Sunday, March 11, 2012

ಎರಡು ಕಿರುಪದ್ಯಗಳು.

ನಟ


ನಟ
ಹಪಹಪಿಸುತ್ತಾನೆ;
ಬೇಕು- ಬೇಡಾದ್ದೆಲ್ಲಕ್ಕೆ.


ಇದ್ದುದಕ್ಕೆ, ಇಲ್ಲದ್ದಕ್ಕೆ,
ಇಲ್ಲದೇ ಇದ್ದುದಕ್ಕೆ... ಇದ್ದೂ ಇಲ್ಲವಾದ್ದಕ್ಕೆ...


ಅವನ ಕಳವಳ
ಪ್ರಪಂಚಕ್ಕೇ ಅವನ ಬಳುವಳಿ.
ಬೆಳಕೋ ಮಿಂಚೋ ಗೊತ್ತಿಲ್ಲ
ಗೊತ್ತಾಗಬೇಕಾದ್ದೂ  ಇಲ್ಲ.


ತಟ್ಟಿದರೆ ಅರಳಿಕೊಳ್ಳುವ
ಮುಟ್ಟಿದರೆ ಮುಚ್ಚಿಕೊಳ್ಳುವ
ಕಾಲ ಅವನು.


ಕ್ಷಣಕ್ಷಣಕ್ಕೂ ತಳಮಳಿಸುತ್ತಾನೆ
ತನ್ನೊಳಗ ಪ್ರಪಂಚವನ್ನೇ ಅಂಗೈಗೆ ತಂದುಕೊಂಡು
ಪ್ರಾಣದೊಡನೆ ಹೀರಿಬಿಡುತ್ತಾನೆ
ಮತ್ತೂ ಕಳವಳಿಸುತ್ತಾನೆ....



ಮಥನ



ಮೇಲೆ... ಮೇಲೆ...ಮೇಲೆ... ಮೇಲೆ...
ಮೇ....ಲೆ... ಮೇ... ಲೇ....
ಏನಿದೆ? ಕೊಂಬಿದೆ. ಆಕಾಶದ ಬಿಂಬವಿದೆ!
ಬದ್ಧತೆಗಳ ಭರವಸೆಗಳ ಕಪ್ಪಾದ ವಿಶ್ವರೂಪವಿದೆ.
ಮಬ್ಬಾದ ರವಿಕೋಲು - ಹೊಸ ಹುಟ್ಟು ಕಾದಿದೆ.
ಗಾಳಿಗೀಳಿಗೆ ಹೆದರಿ ನಿರ್ವಾತ  ಓಡಿದೆ.
ಭೂಮಿಯೊಳಗಿನ ಒಂಟಿಬಿತ್ತ
ಬಿಸಿಲಲ್ಲಿ ಕಾದದ್ದು, ಕಾದು ಕೆಂಪಾದದ್ದು
ಚಿಗಿಯುತ್ತೆ, ಚಿಮ್ಮುತ್ತೆ!
ಆ-ಕಾಶ ಬಿಂಬದ ಪರಲು ಹರಿದು
ಹೊಸ ಜೀವ ಕಟ್ಟುತ್ತೆ.
ಈಗಾಗಲೇ ಕಟ್ಟುಬಿದ್ದದ್ದು, ಅದು -
ಅರೇಬಿಯಾದ  ಉತ್ತುತ್ತೆ!
ಬಿಗಿಬಿಗಿದು ಧಗಧಗಿಸುವ
ಹವಿಸ್ಸು ಚೆಕ್ಕೆ!

1 comment: