ಪದ್ಯ - 5
ಕ್ಷಣ ಹೊತ್ತು ನಿನ್ನ ಮಗ್ಗಲು ಕೂರಲು ಬಿಡು ನನಗೆ
ಹೊತ್ತಿರುವ ಹೊರೆಗೆಲಸ ಮುಗಿಸುತ್ತೇನಂತೆ ಆಮೇಲೆ
ನಿನ್ನ ಮುಖ ಮರೆಯಾದೊಡನೆ
ಅತ್ತ ಆರಾಮವಿಲ್ಲ ಹೃದಯಕ್ಕೆ
ಇತ್ತ ವಿರಾಮವೂ ಇಲ್ಲ.
ಆಗುತ್ತವೆ ಮತ್ತೆ ಕೆಲಸಗಳೆಲ್ಲ
ಪಾರವಿಲ್ಲದ ಶ್ರಮದ ಸಾಗರದಲ್ಲಿ
ಕೊನೆಯಿಲ್ಲದ ಜೀತ.
ಇಂದು ವಸಂತ ನನ್ನ ಕಿಟಕಿಯೆದುರಲಿ ಬಂದು
ಗುಟ್ಟುಗಳ ಪಿಸುಗುಟ್ಟಿ ನಿಡುಸುಯ್ದಿದೆ.
ಮತ್ತೆ ಅಂಗಳದೆದುರು ಹೂಬಿಟ್ಟ ತೋಟದಲಿ
ದುಂಬಿಕೂಟ ಕಛೇರಿ ಕೊಟ್ಟಿದೆ.
ಈಗ ಇದು ಸಮಯ
ಕೂರುವುದಕ್ಕೆ ಸುಮ್ಮನೆ.
ನಿನ್ನ ಕಣ್ಣಿಗೆ ಕಣ್ಣು ಕೂಡುವುದಕ್ಕೆ
ಮತ್ತೆ ತುಳುಕುತ್ತಿರುವ ಮೌನದೀ ಬಿಡುವಿನಲಿ
ಬದುಕ ಭಕ್ತಿಯ ಗೀತ ಹಾಡಲಿಕ್ಕೆ.
ಪದ್ಯ - 6
ತಡಮಾಡದೆ ಈ ಹೂವ ಕೊಯ್ದು ಕೊಳ್ಳು.
ಅದು ಉದುರಿ ಧೂಳಾದೀತೆಂದು ಭಯ ನನಗೆ.
ಸ್ಥಳ ಸಿಕ್ಕದಿರಬಹುದು ನಿನ್ನ ಹೂಮಾಲೆಯಲಿ
ಕೊನೆಯ ಪಕ್ಷ ನೋವಿನೊಂದು ಸ್ಪರ್ಶದಿಂದ
ಗೌರವಿಸಿ ಅದನ್ನ ನನ್ನ ಹಸ್ತದಿಂದ ಕೊಯ್ದು ಕೊಳ್ಳು.
ಎಚ್ಚರವಾಗುವ ಮೊದಲೇ ದಿನ ಕೊನೆಯಾದೀತೆಂದು
ಅರ್ಪಣೆಯ ಸಮಯ ದಾಟಿ ಹೋದೀತೆಂದು ಭಯ ನನಗೆ.
ಗಾಢವಾಗಿಲ್ಲದಿರಬಹುದು ಬಣ್ಣ
ತೀರ ಮೆಲುವಾಗಿರಬಹುದು ಗಂಧ
ನಿನ್ನದೇ ಸೇವೆಯಲಿ ಬಳಸಿ ಈ ಹೂವ
ಸಮಯವಿರುವಾಗಲೇ ಕೊಯ್ದು ಕೊಳ್ಳು.

No comments:
Post a Comment