ  ಒಂದು  ಅಪ್ಪು
ಸ್ತಬ್ಧ ನಿಂತ ತಾಂಡವವೋ
ಕೆಣಕಿ ಕುಣಿವ ಢವಢವವೋ...


ಕಾಲವನ್ನೆ ಕ್ಷಣದಿ ಕಟ್ಟಿ
ಹಿಡಿವ ಅಂಗ ಭಂಗಿ
ಮಿಂಚನ್ನೂ ಕೆತ್ತಿ ಕಡಿದು
ಹಿಡಿವೆನೆಂಬ ಛಾತಿ...


ಮನವೆ ಮೂಲ ಚಲನೆಗೆಲ್ಲ
ಚಲನೆ ಭಾವ ಮೂಲ
ಭಾವಮೂಲ ಅರಿವೆನೆಂಬ
ಒಲವೆ ಕಲೆಗೆ ಮೂಲ.




ಪೀನಾ ಚಿತ್ರದ ಸಣ್ಣ ತುಣುಕು



ಇತ್ತೀಚಿಗೆ ನಾವು ನೋಡಿದ ಈ ಎರಡು ಚಿತ್ರಗಳು ನಮ್ಮನ್ನು ಆಳವಾಗಿ ಕಲಕಿದಂಥವು. ಮೊದಲನೆಯದು ಲಾಚೋ ಡ್ರೋಮ್. ಇದು ಒಂದು ಅಪರೂಪದ ಚಿತ್ರ. ಗುಜರಾತಿನಂದ ಸ್ಪೈನ್ ವರೆಗೆ ಬೇರೆ ಬೇರೆ ಕಡೆಯ ಅಲೆಮಾರಿಗಳ ಬದುಕು ಮತ್ತು ಸಂಗೀತವನ್ನು ಚಿತ್ರಿಸುವ ಕಾವ್ಯ ಇದು. ಎರಡನೆಯ ಚಿತ್ರ ಪೀನಾ. ಜರ್ಮನ್ ನೃತ್ಯಗುರು ಪೀನಾಳ ವಿದ್ಯಾರ್ಥಿಗಳು  ಮಾಡಿರುವ  ನೃತ್ಯ ಪ್ರಧಾನ ಚಿತ್ರ. ಚಿತ್ರಗಳ ವಸ್ತು-ವಿಧಾನ-ವಿಶೇಷತೆಗಳನ್ನು, ಅವು ಪಡೆದ ಪ್ರಶಸ್ತಿ-ಪ್ರಸಿದ್ಧಿಯನ್ನು ವಿವರಿಸುವುದು ನಮ್ಮ ಉದ್ದೇಶ ಅಲ್ಲ.  ಅವುಗಳನ್ನ್ನು ನೀವು ನೋಡಿಯೇ ಆನಂದಿಸಬೇಕು. 

ರಂಗಭೂಮಿಯಲ್ಲಿ ಕೆಲಸಮಾಡುತ್ತಾ ಅದರ ಬಗ್ಗೆ ಚರ್ಚಿಸುವಾಗ, ಚಿಂತಿಸುವಾಗ ರಂಗಭೂಮಿ ಆರೂ ಲಲಿತಕಲೆಗಳನ್ನು ಬಳಸಿಕೊಳ್ಳುತ್ತದೆ ಎನ್ನುವುದುಂಟು. ಆದರೆ ನಿಜವಾಗಿ ರಂಗಭೂಮಿ ಆ ಆರೂ ಕಲೆಗಳನ್ನು ಒಳಗೊಳ್ಳುವುದಲ್ಲ. ಬದಲಿಗೆ ರಂಗಭೂಮಿಯಿಂದ ಆ ಆರೂ  ಕಲೆಗಳು ಹುಟ್ಟುವವು. ಸಾಮುದಾಯಿಕ ಅಪೇಕ್ಷೆಯ ಮತ್ತು ಆಸಕ್ತಿಯ  ಮೂಲಕ ಹುಟ್ಟಿಕೊಳ್ಳುವ  ರಂಗಭೂಮಿಯ ಈ ಆರೂ ಮಗ್ಗುಲುಗಳು ವಿಶೇಷ ವಯ್ಯಕ್ತಿಕ  ಆಯ್ಕೆ ಮತ್ತು ಪರಿಶ್ರಮದ ಕಾರಣದಿಂದ ವಿಸ್ತಾರವಾದ ಪ್ರತ್ಯೇಕ ಕಲೆಗಳೇ ಆಗಿ ಬೆಳೆದುನಿಂತವು. ಹೀಗಿದ್ದಾಗ ರಂಗಭೂಮಿಯವರ ಪರಿಶ್ರಮ ಮತ್ತು ಅಭ್ಯಾಸ  ಎಷ್ಟು ಆಳವಾಗಿ ನಡೆಯಬೇಕು!




No comments:

Post a Comment