Saturday, July 27, 2013

ನಾಟ್ಯದ ಹಾದಿ- ಏಳನೇ ಹೆಜ್ಜೆ.


ಮುದ್ರೆಗಳು ಕೂಡಿಯಾಟ್ಟಮ್ನ ಮುಖ್ಯ ಭಾಗ. ಹಾಗಾಗಿ ನಮ್ಮ ಅಭ್ಯಾಸದ ಹೆಚ್ಚಿನ ಸಮಯ ಮುದ್ರೆಗಳಿಗೇ ಕೊಡಲು ಆರಂಭಿಸಿದೆವು. ಕೂಡಿಯಾಟ್ಟಮ್ನಲ್ಲಿ ಮುಖ್ಯ ಮುದ್ರೆಗಳು ಇಪ್ಪತ್ತನಾಲಕ್ಕು. ಇವು ಮೂಲ ಮುದ್ರೆಗಳು. ಅಷ್ಟಲ್ಲದೆ ಕೆಲವು ವಿಷೇಶ ಮುದ್ರೆಗಳು ಕೂಡಾ ಬಳಕೆಯಾಗುತ್ತದೆ. ಉದಾಹರಣೆಗೆ ಪೂಜಾ ವಿಧಿಗಳಲ್ಲಿ ಬಳಸುವ ಕೆಲಮುದ್ರೆಗಳು.

ಮುದ್ರೆಗಳು ಅದು ಆ ಭಾವದ ಉದ್ದೀಪನೆಗಾಗಿ. ಅದೂ ಕೂಡ ನಟನಲ್ಲಿ ಮತ್ತು ಪ್ರೇಕ್ಷಕನಲ್ಲಿ ಒಂದು ಥರಹದ ಭಾಷೆಯಾಗಿ ಕೆಲಸ ಮಾಡುತ್ತದೆ. ನಾವು ನಿಜ ಜೀವನದಲ್ಲೂ ಕೂಡಾ ಮಾತಾಡುವಾಗ ಅನೇಕ ಮುದ್ರೆಗಳನ್ನು ಬಳಸುತ್ತೇವೆ. ಅದು ನಮ್ಮ ಭಾಷೆಯೊಡನೆ, ನಮ್ಮ ನಡುವಿನ ಜನರೊಡನೆ ಸಹಜವಾಗಿ ಬರುವಂಥದೇ ಮುದ್ರೆಗಳು. "ಆವತ್ತು" ಅನ್ನಬೇಕಾದರೆ ನಮಗೇ ಗೊತ್ತಾಗದಂತೆ ನಮ್ಮ ಕೈ ನಮ್ಮ ಕಿವಿಯ ನೇರಕ್ಕೆ ಬಂದು ಬೆರಳುಗಳು ಹಿಂದಕ್ಕೆ ಬಾಗುತ್ತದೆ. ಇದುವೇ ಶೈಲೀಕೃತಗೊಂಡಾಗ ಅದೇ ಚಲನೆಯನ್ನು ನಿಧಾನವಾಗಿ ಜೊತೆಗೆ ಕಣ್ಣು ಮನಸ್ಸು ಸೇರಿದಾಗ ಆ ಚಲನೆಗೆ ಬೇರೆ ಶಕ್ತಿಯೇ ಬರುತ್ತದೆ. ಇದಿಷ್ಟೇ ನಾವು ಮಾಡಬೇಕಾದ್ದು.

ಪ್ರತೀ ಮುದ್ರೆಯ ಉಪಯೋಗ ಮತ್ತ ಅವುಗಳ ಭಾವ, ಸ್ಥಾನ, ಚಲನೆ ಇವುಗಳನ್ನು ಮೈಗೂಡಿಸಿ ಕೊಳ್ಳಬೇಕು. ಅದಕ್ಕೆ ಪುನರಾವರ್ತನೆ ಬಹಳ ಮುಖ್ಯ. ಗುರುಗಳು ಪ್ರತೀ ಮುದ್ರೆಯನ್ನು ಮಾಡಿಸಿ ಮಾಡಿಸಿ ಅದು ನಮಗೆ ಆರಾಮವಾಗಿ ಕಾಣಿಸಲು ಸಾಧ್ಯವಾದಗ ಮಾತ್ರ ಬೇರೆ ಮುದ್ರೆಗಳನ್ನು ತೋರಿಸುತ್ತಿದ್ದರು. ಹಾಗೇ ಆ ಮುದ್ರೆಗಳನ್ನು ಅಭ್ಯಾಸ ಮಾಡಿ, ಮಾಡಿ ಅದು ನಮ್ಮ ಮೈಗೂಡಿದ್ದು ಅವರಿಗೆ ಮತ್ತು ನಮಗೇ ಸ್ಪಷ್ಟವಾದ ಮೇಲೆ ಬೇರೆ ಮುದ್ರೆಗಳನ್ನು ತೋರಿಸುತ್ತಿದರು.

ಮುದ್ರೆಗಳು ಸಂಯುತ, ಅಸಂಯುತ, ಮಿಶ್ರ, ದ್ಯೋತಕ ಎಂದು ನಾಲಕ್ಕು ವಿಧಾನವಾಗಿ ವಿಂಗಡಿಸಿದ್ದಾರೆ.
ಸಂಯುತ- ಸಂಯುತಮುದ್ರೆಗಳು ಎರಡೂ ಕೈಗಳಲ್ಲಿ ಬರುವಂಥವು.
ಅಸಂಯುತ- ಒಂದೇಹಸ್ತದಲ್ಲಿ ಬರುವ ಮುದ್ರೆಗಳು.
ಮಿಶ್ರ- ಇಲ್ಲಿ ಎರಡೂ ಹಸ್ತಗಳಲ್ಲಿ ಬೇರೆ ಬೇರೆ ಮುದ್ರೆಗಳು ಬರುತ್ತವೆ.
ದ್ಯೋತಕ- ಇದನ್ನು ಸೂಚಕಗಳೆಂದೂ ಕರೆಯುತ್ತಾರೆ. ಹೂವು, ಬೆಂಕಿ, ನದಿ ಮುಂತಾದವನ್ನು ತೋರಿಸಲು ಬಳಸುವಂತಹವು.


IMG_2533
 ಅಗ್ನಿಪ್ರವೇಶಾಂಕಮ್. ರಾಮ-ಮಾರ್ಗಿ ಸಜೀವ ನಾರಾಯಣ ಚಾಕ್ಯಾರ್, ಸೀತೆ- ಮಾರ್ಗಿ ಸತಿ.


ಪ್ರತಿಯೊಂದು ಮುದ್ರೆಯೂ ಬೆಳಕಿನ ನೇರದಿಂದ ಆರಂಭವಾಗಿ ಮುಗಿಯುವುದು ಕೂಡ ಬೆಳಕಿನ ನೇರಕ್ಕೇ. ಬೆಳಕು ಅಂದರೆ ಕೂಡಿಯಾಟ್ಟಮ್ ರಂಗಸ್ಥಳದ ಮದ್ಯದಲ್ಲಿ ಒಂದು ನಾಲಕ್ಕುಅಡಿ ಎತ್ತರದ ದೀಪದ ಕಂಬದ ಮೇಲೆ ಮೂರುಕಡೆ ಬತ್ತಿ ಇಟ್ಟು ದೀಪ ಹಚ್ಚುತ್ತಾರೆ. ಅದುವೇ ನಟನ ಪ್ರಧಾನ ಪ್ರೇಕ್ಷಕ. ಒಮ್ಮೆ ಅಮ್ಮನ್ನೂರು ಮಾಧವ ಚಾಕ್ಯಾರ್ ಅವರನ್ನು ಒಬ್ಬರು ಪ್ರಶ್ನೆ ಮಾಡಿದರಂತೆ- ನೀವು ಇಷ್ಟು ಕಡಿಮೆ ಪ್ರೇಕ್ಷಕರಿದ್ದರೂ ಕೂಡಾ ಅಷ್ಟೇ ಗಂಭೀರವಾಗಿ ಅಭಿನಯಿಸುತ್ತೀರಲ್ಲ ಅದು ಹೇಗೆ ಸಾಧ್ಯ, ಜನ ಕಡಿಮೆ ಇದ್ದಾಗ ನಿಮಗೆ ನಟಿಸಲು ಹುರುಪು ಕಡಿಮೆ ಆಗುವುದಿಲ್ಲವೇ? ಅಂತ. ಅದಕ್ಕೆ ಅಮ್ಮನ್ನೂರು ಹೇಳಿದರಂತೆ  ಮಾರಾಯ ನನ್ನ ಎದುರಿಗೆ ಇರುವ ಆ ಬೆಳಕಿಗೆ ನಾನು ಅಭಿನಯಿಸುವುದು. ಅದರಾಚೆಗಿನ ನೋಡುಗರು ಎಷ್ಟು ಇದ್ದಾರೆ ಅನ್ನೋದು ಮುಖ್ಯ ಆಗೋದಿಲ್ಲ. ನಾವು ನೋಡುಗರು ಎಷ್ಟು ಇದ್ದಾರೆ ಅನ್ನೋದರ ಚಿಂತೆ ಯಾಕೆ ಮಾಡಬೇಕು? ಅಂದು ನಕ್ಕರಂತೆ!

ಮುದ್ರೆಗಳು ಅದೊಂದು ದೇಹಸ್ಥಿತಿಯನ್ನು ಸೃಷ್ಟಿಮಾಡುತ್ತದೆ, ಅದರ ಮೂಲಕ ಬೇಕಾದ ಭಾವಕ್ಕೆ ಸುಲಭವಾದ ಉಸಿರಾಟ ಮತ್ತು, ಭಾವನೆ ಉತ್ಪತ್ತಿಗೆ ಸುಗಮದಾರಿಯನ್ನು ಉಂಟುಮಾಡುತ್ತದೆ. ಪ್ರತೀ ಮುದ್ರೆಯ ಚಲನೆಯು, ಅದರ ವೇಗ, ಅದರ ಸ್ಥಾನ ಆಯಾ ವಿಷಯಕ್ಕನುಗುಣವಾಗಿಯೇ ಇರುತ್ತದೆ. ಹಾಗಾಗಿ ಮುದ್ರೆಯ ಬಳಕೆಯ ವಿಧಾನ ಚೆನ್ನಾಗಿ ಕಲಿತರೆ ಅರ್ಧ ಕೆಲಸ ಮುಗಿದಂತೆಯೇ.

ಕೂಡಿಯಾಟ್ಟಮ್ನ ಅಭ್ಯಾಸ ಎಲ್ಲವೂ ಭಾವಗಳಿಗೇ ಪ್ರಾಧಾನ್ಯ. ಅದು ಕಣ್ನಿನ ಚಲನೆಗಳ ಅಭ್ಯಾಸ ಇರಬಹುದು, ಮುದ್ರೆಗಳು, ನಿಲುವು ಎಲ್ಲವೂ ರಂಗದಮೇಲೆ ಅಭಿನಯಕ್ಕೆ ಬೇಕಾದ ತಯಾರಿಯೇ ಆಗಿದೆ.ಕಥೆ ಯಾವುದಾದರೂ, ಪಾತ್ರ ಯಾವುದಾದರೂ ಆ ನಾಟಕಕ್ಕೆ ಬೇಕಾದ, ಯಾವ ಸನ್ನಿವೇಶಕ್ಕೂ, ಯಾವಾಗ ಬೇಕಾದರೂ ತಲುಪಬಲ್ಲ ಸಾತ್ವಿಕಾಭಿನಯದ ಹುಡುಕಾಟ ಇವರದು.

-ದಿಗ್ವಿಜಯ

No comments:

Post a Comment