Sunday, August 4, 2013

ನಾಟ್ಯದ ಹಾದಿ-ಎಂಟನೇ ಹೆಜ್ಜೆ.


ನಾವು ಸುಮಾರು ಎರಡು ವರ್ಷದ ತನಕ ಕೂಡಿಯಾಟ್ಟಮ್ ನ ಮೂಲ ಮುದ್ರೆಗಳನ್ನು ಮತ್ತು ಅದರ ನಿಲ್ಲುವ ರೀತಿ, ಕಣ್ಣಿನ ಚಲನೆ, ಮುಖದ ಬಳಕೆಯ ಬಗ್ಗೆ ಕಲಿತ ನಂತರ ಈಗ “ರಾಮಾಯಣ ಸಂಕ್ಷೇಪ” ಕಲಿಸಲು ತೊಡಗಿದರು.

ರಾಮಾಯಣ ಸಂಕ್ಷೇಪ ಅಂದರೆ ರಾಮಾಯಣದ ಕಥೆಯನ್ನು ಸಂಕ್ಷೇಪಿಸಿ ಅಂದರೆ ಚಿಕ್ಕದಾಗಿಸಿ ಹೇಳುವಂಥಾದ್ದು. ಕೂಡಿಯಾಟ್ಟಮ್ನಲ್ಲಿ ಪ್ರತೀ ಪಾತ್ರದ ಪ್ರವೇಷದಲ್ಲಿ ಸಂಕ್ಷೇಪಮ್ ಅನ್ನುವ ಕ್ರಮ ಇದೆ. ಅಂದರೆ ಆ ಪಾತ್ರವು ತನ್ನ ಪರಿಚಯ ಮಾಡಿಕೊಳ್ಳುವ ಕ್ರಮ ಅದು. ಆ ಪಾತ್ರವು ರಂಗಕ್ಕೆ ಬಂದ ಸಂದರ್ಭಕ್ಕಿಂತ ಮೊದಲು ಏನೇನಾಯಿತು ಅನ್ನುವುದನ್ನು ಅಭಿನಯಿಸಿ ತೋರಿಸುವ ಕ್ರಮ ಅದು.  ಈಗ ಪಂಚವಟಿಯ ರಾಮನ ಪ್ರವೇಷ ಅಂತಿಟ್ಟುಕೊಳ್ಳೋಣ. ಪಾತ್ರದ ಪ್ರವೇಷದ ನಂತರ  ಅಭಿವಾದ, ಸಭಾನಿರೀಕ್ಷಣಮ್ ಎಲ್ಲ ಆದ ಮೇಲೆ ಒಂದು ಶ್ಲೋಕ ಬರುತ್ತದೆ. ಈ ಸ್ಥಳ ನದೀತೀರದಲ್ಲಿದ್ದು, ಹೂವು ಹಣ್ಣುಗಳಿಂದ ಸಂಪದ್ಭರಿತವಾಗಿದೆ. ಮುನಿಗಳು ಕೂಡ ಈ ಸ್ಥಳವನ್ನು ಸೂಚಿಸಿರುವುದರಿಂದ ಅಲ್ಲೇ ಒಂದು ಪರ್ಣಶಾಲೆಯನ್ನು ರಚಿಸಲು ತಮ್ಮನಾದ ಲಕ್ಷ್ಮಣನಿಗೆ ಹೇಳಿದ್ದೇನೆ. ಈ ಶ್ಲೋಕದ ಅಭಿನಯವಾದನಂತರ ಅದಕ್ಕಿಂತ ಮೊದಲು ಪಂಚವಟೀ ತೀರಕ್ಕೆ ಬಂದುದು ಹೇಗೆ? ಅದಕ್ಕಿಂತಲೂ ಮೊದಲು ವನವಾಸಕ್ಕೆ ಹೊರಟಿದ್ದು ಹೇಗೆ? ಅದಕ್ಕಿಂತಲೂ ಮೊದಲು ಪಟ್ಟಭಿಷೇಕವಾದುದು ಹೇಗೆ? ಹೀಗೆ ಪ್ರಶ್ನೆಗಳನ್ನು ಹಾಕುತ್ತಾ ಹೋಗುತ್ತಾರೆ, ನಂತರ ಪ್ರತೀ ಪ್ರಶ್ನೆಗಳಿಗೂ ಉತ್ತರವನ್ನು ಅಭಿನಯಿಸುತ್ತಾರೆ. ಹೀಗೆ ಸಂಕ್ಷಪಮ್ ಎನ್ನುವುದು ಆಯಾ ಪಾತ್ರದ ಪ್ರಾಮುಖ್ಯತೆಗೆ, ಪ್ರದರ್ಶನದ ಸಮಯ, ಪ್ರದರ್ಶನದ ಚೌಕಟ್ಟಿಗೆ ಅನುಗುಣವಾಗಿ ಅದರ  ಸಮಯ ಮತ್ತು ವಿಸ್ತಾರ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಪಾತ್ರದ ಸ್ಥೋಭವನ್ನೂ ತೋರಿಸಬೇಕಾಗುತ್ತದೆ. ಅಂದರೆ ಹನುಮಂತ, ಜಾಂಬವಂತ, ಶೂರ್ಪನಖಿ, ಜಟಾಯು ಮುಂತಾದ ಪಾತ್ರಗಳಿಗೆ ಅವುಗಳ ಸ್ವಭಾವವನ್ನು ಸೂಚಿಸುವ ಪ್ರತ್ಯೇಕ ನಡೆ ಅಥವಾ ಚಾರಿಬೇದಗಳಿವೆ. ಅವುಗಳನ್ನು ಅಭಿನಯಿಸಿ ನಂತರ ಸಂಕ್ಷೇಪವನ್ನು ಅಭಿನಯಿಸಬೇಕಾಗುತ್ತದೆ.

ಮಾರ್ಗಿ ಸಜೀವ ನಾರಾಯಣ ಚಾಕ್ಯಾರ್ ಹನುಮಂತ, ಜಾಂಬವಂತನ ಸ್ತೋಬವನ್ನು ಅಭಿನಯಿಸುತ್ತಿರುವುದು.

ಕೂಡಿಯಾಟ್ಟಮ್ನಲ್ಲಿ ಇಡೀ ರಾಮಾಯಣವನ್ನು ಸಂಕ್ಷೇಪಿಸಿ ಕಲಿಸುವ ಕ್ರಮ ಇದೆ. ಅಂದರೆ ಮೊದಲೆಲ್ಲಾ ಮುದ್ರೆಗಳನ್ನು ಮೊದಲು ಹೇಳಿಕೊಡುವುದು ಅಂತ ಇರಲಿಲ್ಲವಂತೆ. ರಾಮಾಯಣವನ್ನು ಮುದ್ರೆಗಳ ಮೂಲಕ ಹೇಳಿ, ತೋರಿಸುವ ಕ್ರಮವೇ ಮುದ್ರೆಯ ಕಲಿಕೆಯಾಗಿತ್ತಂತೆ. ಇಡೀ ರಾಮಯಣ ಸಂಕ್ಷೇಪ ಕಲಿಯುವ ಹೊತ್ತಿಗೆ  ಕೂಡಿಯಾಟ್ಟಮ್ನ ಎಲ್ಲಾ ಅಂಶಗಳು ಅರಿತಂತೆಯೇ ಆಗಿತ್ತಂತೆ.

ನಮಗೆ ಇಪ್ಪತ್ತನಾಲಕ್ಕು ಮುದ್ರೆಗಳ ಪರಿಚಯ ಮತ್ತು ಅವುಗಳ ಬಳಕೆಯ ಕೆಲವು ಉದಾಹರಣೆಗಳನ್ನು ಹೇಳಿಕೊಟ್ಟಾದ ಮೇಲೆ  ಸಂಕ್ಷೇಪ ಶುರು ಮಾಡಿದರು. ಅಂದರೆ ನಮಗೆ ಮುದ್ರೆಗಳ ಬಳಕೆ ಹೇಗೆ, ಅವುಗಳು ಒಂದರ ನಂತರ ಒಂದು ಹೇಗೆ ಸೇರಿಕೊಳ್ಳುತ್ತಾ  ವಾಕ್ಯವನ್ನು ಸೂಚಿಸುತ್ತದೆ ಎಂಬುದು ನಮಗೆ ಗೊತ್ತಾಗಬೇಕು, ಮುದ್ರೆಗಳ ಸ್ಥಾನ, ಅವುಗಳಿಗೆ ಎಲ್ಲಿ ಪ್ರಾಧಾನ್ಯತೆ ಸಿಗಬೇಕು, ವಾಕ್ಯದ ಒಟ್ಟೂ ಅರ್ಥ ಹೇಗೆ ಹುಟ್ಟುತ್ತದೆ ಅನ್ನೋದರ ಕಲಿಕೆ ಇದು.


ಒಂದಾನೊಂದು ಕಾಲದಲ್ಲಿ ಸೂರ್ಯ ವಂಶ ಉಂಟಾಯಿತು.
ಅಲ್ಲಿ ಅನೇಕ ರಾಜರು ಉಂಟಾದರು.
ಅವರಿಗೆ ವಾಸಿಸಲಿಕ್ಕೋಸ್ಕರ ಉತ್ತರ ಕೋಶಲ ರಾಜ್ಯಗಳಲ್ಲಿ ಸರಯೂ ನದೀ ತೀರದಲ್ಲಿ  ಅಯೋಧ್ಯಾ ಎಂಬ ಪ್ರಸಿದ್ಧವಾದ ರಾಜಧಾನಿ ಉಂಟಾಯಿತು.
ಅಲ್ಲಿ ಒಬ್ಬೊಬ್ಬರೂ ರಾಜರೂ ಪುತ್ರ ಪೌತ್ರ ಪರಂಪರೆಯಾಗಿ ರಾಜ್ಯವನ್ನು ರಕ್ಷಿಸುತ್ತಾ ಬರುತ್ತಲಿರುವಾಗ ಅಜನೆಂಬ ರಾಜನ ಪುತ್ರನಾಗಿ ದಶರಥನೆಂಬ ಪ್ರಸಿದ್ಧನಾದ ರಾಜ ಜನಿಸಿದನು.
ಅವನು ರಾಜ್ಯಾಭಿಶಿಕ್ತನಾಗಿ ರಾಜ್ಯವನ್ನು ರಕ್ಷಿಸುತ್ತಾ ಸುಮಿತ್ರಾ, ಕೈಕೇಯಿ, ಕೌಸಲ್ಯಾ ಎಂಬ ಮೂರು ಕನ್ಯೆಯರೊಡನೆ  ವಿವಾಹಗೊಂಡು ಸುಖವಾಗಿದ್ದನು…

ಇದು ರಾಮಾಯಣ ಸಂಕ್ಷೇಪದ ಸಾಲುಗಳು. ಕಥೆ ಹೀಗೆ ಮುಂದುವರೆಯುತ್ತದೆ. ಕೂಡಿಯಾಟ್ಟಮ್ನಲ್ಲಿ ಮುದ್ರೆಗಳಲ್ಲಿ ಇಡೀ ವಾಕ್ಯವನ್ನು ಸೂಚಿಸುವುದು ಕ್ರಮ. ಅಂದರೆ ಕೇವಲ ಮುಖ್ಯ ಶಬ್ಧಗಳಿಗೆ ಮಾತ್ರ ಮುದ್ರೆಗಳಲ್ಲ, ಪ್ರತೀ ಶಬ್ಧಕ್ಕೂ ಮುದ್ರೆಗಳಿವೆ. ಅಂದರೆ ವಿಭಕ್ತಿ ಪ್ರತ್ಯಯಗಳಿಗೆ, ಕ್ರಿಯಾಪದಗಳಿಗೆ ಮುದ್ರೆಗಳು ಇವೆ. ಅವಗಳನ್ನು ಮುಖ್ಯ ಮುದ್ರೆಗಳೊಂದಿಗೆ ಜೋಡಿಸುವುದನ್ನು ಕಲಿಯುವುದು ಬಹಳ ಮುಖ್ಯ. ಪ್ರತೀ ವಾಕ್ಯದ ಮುಖ್ಯ ಶಬ್ಧಕ್ಕೆ ಪ್ರಾಧಾನ್ಯ ಕೊಡುವುದು, ಒಟ್ಟೂ ವಾಕ್ಯದ ಭಾವ, ವಿಷಯದ ಗಂಭೀರತೆ ಇವುಗಳ ಬಗ್ಗೆ ಕೊಡಬೇಕಾದ ಮಹತ್ವ ಇವೆಲ್ಲವೂ  ಈ ಘಟ್ಟದಲ್ಲಿ ನಮಗೆ ಕಲಿಸಲಾರಂಭಿಸಿದರು.

ಕೂಡಿಯಾಟ್ಟಮ್ನಲ್ಲಿ ಕೈ ಮತ್ತು ಕಣ್ಣಿನ ಚಲನೆಗಳ ನಡುವೆ ಬಹಳ ಸಂಬಂಧ ಇದೆ. ಕೈ ಹೋದಂತೆ ಕಣ್ಣು ಚಲಿಸಬೇಕು. ಇದಕ್ಕೇ ಕೂಡಿಯಾಟ್ಟಮ್ನ ಅಭ್ಯಾಸದಲ್ಲಿ ಮುದ್ರೆ ಕಲಿಸುವಾಗಲೇ, ಅವುಗಳ ಮುಖ್ಯ ಉಪಯೋಗಗಳನ್ನು ಕಲಿಸುವಾಗ ಕೈ ಮತ್ತು ಕಣ್ಣಿನ ಚಲನೆಗಳನ್ನು ಹೇಳಿಕೊಡುತ್ತಾರೆ. ಮುದ್ರೆ ಸೂಚಿಸುವ ವಿಷಯಕ್ಕನುಗುಣವಾಗಿ ಭಾವಕ್ಕನುಗುಣವಾಗಿ ಕಣ್ಣು ಮತ್ತು ಚಲನೆಯ ವೇಗ, ಮತ್ತು ಚಲನೆಯ ರೀತಿ ಸೃಷ್ಟಿಗೊಂಡಿದೆ. ಅವುಗಳನ್ನು ಮೊದಲು ಯಾಂತ್ರಿಕವಾಗಿಯೇ ಮತ್ತೆ ಮತ್ತೆ ಮಾಡಿಸುತ್ತಾರೆ. ಅದು ನಮ್ಮ ದೇಹಕ್ಕೆ ಮತ್ತು ಮನಿಸ್ಸಿಗೆ ಆರಾಮವಾಗಿ ಮಾಡಲು ಬರುವ ತನಕವೂ ಮಾಡಿಸುತ್ತಾರೆ. ಆದರೆ ಅದರ ನಿಜವಾದ ಪ್ರಯೋಜನ ನಮಗೆ ಅನುಭವಕ್ಕೆ ಬರುವುದು ಹೀಗೆ ವಾಕ್ಯ ಮಾಡಿ ತೋರಿಸುವ ಅಥವಾ ಅಭಿನಯಿಸುವ ಸಂಧರ್ಭ ಬಂದಾಗ ಮಾತ್ರ.



ಕಲಾಮಂಡಲಮ್ ಸಿವನ್ ನಂಬೂದರಿ ಮತ್ತು ಮಾರ್ಗಿ ಸಜೀವ ನಾರಯಣ ಚಾಕ್ಯಾರ್ ಪ್ರದರ್ಶನಕ್ಕೂ ಮೊದಲು ನಡೆಸಿದ ತಯಾರಿ ಚೊಲ್ಲಿಯಾಟಮ್.

ಪ್ರತಿಯೊಂದು ಮುದ್ರೆಯೂ ಬೆಳಕಿನ ನೇರದಿಂದ ಆರಂಭವಾಗಿ ಮುಗಿಯುವುದು ಕೂಡ ಬೆಳಕಿನ ನೇರಕ್ಕೇ. ಬೆಳಕು ಅಂದರೆ ಕೂಡಿಯಾಟ್ಟಮ್ ರಂಗಸ್ಥಳದ ಮದ್ಯದಲ್ಲಿ ಒಂದು ನಾಲಕ್ಕು ಎತ್ತರದ ದೀಪದ ಕಂಬದ ಮೇಲೆ ಮೂರುಕಡೆ ಬತ್ತಿ ಇಟ್ಟು ದೀಪ ಹಚ್ಚುತ್ತಾರೆ. ಅದುವೇ ನಟನ ಪ್ರಧಾನ ಪ್ರೇಕ್ಷಕ. ಒಮ್ಮೆ ಅಮ್ಮನ್ನೂರು ಮಾಧವ ಚಾಕ್ಯಾರ್ ಅವರನ್ನು ಒಬ್ಬರು ಪ್ರಶ್ನೆ ಮಾಡಿದರಂತೆ- ನೀವು ಇಷ್ಟು ಕಡಿಮೆ ಪ್ರೇಕ್ಷಕರಿದ್ದರೂ ಕೂಡಾ ಅಷ್ಟೇ ಗಂಭೀರವಾಗಿ ಅಭಿನಯಿಸುತ್ತೀರಲ್ಲ ಅದು ಹೇಗೆ ಸಾಧ್ಯ, ಜನ ಕಡಿಮೆ ಇದ್ದಾಗ ನಿಮಗೆ ನಟಿಸಲು ಹುರುಪು ಕಡಿಮೆ ಆಗುವುದಿಲ್ಲವೇ? ಅಂತ. ಅದಕ್ಕೆ ಅಮ್ಮನ್ನೂರು ಹೇಳಿದರಂತೆ  ಮಾರಾಯ ನನ್ನ ಎದುರಿಗೆ ಇರುವ ಆ ಬೆಳಕಿಗೆ ನಾನು ಅಭಿನಯಿಸುವುದು. ಅದರಾಚೆಗಿನ ನೋಡುಗರು ಎಷ್ಟು ಇದ್ದಾರೆ ಅನ್ನೋದು ಮುಖ್ಯ ಆಗೋದಿಲ್ಲ. ನಾವು ನೋಡುಗರು ಎಷ್ಟು ಇದ್ದಾರೆ ಅನ್ನೋದರ ಚಿಂತೆ ಯಾಕೆ ಮಾಡಬೇಕು? ಅಂದು ನಕ್ಕರಂತೆ!

ನಿಜವಾಗಿಯೂ ನಮ್ಮ ಎದುರಿಗೆ ಒಂದು ಬೆಳಕು ಇದ್ದರೆ ಅದರ ಆಚೆಗಿನ ಯಾವದೂ ನಮಗೆ ಕಾಣುವುದಿಲ್ಲ. ರಂಗದ ಮೇಲೆ ನಿಂತ ನಟನಿಗೆ ಪ್ರೇಕ್ಷಕ ಕಂಡರೆ ಪಾತ್ರದಲ್ಲಿ ಪೂರ್ಣವಾಗಿ ಪ್ರವೇಶಗೊಳ್ಳಲು ಸಾಧ್ಯವಾಗದಿರಬಹುದು. ಕೂಡಿಯಾಟ್ಟಮ್ನಲ್ಲಿ ಪ್ರತಿಯೊಂದು ಮುದ್ರೆಗೂ ಬೆಳಕಿನೊಂದಿಗೆ ನೇರ ಸಂಬಂಧಿದೆ. ಅಲ್ಲದೆ ಸ್ತೋಭ ಅಭಿನಯಿಸುವಾಗಲೆಲ್ಲಾ ಬೆಳಕನ್ನೇ ನೋಡಬೇಕು. ಅದು ರಂಗದ ಮೇಲಿದ್ದಾಗ ಒಂದು ತರಹ ಸಮದೃಷ್ಟಿಯಾಗಿ ನಟನಿಗೆ ಸಹಾಯ ಮಾಡುತ್ತದೆ.ಬೆಳಕು ಒಂದು ಥರ ಪ್ರೇಕ್ಷಕನೆ. ಪ್ರತಿಯೊಬ್ಬ ರಸಿಕನ ಕಣ್ಣನ್ನು ಅಥವ ಅವನನ್ನು ನೋಡುವ ಬದಲು ಬೆಳಕನ್ನು ನೋಡಿದರೆ ಅದು ಬೆಳಕಿನಾಚೆ ಇರುವ ಪ್ರತಿಯೊಬ್ಬನನ್ನೂ ನೋಡಿದಂತೆಯೇ. 

-ದಿಗ್ವಿಜಯ

No comments:

Post a Comment