ಯಾವತ್ತಿನ ಹಾಗೆ ಅವತ್ತೂ ಬೆಳಿಗ್ಗೆ ತಡವಾಗಿಯೇ ಮನೆಗೆ ಹೊರಟ ನನ್ನನ್ನು ದಾರಿಯಲ್ಲಿ ಇಳಿ ವಯಸ್ಸಿನ ಒಬ್ಬ ಪರಿಚಿತರು ತಡೆದು ನಿಲ್ಲಿಸಿದರು. ಪರಿಚಿತರು ಅನ್ನುವುದು ನನ್ನ ಸಮಾಧಾನಕ್ಕೆ ಮಾತ್ರ. ನನ್ನ ಊರು ಬಿಟ್ಟು ಈ ಮಲೆಯಾಳ ದೇಶದಲ್ಲಿ ಬಂದು ನಿಂತಿರುವ ನನಗೆ ನನ್ನ ಊರವರಂತೆ ಕಂಡವರೆಲ್ಲ ಪರಿಚಿತರೇ.(ಊರು ಬಿಟ್ಟಿದ್ದೇನೆಂದರೆ ಅಲ್ಲಿಗೆ ನಾನೊಬ್ಬ ಪರದೇಶಿಯಾದಂತೆಯೇ. ಹಾಗೆ ಪರದೇಶಿ ಆದಾಗಲೇ ನನ್ನ ಊರು ಅಂತೊಂದು ಕಲ್ಪನೆ ಬರುವುದಲ್ವ?) ಯಾಕೆಂದರೆ ಇಲ್ಲಿ ಇದೇ ರಸ್ತೆಯಲ್ಲಿ ದಿವಸವೂ ಓಡಾಡುವಾಗ ಎದುರಾದವರಿಗೆ ಅಪರಿಚಿತರು ಅನ್ನುವುದು ಹೇಗೆ? ಹಾಗಂದುಕೊಂಡೆನಾದರೆ ಮೂರೇ ದಿನದಲ್ಲಿ ಈ ಊರು ಬಿಟ್ಟು ಓಡಿ ಹೋಗುವವನು ನಾನು. ನನ್ನ ಈ ಪರಿಚಿತರ ಹೆಸರು, ಕೆಲಸ, ಇಷ್ಟ ಇವುಗಳ ಬಗ್ಗೆ ನನಗೇನೂ ಗೊತ್ತಿಲ್ಲ. ಮಾತೂ ಆಡಿರುವುದಿಲ್ಲ. ಸುಮ್ಮನೆ ಎದುರು ಕಂಡಾಗ ಒಂದು ಸಣ್ಣ ನಗು, ವಯಸ್ಸಿಗೆ ಅನುಸಾರವಾಗಿ ಗೌರವ ಕೊಡುವುದು ಇದು ನನ್ನ ಮತ್ತು (ಅ)ಪರಿಚಿತರ ನಡುವಿನ ಸಂವಾದ ಅಷ್ಟೆ. ಈ ಥರದ ಪರಿಚಿತರು ನನಗೆ ಬಹಳ ಜನ ಇದ್ದಾರೆ.
ಅವತ್ತೂ ಹಾಗೆ. ಆಗಲೇ ತಡವಾಗಿದೆ ಬೇಗ ತಲುಪಬೇಕು ಅಂತಂದುಕೊಂಡು ನಡೆಯುತ್ತಾ ಬರುತ್ತಿದ್ದವನಿಗೆ ಇಳಿವಯಸ್ಸಿನ ಈ ಪರಿಚಿತರು ಎದರಾದರು. ನಮ್ಮ ದಿನದ ಸಂಪ್ರದಾಯದಂತೆ ನಕ್ಕು ಹಿರಿಯರಿಗೆ ತಲೆ ತಗ್ಗಿಸಿ ಮುಂದೆ ದಾಟಬೇಕು ಅವರು ನನ್ನೆದುರಿನಲ್ಲಿ ನಿಂತೇ ಬಿಡೋದ! ಇದೇನಪ್ಪ ಇವತ್ತು ಇವರು ನಮ್ಮ ಯಾವತ್ತಿನ ಸಂಪ್ರದಾಯ ಮುರಿದು ಮಾತಿಗೆ ಆಹ್ವಾನಿಸ್ತಿದ್ದಾರಲ್ಲ ಅಂದುಕೊಂಡು ಅವರ ಮಾತಿಗೆ ಕಾದೆ. ಅವರೂ ಅಷ್ಟೆ (ನನ್ನ ಅನಿಸಿಕೆ ಇದು. ಅವರೊಂದಿಗೆ ಮಾತಾಡಿದ ಮೇಲೆ ಅನ್ನಿಸಿದ್ದು) ಮಾತಿಗೆ ಚಡಪಡಿಸ್ತಿರೋ, ಯಾರೂ ಮಾತಿಗೆ ಸಿಕ್ಕದೆ ದಿನಗಳೇ ಕಳೆದು ಕೊನೆಗೂ ಇವತ್ತು ಇವನನ್ನಾದರೂ ಮಾತಾಡಿಸುವ ಅಂದುಕೊಂಡು ನಿಲ್ಲಿಸಿರಬೇಕು. ನಿಲ್ಲಿಸಿದವರು ಹೇಗೆ ಮಾತಿಗೆ ಇಳಿಯೋದು ಗೊತ್ತಾಗದೆ ಕ್ಷಣ ಗಲಿಬಿಲಿಯಾಗಿ "ಊರಿಂದ ಬರ್‍ತಿರೋದಾ?" (ಹೆಗಲ ಮೇಲಿನ ಬ್ಯಾಗ್ ನೋಡಿ) ಅಂತ ಶುರುಮಾಡಿದರು. ನಾನು "ಇಲ್ಲ. ಕ್ಲಾಸಿಂದ ಬರ್‍ತಿರೋದು, ಬೆಳಿಗ್ಗೆ ಕಲಿಯೋದಕ್ಕೆ ಹೋಗ್ತಿದ್ದೇನೆ" ಅಂದೆ. ಅದಕ್ಕವರು "ಏನು ಕಲೀತಿದ್ದೀಯಾ?" ನಾನು "ಕೂಡಿಯಾಟ್ಟಮ್" ಅಂದೆ "ಓಹೋ ಗೊತ್ತಾಯಿತು ಗೊತ್ತಾಯಿತು ಕಥಕ್ಕಳಿ!" ಅಂದ್ರು. ನಾನು "ಅಲ್ಲ ಕಥಕ್ಕಳಿ ಅಲ್ಲ ಕೂಡಿಯಾಟ್ಟಮ್" ಅಂದ್ರೆ ಅವರು ಹಿರಿತನದ ಗಾಂಭೀರ್ಯದಲ್ಲಿ "ಮನಸಲಾಯಿ ಕಥಕ್, ಕಥಕ್ಕಳಿ, ಕೂಡಿಯಾಟ್ಟಮ್ ಮೋಹಿನಿಯಾಟ್ಟಮ್ ಎಲ್ಲಾ ಗೊತ್ತು" ಅಂದ್ರು.
ನಾನು ಏನು ಹೇಳುವುದಕ್ಕೂ ತೋಚದೆ, (ಇಲ್ಲಿ ಹೆಚ್ಚಾಗಿ ಕಥಕ್ಕಳಿಯನ್ನು ಜನ ನೋಡೋದ್ರಿಂದ, ಕೂಡಿಯಾಟ್ಟಮ್ ತುಂಬಾ ಕಡಿಮೆ ನೋಡೋದಕ್ಕೆ ಸಿಕ್ಕೋದ್ರಿಂದ ಅಲ್ಲದೆ ಕಥಕ್ಕಳಿ ಮಲಯಾಳಮ್ ಭಾಷೆಯಲ್ಲಿ ಇರೋದ್ರಿಂದ ಕೂಡಿಯಾಟ್ಟಮ್ ಕಥಕ್ಕಳಿ ಎರಡೂ ಒಂದೇ ಅಂತ ಹೆಚ್ಚಿನವರು ಅಂದುಕೊಂಡಿದ್ದಾರೆ) ಅವರಿಗೆ ಕೂಡಿಯಾಟ್ಟಮ್ ಅನ್ನೋದು ಕಥಕ್ಕಳಿಗಿಂತ ಬೇರೆಯದೇ ಅಂತ ಹೇಗೆ ಮಲಯಾಳಮ್ನಲ್ಲಿ ತಿಳಿಸೋದು ಅಂದುಕೊಳ್ಳುತ್ತಾ, ಬೇಡ ಇಲ್ಲಿಗೇ ಮಾತು ನಿಲ್ಲಿಸಿ ಹೊರಡೋದು ಅಂತಿರಬೇಕಾದ್ರೆ ಅವರೋ ಹಿರಿಯರ ಗತ್ತು ಮತ್ತು ಅವರದೇ ನಿಧಾನ ಲಯದಲ್ಲಿ "ದೇವಸ್ತಾನಕ್ಕೆ ಹೊರಟಿದ್ದೆ, ದಾರಿಯಲ್ಲಿ ಕೃಷ್ಣಪರಮಾತ್ಮನೇ ಸಿಕ್ಕಿದ ಹಾಗಾಯ್ತು. ಕಥಕ್ಕಳಿಯಲ್ಲಿ ನಿಂದು ಕೃಷ್ಣನ ಪಾತ್ರವಾ?" ಅಂದರು.
ನಾನೋ ಆಗಲೇ ತಡವಾಗಿದೆ, ಇವರಿಂದ ಬಿಡಿಸಿಕೊಂಡು ಹೊರಡುವುದು ಹೇಗಪ್ಪಾ ಅನ್ನೋ ಲೆಕ್ಕಾಚಾರದಲ್ಲಿದ್ದರೆ, ಅಪರೂಪಕ್ಕೆ ಮಾತಿಗೆ ಸಿಕ್ಕಿರುವ ನನ್ನನ್ನು ಅಷ್ಟು ಸುಲಭಕ್ಕೆ ಬಿಟ್ಟುಬಿಡುವಂತಿರಲಿಲ್ಲ ಅವರು. "ಯಾವ ಊರು? ಎಲ್ಲಿಯವ?" ಅಂತ ಮಾತಿಗೆಳೆದರು. ನಾನು ಅರೆ ಮನಸ್ಸಿನಲ್ಲಿ "ಕರ್ನಾಟಕ" ಅಂದದ್ದೆ ಅವರು "ಓ ಮನಸಲಾಯಿ ಬೆಂಗ್ಳೂರ್ ಅಲ್ಲೆ, ಯಾನ್ ಅವುಡೆ ಮೂನು ವಲ್ಲ ಉಂಡಾಯಿರುನ್ನು, ತಿಂಡಿ ಆಯ್ದಾ? ಊಟ ಬೇಗಾ? ಹಹಹ ಕನ್ನಡಿಯಲ್ಲೆ?" ಅಂದರು. ನಾನದಕ್ಕೆ ಏನು ಹೇಳುವುದಕ್ಕೂ ತೋಚದೆ ಹೊರಡುವ ಹುನ್ನಾರದಲ್ಲಿದ್ದರೆ ಅವರು ಮತ್ತೆ "ಬೆಂಗಳೂರಲ್ಲಿ ಎಲ್ಲಿ? ನನ್ನ ದೊಡ್ಡಪ್ಪನ ತಂಗಿಯ ಮಗ ಅಲ್ಲೇ ಇರೋದು. ನಾನು ನನ್ನ ಮಗನ ಜೊತೆ ಅಲ್ಲಿದ್ದೆ, ಯಾವುದದು ಏರಿಯಾ... ಸದಾಶಿವನಗರ?" ಕರ್ನಾಟಕ ಅಂದರೆ ಬೆಂಗಳೂರು ಮಾತ್ರ ಅಂದು ಕೊಂಡ ಹಾಗೆ ಇದ್ದಾರಲ್ಲಾ, ನಾನೋ ಬೆಂಗಳೂರು ಅಂದ್ರೆ ಮಾರು ದೂರ ಹಾರಿ ನಿಲ್ಲೋನು ನನಗೆ ಸದಾಶಿವನಗರವೂ ಗೊತ್ತಿಲ್ಲ ಏನೂ ಗೊತ್ತಿಲ್ಲ... "ಅಲ್ಲ ಶಿವಮೊಗ್ಗ" ಅಂದರೆ ಅವರು ಬೆಂಗಳೂರಿನ ಏರಿಯಾದ ಹೆಸರುಗಳಲ್ಲಿ ಶಿವಮೊಗ್ಗವನ್ನ ನೆನಪಿಸಿಕೊಳ್ಳಲು ತಡಕಾಡಿದರು. ಅವರಿಗೆ ಬೆಂಗಳೂರಲ್ಲಿ ಎಲ್ಲಿಯೂ ಶಿವಮೊಗ್ಗ ಎಂಬ ಏರಿಯಾದ ಹೆಸರು ಸಿಕ್ಕದೆ ಒದ್ದಾಡುತ್ತಿರುವಾಗ ನಾನು "ಕೊಲ್ಲೂರು ಗೊತ್ತಾ?" ಅಂದೆ. ಮತ್ತೆ ಗೆಲುವಾಗಿ "ಮೂಕಾಂಬಿಕಾ ಕ್ಷೇತ್ರ! ಓ ಅರಿಯುಮ್ ನಾನು ಹೋಗಿದ್ದೇನೆ ಅಲ್ಲಿಗೆ ಕುಟಚಾದ್ರಿ! ಓ... ಅಲ್ಲಿ ಅಲ್ವ ನಿಮ್ಮ ಮನೆ!" ಅಂದ್ರು. ಸಾಕು ಮತ್ತೂ ನನ್ನ ಮನೆಯ ಹತ್ತಿರ ಅವರನ್ನು ಕರೆದುಕೊಂಡು ಹೋಗಲು ಸಾದ್ಯವೇ ಇಲ್ಲ ಎಂದು ತೀರ್ಮಾನಿಸಿ "ಹುಮ್ ಅಲ್ಲಿಂದ ಸುಮಾರು ೭೦ ಕಿಲೋಮೀಟರ್ ಆಗ್ತದೆ ನಮ್ಮೂರು" ಅಂದೆ. "ಓ ಅವುಡೆ ಪೋಯಿಟ್ಟುಂಡು ಎಲ್ಲ ಅರಿಯುಮ್" ಅಂದ್ರು.
ನಾನೋ ದೇವ್ರೇ ಯಾಕಪ್ಪಾ ನಾನು ನಮ್ಮೂರಿನ ಸುದ್ದಿ ತೆಗೆದೆ ಇಲ್ಲೇ ಯಾವುದಾದರೂ ಊರಿನ ಹೆಸರು ಹೇಳ್ಬೋದಿತ್ತು ಅಂತೆಲ್ಲಾ ಯೋಚಿಸಿ ಹೋರಡಲು ತಯಾರಾಗಿ ಉದ್ದ ಉಸಿರೆಳೆದು ಇನ್ನೇನು "ಶೆರಿ ಪೋಟ್ಟಾ?" ಅಂತನ್ನಬೇಕು... ಆ ಹಿರಿಯರು ಗಂಭೀರವಾಗಿ ಮಾತು ತೆಗೆದರು. "ಮೋನೆ ಇವತ್ತು ನನ್ನ ಮೊಮ್ಮಗನ ಹುಟ್ಟು ಹಬ್ಬ. ಅವರು ಗಲ್ಫಲ್ಲಿರೋದು. ಅವರ್‍ಯಾರೂ ಇಲ್ಲಿಗೆ ಬರಲ್ಲ. ನಾವೆಲ್ಲ ಹಳಬರು ಅವರಿಗೆ... ಸರಿ ಹೋಗುವುದಿಲ್ಲ. ಅದಕ್ಕೆ ನಾನೂ ಅಲ್ಲಿಗೆ ಹೋಗಲ್ಲ, ಬನ್ನಿ ಅಂತನೂ ಕರೆದಿಲ್ಲ, ಅದಕ್ಕೆ ದೇವಸ್ಥಾನಕ್ಕೆ ಹೊರಟಿದ್ದೆ. ಹೊತ್ತೂ ಹೋಗಬೇಕಲ್ಲ..." ಅಂತ ನಿಟ್ಟುಸಿರಿಟ್ಟರು. ನಾನೂ ಕ್ಷಣ ಹೊತ್ತು ಎಲ್ಲ ಮರೆತು ಏನು ಹೇಳೋದಕ್ಕೂ ಗೊತ್ತಾಗದೆ ಅವರ ಕೈ ಹಿಡಿದು ಕೊಂಡು ನಿಂತೆ. ಏನನ್ನಿಸಿತೋ... ಮಕ್ಕಳ, ಮೊಮ್ಮಕ್ಕಳ ನೆನಪೋ ಏನೋ... "ಮೋನೆ ನಿಂಡೆ ಪೇರ್ ಪರ, ನಿನ್ನ ಹೆಸರಲ್ಲೂ ಒಂದು ಪೂಜೆ ಮಾಡಿಸುವ. ಬೇಗ ಕಲಿತು ನಿನ್ನದೊಂದು ಕೃಷ್ಣವೇಷ ನೋಡೋ ಭಾಗ್ಯ ನನಗೆ ಬರಲಿ. ೧೦ ರೂಪಾಯಿ ಅಷ್ಟೆ ಪೂಜೆಗೆ" ಅಂದರು. ನಾನೂ ಅವರನ್ನು ಬೇಸರಿಸುವ ಮನಸ್ಸಿಲ್ಲದೆ ಹಣ ತೆಗೆದು ಕೊಟ್ಟೆ, ಮತ್ತೆ "ಶೆರಿ ಪೋಟ್ಟಾ" ಅಂದು ಹೊರಟರೆ "ಮೋನೆ ಕಥಕ್ಕಳಿ ವೇಷ ಹಾಕುವಾಗ ಹೇಳು ನಾನೂ ಬರ್‍ತೇನೆ" ಅಂದ್ರು. ನಾನು "ಕಥಕ್ಕಳಿ ಅಲ್ಲ ಕೂಡಿಯಾಟ್ಟಮ್" ನಗುತ್ತಾ ಅಂದ್ರೆ ಅವರು "ಓ ಮನಸಲಾಯಿ ಮನಸಲಾಯಿ ಕಥಕ್ಕಳಿ..." ಎನ್ನುತ್ತಾ ಹೆಜ್ಜೆ ಹಾಕಿದರು.
tummmmba chanagide....munduvaresi......
ReplyDelete