Sunday, August 11, 2013

ಕೊನೆ ಕಾಣದ ಕಥೆಗಳು 2

 

ಕಷ್ಟ ಮನುಷ್ಯರಿಗೆ ಬರದೆ ಮರಕ್ಕೆ ಬರತ್ತಾ? ಎಲ್ಲವನ್ನೂ ಸಹಿಸ್ಕೊಂಡು ಬದುಕಲಿಕ್ಕೆ ಕಲಿತರೇನೆ ಅವನು ಮನುಷ್ಯ ಆಗೋದು. ಈಸ ಬೇಕು ಇದ್ದು ಜಯಿಸಬೇಕು ಅಂತಾರೆ ದಾಸರು. ಅವರು ಅನ್ನೋದು ಸುಮ್ನೇನಾ? ಅವರೂ  ಕಷ್ಟ ಅನುಭವಿಸಿದ್ದನ್ನೇ ಅಲ್ವ ಹಾಡೋದು? ಎಲ್ಲಾ ಪಡ್ಕೊಂಡು ಬಂದಿರ್‍ಬೇಕು... ಅವನ ಲೀಲೆ ಎನ್ನುತ್ತಾ ಅಜ್ಜಿ ತುಂಡುಬಟ್ಟೆಯಲ್ಲೇ ಬಾವಿಯಿಂದ ನೀರು ಮೊಗೆ ಮೊಗೆದು ಬಕೆಟಿಗೆಲ್ಲ ತುಂಬಿಸುತಿದ್ದರೆ ಮೊಮ್ಮೊಗಳು ಶಾಲೆಗೆ ಹೊರಡುವ ಶಿಕ್ಷೆಗೆಂದೇ ಬೇಗ ಎದ್ದವಳು ಬಾಯಲ್ಲಿ ಬ್ರಶ್ ಇಟ್ಟು ನಿನ್ನೆಯ ಕನಸ ಮೆಲ್ಲುತ್ತಿದ್ದಳು.


ಬೆಳಿಗ್ಗೆ ಕೋಳಿ ಕೂಗಿದ್ದೇ ನೆಪವಾಗಿ ಎದ್ದು ಜೋರಾಗಿ ಹಾಡತೊಡಗುವ ಈ ಎಪ್ಪತ್ತರ ಅಜ್ಜಿಯ ಮುಂದೆ ಯಾವ ಗಡಿಯಾರವೂ, ಅಲರಾಮವೂ ನಂಬಲಿಕ್ಕಿಲ್ಲ ಎನ್ನುವದನ್ನು ಪಕ್ಕಾ ಮಾಡಿಕೊಂಡಿದ್ದ ಮನೆಯವರೆಲ್ಲರೂ ನಿಧಾನವಾಗಿ ಏಳತೊಡಗಿದ್ದರು.


ಒಳಗಿಂದ ಕೂಗು ಕೇಳಿದ್ದೇ ತಡ ಬಡಬಡನೆ ಹಲ್ಲುಜ್ಜಿ ಮುಖ ತೊಳೆದು ಸೇದಿ ತುಂಬಿಸಿಟ್ಟ ನೀರನ್ನೆಲ್ಲ ಮೊಗಮೊಗೆದು ಮುಖಕ್ಕೆಸೆದುಕೊಂಡು ಧಡಧಡನೆ ಕನಸ ಕೊಡವಿ ಒಳಗೆ ಓಡಿದಳು.

ಈ ಅಜ್ಜಿಗೋ ಇದು ದಿವಸವೂ ನಡೆವ ಪರಿಪಾಠವಾದ್ದರಿಂದ ಸುಮ್ಮನೇ ಕೊಡದ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಗೆಸೆದಳು. ಒಂದು ದಿನ ಈ ವಿಷಯವಾಗಿ ಮೊಮ್ಮಗಳಲ್ಲಿ ಹೇಳಿದ್ದಕ್ಕೆ ಅವಳು ಮುಸುಡಿ ಊದಿಸಿಕೊಂಡು  “ನಿಮಗೇನಜ್ಜಿ ಬೇರೆ ಕೆಲಸ ಇಲ್ಲ. ಅದಕ್ಕೆ ನೀರು ಸೇದಿ ತುಂಬಿಸಿಡ್ತೀರಿ. ನನಗೂ ಬೇರೇನೂ ಕೆಲಸ ಇಲ್ಲದಿದ್ರೆ ತುಂಬಿಸಿಡ್ತಿದ್ದೆ. ಆದ್ರೆ ಶಾಲೆಗೆ ಹೋಗ್ಬೇಕೆಲ್ಲಾ? ನೀವು ಹೋಗ್ತೀರಾ?” ಅಂತ ಹೇಳಿದ್ದಳು. ಅದೇ ಕೊನೆಯ ಸಲ  ಮತ್ತೆ ಈ ವಿಷಯವಾಗಿ ಮಾತಾಡಿಲ್ಲ. ಅಜ್ಜಿಗೆ ಅದೂ ಒಂದು ಥರ ಖುಷಿ ಕೊಡುವ ಕೆಲಸವಾಗಿದೆ ಈಗ. ಬಾವಿಯೊಳಗಿಂದ ಬುಡುಬುಡು ಶಬ್ಧಕೇಳಿದ್ದೇ ಲಹರಿ ಹರಿದು ಮೊಮ್ಮಗಳ ಡ್ಯಾನ್ಸಿನ ಹಾಡು ನೆನಪಾಗಿ  “ತಾಗಿ ರಂಗನ ಕೈಯ್ಯು ಡುಬ್ಬಾ ಬಿತ್ತು ಬಿಂದಿಗೆಯು” ಎನ್ನುತ್ತಾ ಅವಳ ಲೋಕಕ್ಕೆ ಜಾರಿಕೊಂಡಳು.

ಅಜ್ಜಿಯ ಲೋಕವೇ ಬೇರೆ. ಹೂವಿನ ಗಿಡಗಳಿಗೆ ನೀರು ಹಾಕುತ್ತಾ ಅವುಗಳೊಡನೆ ಪ್ರೀತಿಯಿಂದ ಅವುಗಳ ಕುಶಲೋಪರಿಯನ್ನು ಆಡುವ ಪರಿಯನ್ನು ನೋಡಬೇಕು! ಮನೆ ಮಕ್ಕಳು, ಮೊಮ್ಮಕ್ಕಳು ಅಂದ್ರೆ ಆಸೆ ಇಲ್ಲ ಅಂತಲ್ಲ... ಆದರೆ ನಮ್ಮ ಅಜ್ಜಿ ಅದಕ್ಕೆ ಕೊಡೋ ಕಾರಣ ಬೇರೆ. “ಮಕ್ಕಳು ಅಂದ್ರೆ ನನಗೆ ತುಂಬಾ ಇಷ್ಟ, ಆದರೆ ಅವು ಬೇಗನೆ ಬೆಳೆದು ದೊಡ್ಡವರ ಥರ ಆಡೋದಕ್ಕೆ ಶುರು ಮಾಡಿಬಿಡ್ತವೆ. ನಾನು ಅವರನ್ನ ಮುದ್ದು ಮಾಡೋದು ಅವರಿಗೆ ಇಷ್ಟ ಆಗಲ್ಲ...” ಅಜ್ಜಿಯ ಮುಖ ತುಂಬಾ ಸುಕ್ಕು, ಕೈಯ್ಯಲೆಲ್ಲ ನೆರಿ ನೆರಿ, ನರಗಳೆಲ್ಲ ಪಚ್ಚೆ ಪಚ್ಚೆ... ಅಂತ ನೇರವಾಗಿ ಅನ್ನುವ ಈ ಚಿಳ್ಳೆ ಪಿಳ್ಳೆಗಳನ್ನು ಕಂಡಾಗಲೆಲ್ಲಾ ಇವರು ತನ್ನನ್ನು ಹಳಬಳು, ವಯಸ್ಸಾದವವಳು ಎಂದು ಎತ್ತಿ ತೋರಿಸುತ್ತಿದ್ದಾರೆ ಎಂದೆನಿಸಿ ಅವರನ್ನು ಮುದ್ದು ಮಾಡುವುದೂ, ಮಾತಾಡಿಸುವುದನ್ನೂ ಆದಷ್ಟು ತಪ್ಪಿಸಿಕೊಳ್ಳುತ್ತಾಳೆ.

ಮಕ್ಕಳು ಅಂದ್ರೆ ದೇವರೇ! ದೇವರಿಗೆ ಆಟ ಆಡಬೇಕು ಅಂತನ್ನಿದಾಗಲೆಲ್ಲ ಅವನು ಮಗುವಾಗಿ ಮನೆಗೆ ಬರ್‍ತಾನೆ, ಆಮೇಲೆ ಸಾಕೆನಿಸಿದಾಗ ನಮಗೆ ಗೊತ್ತಾಗದ ಹಾಗೇ ಮಾಯವಾಗ್ತಾನೆ. ಕಡೆಗೆ ಅವರು ದೊಡ್ಡವರಾಗ್ತಾ ಆಗೋದು ಮನುಷ್ಯ ಮರಿ ಅಷ್ಟೆ. ಅಂತಾರೆ ಈ ಅಜ್ಜಿ.

ಬೆಳಿಗ್ಗೆ ಶಾಲೆಗೆ ಹೋಗುವ ಹುಡುಗನನ್ನು ನೋಡಿದ್ದೇ ಅಜ್ಜಿ “ಏನು ಕೃಷ್ಣಪರಮಾತ್ಮ ಬೆಳಿಗ್ಗೆ ಬೆಳಿಗ್ಗೆ ಚಂದಮಾಡಿ ಹೊರಟಿದ್ದೆಲ್ಲಿಗೆ?” ಅಂತ ಕೇಳಿದರು. ಆ ಹುಡುಗನೋ ಈ ಅಜ್ಜಿಯ ಎದುರು ಸಿಕ್ಕಬಾರದೆಂದುಕೊಂಡು ತಪ್ಪಿಸಿಕೊಂಡು ಓಡಾಡುತ್ತಿದ್ದವ ಸಿಕ್ಕಿಬಿದ್ದ ಕಳ್ಳನಂತೆ ಅಜ್ಜಿ ನಾನು ಕೃಷ್ಣ ಅಲ್ಲ ರಾಮ ಅಂದ. ಅಷ್ಟು ಕೇಳಿದ್ದೇ ಅಜ್ಜಿ ಬೊಚ್ಚು ಬಾಯಿಬಿಡುತ್ತಾ ನಗುತ್ತಾ ಹೌದಪ್ಪಾ ನೀನು ರಾಮನೇ. ಕಲಿಯುಗದ ರಾಮ!. ನೋಡು ಕೃಷ್ಣ ಆದ್ರೆ ಬೇಕಾದಷ್ಟು ಹುಡುಗಿಯರು ಸಿಕ್ತಾರೆ ಆದ್ರೆ ರಾಮಂಗೆ ಒಬ್ಬಳೇ ಹುಡುಗಿ... ಎನ್ನುತ್ತಾ ಏಕಪತ್ನಿಯ ವೃತ ನಿನಗೆ ಎನ್ನುತ್ತಾ ಪಂಚವಟಿಯ ಪದ್ಯಕ್ಕೆ ಹಾರಿದರು. ದನವನ್ನು ಮೇಯಲು ಬಿಟ್ಟು ತಿರುಗಿ ಬರುತ್ತಿದ್ದ ಅಜ್ಜಿಯ ಗೆಳತಿ ಮಲ್ಲಿ ಏನೂ ರಾಮ, ಹುಡುಗಿ ಅಂತಿದ್ಯಲ್ಲ ಪಾಪ ಆ ಹುಡುಗನೆದುರು? ಅಂತ ಮಾತಿಗಿಳಿದಳು. ಇಲ್ಲ ಮಲ್ಲಿ ಅವನನ್ನ ನೋಡಿ ಕೃಷ್ಣನನ್ನೇ ನೋಢಿದ ಹಾಗಾಯ್ತು ಅಂದ್ರೆ ನಾನು ಕೃಷ್ಣ ಅಲ್ಲ ರಾಮ ಅಂದ. ಅದಕ್ಕೆ ನಾನು ನೋಡಪ್ಪ ಕೃಷ್ಣ ಆದ್ರೆ ಬೇಕಾದಷ್ಟು ಹುಡುಗಿಯರು ಸಿಕ್ತಾರೆ ಅಂದೆ. ಅದಕ್ಕೆ ಮಲ್ಲಿಯೂ ನಗುವ ರಾಗ ಸೇರಿಸಿದಳು.

ಹೇ ಇವತ್ತು ಯಮರಾಯ ಬಂದಿದ್ನಪ್ಪ! ನಾನು ಆಯ್ತು ಹೊರಡೋದೇ ಇವತ್ತು, ಮೊಮ್ಮಗಳ ಮದುವೆಗೆ ಇರೋದಿಲ್ಲ ಅಂತಂದ್ಕೊಂಡು ಜೋರಾಗಿ ‘ಯಮರಾಯ ಮೊಮ್ಮಗಳ ಮದುವೆಯೊಂದು ನೋಡಿದ್ರೆ ಆಮೇಲೆ ನಿನ್ನಹತ್ರ ಬರೋದೆ ಸೈ ನೋಡಪ್ಪಾ’ ಅಂತಂದೆ. ಅದಕ್ಕೆ  ಹೂ ಗುಟ್ಟಿ ಹೋಗೇ ಬಿಟ್ಟ!. ಅಂದಳು. ಅದಕ್ಕೆ ಅಜ್ಜಿ ಅಲ್ಲ ಬಿಡಿಸಿ ಹೇಳಬಾರದಾ ಅಂದ್ರೆ ಮಲ್ಲಿ, ಅದೇ ಮಂಜುಸೆಟ್ರ ಕೋಣವುಂಟಲ್ಲ ಅದು ನನ್ನ ನೋಡಿದ್ದೇ ತಲೆ ಅಡಿಗೆ ಹಾಕಿ ಕಣ್ಣು ಕೆಂಪೇರಿಸಿ, ಕೊಂಬನ್ನು ಬಗ್ಗಿಸಿ ನನ್ಹತ್ರ ಓಡಿ ಹೂಂಕಾರ ಹಾಕುತ್ತಾ ಬಂದ್ರೆ ನಾನೋ ಆಗಲೇ ಅದರ ಮುಂದೆ ಕೂತವಳೆ ಮನಸ್ಸಲ್ಲಲಿದ್ದದ್ನೆಲ್ಲ ಕಾರಿಬಿಟ್ಟೆ. ಕ್ಷಣ ಬಿಟ್ಟು ಆ ಕೋಣ ಹೂಂ ಗುಟ್ಟಿ ತಣ್ಣಗೆ ಮೇಯೋದಕ್ಕೆ ಶುರು ಹಚ್ಚಿತು ಮಾರಾಯ್ತಿ. ಅಂದಳು.

ಛೇ ಛೇ ಮಲ್ಲಿ ಎಂತಾ ಕೆಲಸ ಮಾಡಿಬಿಟ್ಟೆ! ನನ್ನ ಸುದ್ದಿ ಸ್ವಲ್ಪ ಹೇಳೋದಲ್ವ ಮಾರಾಯ್ತಿ? ಸಾಕಾಯ್ತು. ಈಗ ಬಂದುಬಿಡು ಅಂದರೆ ಹೊರಟೇ ಬಿಡೋಳು ನಾನು.

ಅದಕ್ಕೆ ಮಲ್ಲಿ ಏಯ್ ಎಂತ ಮಾತಾಡ್ತಿ ಬಿಡ್ತು ಅನ್ನು. ಸೊಸೆ, ಮೊಮ್ಮಕ್ಕಳು ಎಷ್ಟು ಚೆನ್ನಾಗಿದ್ದೀರಿ ಎಲ್ಲಾ. ಹೊರಡೋದಂತೆ! ಅಂದರೆ, ‘ಮಲ್ಲಿ ಅದಕ್ಕೇ ಹೇಳಳ್ತೀರೋದು ನಾನು, ಇದು ಸರಿಯಾದ ಸಮಯ. ಎಲ್ಲಾ ಚೆನ್ನಾಗಿರುವಾಗಲೇ ಹೊಗಬೇಕು. ಅನ್ನುವಷ್ಟರಲ್ಲಿ ಮಲ್ಲಿ ಕಣ್ಣನ್ನು ಕೆಂಪಾಗಿಸಿ, ಇನ್ನೇನು ದಳದಳ ಸುರಿಯಬೇಕು ಆಗ ನಮ್ಮ ಅಜ್ಜಿ ಅಂತಾಳೆ  ಮಲ್ಲಿ ಕ್ಷಣ ಹಾಗಂದೆ, ನನ್ನ್ಹತ್ರ ಅವ ಏನಾದ್ರೂ ಬಂದ ಅಂದ್ಕೋ ಆಗ ನಾನೇನಂತೇನೆ ಗೊತ್ತದೆಯೇನು? ನೋಡಪ್ಪಾ ನಾಡಿದ್ದು ನಮ್ಮ ಮಂದರ್ತಿ ಮೇಳದ ಆಟ ಒಂದಿದೆ ಅದೊಂದು ನೋಡಿ ಬರ್‍ತೇನೆ ಮಾರಾಯ!  ಆಸೆ ಇದೆಯಲ್ಲ ಅದಕ್ಕೆ ಕೊನೆಯೇ ಇಲ್ಲ, ಅದು ಮುಗಿಯೋದು ಅಂತನೇ ಇಲ್ಲ. ಮೊನ್ನೆ ಪುಟ್ಟಿ ಓದ್ತಿದ್ಳು ಬುದ್ಧನ ಕಥೆ! ಸಾವಿಲ್ಲದ ಮನೆಯಿಂದ ಸಾಸಿವೆ ತಾ ನಿನ್ನ ಮಗನನ್ನು ಬದುಕಿಸ್ತೇನೆ ಆಂತ ಕಳಿಸಿದನಂತೆ. ಪಾಫ ಆ ತಾಯಿ ಮಗುವಿನಾಸೆಗೆ ಮನೆ ಮನೆ ತಿರುಗಿ ಖಾಲಿ ಕೈಲಿ ಬಂದಾಗ ಹೇಳಿದನಂತೆ ಸಾವು ಎಲ್ಲರಿಗೂ ಒಂದೇ ಅಂತ! ಪಾಪ ಆ ತಾಯಿಯಿಯ ನೋವು ಅವನಿಗೆ ಅರ್ಥ ಆಗೇ ಇಲ್ಲ ಅನ್ನಿಸ್ತು. ಅವಳಿಗೇನು ಗೊತ್ತಿಲ್ಲದ್ದೇ ಸಾವು? ಮಗು ಕಳಕೊಂಡ ನೋವಿಗೆ ಅವಳಿಗೇನೂ ಕಾಣಿಸ್ತಿಲ್ಲ ಅಷ್ಟೆ. ನಾನೇನಾದ್ರು ಆಗಿದ್ದಿದ್ರೆ ಹೇಳಿಯೇ ಬಿಡ್ತಿದ್ದೆ ಗಂಡಸೇ ನಿನಗಿನ್ನೂ ನೋವಿನ ಅರ್ಥ ಆಗಿಲ್ಲ. ಕಳೆದುಕೊಳ್ಳೋದು ಅಂದ್ರೆ ಏನು ಅಂತ ಗೊತ್ತಿಲ್ಲ ನಿನಗೆ ಅಂತ.

….(ಮುಂದುವರೆಯುದು)

1 comment: