ಒಂದು ನಾಟಕವನ್ನು ಕೂಡಿಯಾಟ್ಟಮ್ ಪ್ರಕಾರದಲ್ಲಿ ಮಾಡೋದಾದ್ರೆ 7-8 ದಿವಸ ಬೇಕು. ಅಂದ್ರೆ (ಹಿಂದೆ 21- 41 ದಿನ ತೆಗೆದು ಕೊಂಡದ್ದೂ ಇದೆ.) ನಿಮಗೆ ಇದು ಆಶ್ಚರ್ಯದ ಸಂಗತಿ ಅನ್ನಿಸಬಹುದು. ಒಂದು ಶ್ಲೋಕವನ್ನು ನಾವು ಅಭಿನಯಿಸೋದಂದರೆ ಅಲ್ಲಿ ನಾಲ್ಕು ಥರದ ಕ್ರಮ ಇದೆ. ಮೊದಲು ಮುದ್ರೆ ಜೊತೆಗೆ ಶ್ಲೋಕವನ್ನು ಅಭಿನಯಿಸೋದು, ನಂತರ ಬರೇ ವಾಚನ, ನಂತರ ಆ ಶ್ಲೋಕವನ್ನ ಅರ್ಥವಾಗುವ ಕ್ರಮದಲ್ಲಿ ವಾಚಿಸಿ, ಕೊನೆಯದಾಗಿ ಶ್ಲೋಕದ ಸಂದರ್ಭದೊಡನೆ ಅಭಿನಯ. ಇಲ್ಲಿ ಶ್ಲೋಕದ ಹಿಂದಿನ ಸಂದರ್ಭವನ್ನೂ ಹೇಳಿ ಅಭಿನಯಸಬೇಕಾಗುತ್ತದೆ. ಅಂದರೆ ಈಗ ರಾವಣನ ವನಪಾಲಕನೊಬ್ಬನ ಒಂದು ಶ್ಲೋಕವಿದೆ ಅಂತಿಟ್ಟುಕೊಳ್ಳಿ. ೪ ಸಾಲಿನ ಶ್ಲೋಕ ಅದು. ಸಾರಾಂಶ ಇಷ್ಟೆ- ಮಂಡೋದರಿ ಶೃಂಗಾರ ಪ್ರಿಯಳಾಗಿದ್ದರೂ ಕೂಡ ಗಿಡದ ಮೇಲಿನ ಪ್ರೀತಿಯಿಂದ ಅದಕ್ಕೆ ನೋಯಿಸಬಾರದು ಅಂತ ಹೂ ಕೊಯ್ಯುತ್ತಿಲ್ಲ, ಅದನ್ನು ಕಂಡು ರಾವಣನು ವರುಣನಿಗೂ, ಸೂರ್ಯನಿಗೂ ತಾಕೀತು ಮಾಡಿರುತ್ತಾನೆ. ಹಾಗಾಗಿ ಅಲ್ಲಿ ಯಾವುದೇ ಹಾನಿಯಿಲ್ಲದೆ ಉದ್ಯಾನವನ ಸೊಂಪಾಗಿ ಬೆಳೆದಿದೆ. ಆ ಅಂತಹಾ ವನವನ್ನು ಹನುಮಂತ ಹಾಳುಗೆಡವಿದ್ದಾನೆ. ಇದು ಶ್ಲೋಕದ ಸಾರಾಂಶ. ಇಲ್ಲಿ ಅಭಿನಯಕ್ಕೆ ಬಂದಾಗ ಕೊನೆಯದಾಗಿ "ಅದು ಹೇಗೆ" ಎಂದರೆ ಅಂತ ಮಂಡೋದರಿಯಾಗಿ ಅಭಿನಯಿಸ ತೊಡಗುತ್ತಾನೆ. ಮಂಡೋದರಿ ಶೃಂಗರಿಸಿಕೊಂಡು ಸಖಿಯರೊಂದಿಗೆ ಇರುವಾಗ ಅವಳಿಗೆ ತನ್ನ ಶೃಂಗಾರದಲ್ಲಿ ಏನೋ ಕೊರತೆ ಇದೆ ಎನ್ನಿಸಿ ಯೋಚಿಸುವಾಗ ಕಿವಿಗೆ ಆಭರಣ ಇಲ್ಲದ್ದು ಅರಿವಿಗೆ ಬಂದು ಉದ್ಯಾನದ ತಳಿರನ್ನು ಕೊಯ್ಯ ಹೋಗುತ್ತಾಳೆ. ಕೊಯ್ಯಲು ಹೋದಲ್ಲಿ ಗಿಡದ ಬಗ್ಗೆ ಕನಿಕರ ಹುಟ್ಟಿ ಕೊಯ್ಯದೆ ಹಿಂತಿರುಗುತ್ತಾಳೆ. ಇದಿಷ್ಟನ್ನು ಅಭಿನಯಿಸಲಿಕ್ಕೆ ಕನಿಷ್ಟ ೨೦ ನಿಮಿಷ ಬೇಕು. ಇದರ ನಂತರ ನಟ ಮತ್ತೆ ಉದ್ಯಾನದ ಚಂದವರ್ಣಿಸಲಿಕ್ಕೆ ತೋಡಗಿದ ಅಂದ್ರೆ? ಅದೆಲ್ಲ ಆದ ಮೇಲೆ ಹನುಮಂತ ಇಂಥಾ ವನವನ್ನು ಕೆಡಿಸಿದ ಅಂತ ಹೇಳಬೇಕು ಆಗ ಮತ್ತೆ ಕಥೆ ಮುಂದೆ ಹೋಗ ತೊಡಗುತ್ತದೆ. ಇದು ಕೂಡಿಯಾಟ್ಟಮ್‌ನ ನಟನಾ ಕ್ರಮ. ಅಲ್ಲಿಗೆ ನಿಮಗೇ ಕಲ್ಪನೆಗೆ ಬರುತ್ತದೆ ಸಮಯ ಎಷ್ಟು ಬೇಕು ಎಂಬುದು.
ಕೂಡಿಯಾಟ್ಟಮ್ ನಲ್ಲಿ ಉಪಯೋಗಿಸುವ ನಾಟಕಗಳು ಭಾಸನವು. ಇಲ್ಲಾ ಶಕ್ತಿಭದ್ರನವು. ಇವರ ಕೃತಿಗಳಲ್ಲಿ ನಟರ ಅಭಿವೆಕ್ತಿಗೆ ಬೇಕಾದ ಸ್ವಾತಂತ್ರ್ಯವಿದೆ. ಕೂಡಿಯಾಟ್ಟಮ್ ಸಂಸ್ಕೃತ ನಾಟಕಗಳನ್ನ ಅವಲಂಬಿಸುವುದು ಅಷ್ಟೆ. ನಾಟಕಾವಧರಣ ಅಂದಾಗ ಮಾತ್ರ ನಾಟಕಕ್ಕೇ ಹೆಚ್ಚು ಪ್ರಾಮುಖ್ಯತೆ. ಇಲ್ಲದಿದ್ದಾಗ ನಾಟಕಾವಲಂಬಿ ಅಷ್ಟೇ. ಕಾಳಿದಾಸನ ಲೋಕ ಶಾಕುಂತಲ ಜಗತ್ತಲ್ಲೇ ಪ್ರಸಿದ್ಧ. ಆದರೆ ಕೂಡಿಯಾಟ್ಟಮ್ನಲ್ಲಿ ಇದನ್ನು ಪ್ರಯೋಗಿಸುತ್ತಿರಲಿಲ್ಲ. ಅಲ್ಲಿ ಕಾಳಿದಾಸ ಬರಿದೇ ನಾಟಕಕ್ಕೆ ಬೇಕಾದ ಕಾರ್ಯವನ್ನಷ್ಟೇ ಹೇಳದೆ ಪ್ರತಿಯೊಂದನ್ನೂ ವರ್ಣಸಿ, ಬಿಡಿಸಿ ಹೇಳುತ್ತಾ ಹೋಗುತ್ತಾನೆ. ಆಗ ಅಲ್ಲಿ ನಟನಿಗೆ ಏನೂ ಕೆಲಸವಿಲ್ಲ. ಕವಿ ಎಲ್ಲವನ್ನೂ ತಿಳಿಸಿರುತ್ತಾನೆ. ಅದನ್ನುಹಾಗೇ ಮಾಡಿ ತೋರಿಸಿದರಾಯಿತು. ಆದರೆ ಭಾಸನ ನಾಟಕಗಳು ಹಾಗಲ್ಲ, ಅಲ್ಲಿ ಅವನು ಬಿತ್ತನ್ನು ಮಾತ್ರ ಇಟ್ಟಿರುತ್ತಾನೆ. ರಾವಣ ಕೈಲಾಸ ಪರ್ವತವನ್ನು ಬಿಸಾಡಿದ ಅಂದು ಬಿಡುತ್ತಾನೆ. ಅಲ್ಲಿ ಉಳಿದದ್ದನ್ನು ನಟ ಸೃಷ್ಟಿಸಿಕೊಳ್ಳಬೇಕು. ಹಾಗಾಗಿ ಇಲ್ಲಿ ನಮಗೆ ಭಾಸನ ನಾಟಕ ಬಹಳ ಅನುಕೂಲ. ನಮ್ಮ ಕಲ್ಪನಾ ಲೋಕಕ್ಕೆ ಪಾತ್ರವನ್ನು ವಿಸ್ತರಿಸಿಕೊಳ್ಳಬಹುದು. ಕೈಲಾಸ ಪರ್ವತ ಹೇಗಿತ್ತು, ಮೇಲೆ ಯಾರಿದ್ದರು, ಏನು ನಡೀತಿತ್ತು ಅಲ್ಲಿ... ಅದೆಲ್ಲ ನಟನ ಕಲ್ಪನೆಗೆ ಬಿಟ್ಟದ್ದು. ಹಾಗಾಗಿ ಕೈಲಾಸೋದ್ಧರಣಮ್ ಅನ್ನೋ ಪ್ರಸಂಗ ಬಂತು. ಅದು ಕೂಡ "ಅಶೋಕವನನಿಕಾಂಕಮ್" ನಲ್ಲಿ ಬರುವ ಒಂದು ಶ್ಲೋಕ. ರಾವಣ ಹನುಮಂತನ ಆಗಮನದ ವಿಷಯ ಕೇಳಿ ನೆನಪಿಸಿಕೊಳ್ಳುವ ಸಂದರ್ಭ. ಬರೀ ಆ ಶ್ಲೋಕದ ಅಭಿನಯಕ್ಕೇ ಒಂದು ರಾತ್ರಿ ಕಳೆದು ಬಿಡುತ್ತದೆ. ಹಾಗಾಗಿ ಇಂತಹ ಕೃತಿಗಳನ್ನೇ ಕೂಡಿಯಾಟ್ಟಮ್ ಆರಿಸಿಕೊಳ್ಳುತ್ತದೆ. ಇಲ್ಲಿ ನಟನಿಗೆ ಅಭಿನಯಕ್ಕೆ ಬೇಕಾದ ಸ್ವಾತಂತ್ರ್ಯವಿದೆ
-ಗುರು ಮಾರ್ಗಿ ಸಜೀವ್ ನಾರಾಯಣ ಚಾಕ್ಯಾರ್.

No comments:
Post a Comment