Wednesday, June 26, 2013

ಕೊನೆ ಕಾಣದ ಕಥೆ.

ಪ್ರತೀ ಸಲ ಯಾವುದಾದರು ಕತೆಯನ್ನು ಓದುತ್ತಿರುವಾಗಲೇ ನನಗೂ ನಾನೂ ಒಂದು ಕತೆ ಬರೆಯಬೇಕೆಂಬ ಹುಚ್ಚು ಕೆರಳಿ ಏನೇನನ್ನೋ ಬರೆಯಲು ಯತ್ನಿಸಿ ಕೊನೆಗೆ ಎಲ್ಲಿಗೂ ಮುಟ್ಟದೆ ನಿಂತ ಹಲವಾರು ಪ್ರಯತ್ನಗಳಲ್ಲಿ ಇದೂ ಒಂದು. ಹಂಚಿಕೊಳ್ಳಲು ಧೈರ್ಯ ಸಾಲದು. ಆದರೂ ಹುಂಬತನ.


1.

ಕ್ಷಣಕ್ಷಣವೂ ಯುಗದಂತೆ ಭಾಸವಾಗುತ್ತಾ ಕಳೆವ ಪ್ರತಿನಿಮಿಷವೂ ಅವಳ ಧ್ಯರ್ಯವನ್ನು ಕುಗ್ಗಿಸುತ್ತಾ ಅಧೀರಳನ್ನಾಗಿಸುತ್ತಿತ್ತು. ದಿನವೂ ೪ ಗಂಟೆಗೆಲ್ಲಾ ಬರುವ ಶಾಲೆಯ ಬಸ್ಸು ಇಂದು ೪ ೧೫ ಆದರೂ ಇನ್ನೂ ಬಾರದಿದ್ದದ್ದು ಅವಳ ಮನಸ್ಸಿನಲ್ಲಿ ಏನೇನೋ ಕಲ್ಪನೆಗಳನ್ನು ಮೂಡಿಸುತ್ತಿತ್ತು. ಇನ್ನೂ ೫ ನಿಮಿಷ ನೋಡ್ತೇನೆ ಬರಲಿಲ್ಲಾಂದ್ರೆ ಪ್ರದೀಪನಿಗೆ ಪೋನ್ ಮಾಡ್ತೇನೆ ಎಂದುಕೊಳ್ಳುತ್ತಾ ಸಮಯ ನೋಡಿದಳು ೪ ೧೬. ತಲೆಯೆಲ್ಲಾ ಬಿಸಿಯೇರಿ ಯಾರೋ ತಲೆಯ ಮೇಲೆ ಬಿಸಿನೀರು ಸುರಿದಂತೆ ಅನ್ನಿಸಿ ನಿಂತಲ್ಲಿ ನಿಲ್ಲಲೂ ಆಗದೆ ಅತ್ತುಬಿಡಬೇಕೆನಿಸಿ ಕಣ್ಣಲೆಲ್ಲಾ ನೀರು ತುಂಬಿ ಇನ್ನೇನು ಅತ್ತುಬಿಡುತ್ತೇನೆ ಎನಿಸಿದಾಗ ರಸ್ತೆಯಲ್ಲಿರುವುದು ನೆನಪಾಗಿ ಹಾಗೆ ತಡೆಹಿಡಿದು, ಉಸಿರು ಬಿಗಿಹಿಡಿದು ನಿಂತಳು.

ಯಾವತ್ತೂ ಹಾಗೆ ಈ ಬಸ್ಸಿನವರು ಬೇಗಬರೋದೆ ಇಲ್ಲ. ೮ ೧೫ ಅಂತಾರೆ ಬರೋದು ೮ ೨೦ರ ನಂತರವೇ. sಆದರೆ ಸಂಜೆ ಮಾತ್ರ ಹೇಳಿದಕ್ಕಿಂತ ಮೊದಲೇ ಬಂದು ಬಿಡುವವ... ಇವತ್ತೇನಾಯ್ತು ಗೊತ್ತಾಗ್ತಿಲ್ಲ. ಸಮಯ ನೋಡಿದವಳು ತಡೆಯದೆ ಪ್ರದೀಪನಿಗೆ ರಿಂಗ್ ಮಾಡಿದಳು. ಅವನೋ ಅವಳ ಗಾಬರಿಯನ್ನು ಸಹಜವಾಗಿಯೇ ತಗೆದುಕೊಂಡು ಇನ್ನೂ ೧೦ ನಿಮಿಷ ನೋಡು ಆಮೇಲೆ ಸ್ಕೂಲ್ ಆಫೀಸ್‌ಗೆ ಪೋನ್ ಮಾಡು. ಎಲ್ಲೋ ಟ್ರಾಫಿಕ್‌ನಲ್ಲಿ ಸಿಕ್ಕಿರಬೇಕು. ಗಾಬರಿ ಏನು ಮಾಡ್ಕೋಬೇಡ. ಟೀಚರ್‌ದು ನಂಬರ್ ಇದ್ರೆ ಫೋನ್ ಮಾಡು ಅಂದವನೇ ಫೋನ್ ಕಟ್ ಮಾಡಿದ. ಪ್ರದೀಪನೋ ಅವನಿಗೇನೂ ಅರ್ಥವಾಗೋದೇ ಇಲ್ಲ! ಈ ಕಡೆಯಿಂದ ಆ ಶಾಲೆಗೆ ಹೋಗೋ ಮಕ್ಕಳೂ ಬೇರೆ ಯಾರೂ ಇಲ್ಲ. ಈ ಸಲ ಮೀಟಿಂಗ್‌ಗೆ ಹೋದಾಗ ಮಾತಾಡ್ಲೇಬೇಕು. ಇಲ್ಲಿಗೇ ಬಿಡಬಾರ್‍ದು. ಅಂದುಕೊಳ್ಳುತ್ತ ಕುತ್ತಿಗೆ ಉದ್ದಮಾಡತೊಡಗಿದಳು. ಕಣ್ಣೆಲ್ಲಾ ಕೆಂಪಾಗಿ ನೀರು ತುಂಬಿ ಇನ್ನೇನು ಅಳು ಶುರುವಾಗೇಬಿಡತ್ತೆ ಅಂದುಕೊಂಡವಳೇ ವಾಚ್ ನೋಡಿದಳು ೪ ೧೯ ಅಯ್ಯೋ ಇನ್ನೂ ಬಂದಿಲ್ಲ ಛೇ!  ಬರಲಿ ಇವತ್ತು ಡ್ರೈವರನಿಗೆ ಕಾದಿದೆ ಎನ್ನುತ್ತಾ ಮುಖವರೆಸಿ ಕಣ್ಣನ್ನು ಅಡಗಿಸಲು ಕನ್ನಡಕವನ್ನೇರಿಸಿದಳು. ಮತ್ತೊಮ್ಮೆ ಗಾಡಿಯ ಕನ್ನಡಿಯಲ್ಲಿ ಮುಖನೋಡಿ ತೀಡಿಕೊಂಡಳು. ಉಸಿರನ್ನೊಮ್ಮೆ ಖಾಲಿ ಮಾಡಿ ರಸ್ತೆನೋಡಲು ದೂರದಲ್ಲಿ ಹಳದಿಬಣ್ಣದ ಬಸ್ಸೊಂದು ಏದುಸಿರು ಬಿಡುತ್ತಾ ಬರುತ್ತಿರುವುದು ಕಂಡಿತು.

ಬಸ್ಸು ಹತ್ತಿರಬರುತ್ತಿದ್ದಂತೆ ಮಕ್ಕಳ ಕಲರವ ಕೇಳತೊಡಗಿತು. ಇವಳನ್ನ ಕಂಡ ಡ್ರೈವರನು ಮುಖ ಸಣ್ಣದಾಗಿಸುತ್ತಾ ಮೇಡಮ್ ಕೋಪ ಮಾಡ್ಕೋಬೇಡಿ ಟ್ರಾಫಿಕ್ ನಿಮಗೂ ಗೊತ್ತಲ್ವಾ? ಅಷ್ಟೇ ಸಾಕಾಗದೆ ಅದೇನೋ ಗಲಾಟೆ ಬೇರೆ. ಮಕ್ಕಳಿದ್ದಾರೆ ಬಸ್ಸಲ್ಲಿ. ಅದಕ್ಕೆ ರೂಟ್ ಎಲ್ಲ ಚೇಂಜ್ ಮಾಡಿ ಬಂದೆ ಮೇಡಮ್ಮೋರೆ. ಕೈಯಲ್ಲಿ ಗೇರ್‌ಲಿವರ್ ಹಿಡಿದುಕೊಂಡು ಅಂದ.

ಪಾಪ ಅನ್ನಿಸಿತಾದರೂ ತೋರಿಸಿದೆ ಮುಖ ಬಿಗುಮಾಡಿಕೊಂಡು ಮಗಳ ಕೈ ಹಿಡಿದು ಬಿರಬಿರನೆ ನಡೆದಳು. ಮಗುವನ್ನು ಗಾಡಿಯಲ್ಲಿ ಕೂರಿಸಿ ಹೊರಡಬೇಕು ಅನ್ನುವಷ್ಟರಲ್ಲಿ ಬಸ್ಸು ಪ್ಯಾ ಅಂತ ಬೊಬ್ಬೆಹೊಡೆಯುವುದೂ ಮಗು ಖುಷಿಯಲ್ಲಿ ಗಾಳಿಯಲ್ಲಿ ಕೈ ಆಡಿಸುವುದು ಒಟ್ಟಿಗೇ ಆಯಿತು. ಇದು ಮಕ್ಕಳ ಮತ್ತು ಬಸ್ಸಿನ ಯಾವತ್ತಿನ ಕ್ರಮವೇ ಆದರೂ ಇಂದಿನ ಮಟ್ಟಿಗೆ ಇವಳ ಕೋಪಕ್ಕೆ ತುಪ್ಪಸುರಿದಂತೆ ಆಯಿತು. 

-ದಿಗ್ವಿಜಯ

1 comment: