Tuesday, September 8, 2015

ಪಾತ್ರ

ಬಣ್ಣ ಹಚ್ಚುತ್ತಾ ಹೋದಂತೆ ಭೀಮ ಮೈಮೇಲೆ  ಏರಿ  ಮನೆಯ ಜOಬರವೆಲ್ಲಾ ಮರೆತಿದ್ದ ನಟ.

ಪಾ0ಚಾಲಿಗೆ ಸೌಗಂದಿ ಪುಷ್ಪ ತರುವ ಆಣೆ ಮಾಡಿ ಗದೆ ಹಿಡಿದು ಹೊರಟದ್ದೇ ...

ದಟ್ಟ ಅಡವಿಯ ಸೌ೦ದಯ೯ , ನಿಬಿಡ ವನಗಳ ದಾಟಿ, ಪುಷ್ಪದ ಸುವಾಸನೆಯ ಹಿಡಿದು ಹೋಗುವಾಗ ಕಂಡ ಮದಗಜನ ಗಾಂಭೀರ್ಯ, ಅವನ ಸೊಕ್ಕ ಮುರಿದ ಸಪ೯, ಇದನ್ನೆಲ್ಲ ಕಂಡ ಭೀಮನ ಮನ...

ರಂಗದಲ್ಲಿ ನಿಂತ ಭೀಮಸೇನನಿಗೆ ಕರತಾಡನದ ಶಬ್ದ ಕೇಳಿದ್ದೇ ಒಳಗಿನ ನಟ ಎಚ್ಚೆತ್ತು ಕೈ ಮುಗಿದು ಒಳ ಬರುವಾಗಲೇ ಗೊತ್ತು ಕಾಲು ಎತ್ತಿ ಇಡುವ ತ್ರಾಣವೂ ಇಲ್ಲ.

ಚಾಪೆಯ ಮೇಲೆ ಕುಳಿತವನ ತಲೆ ಮೇಲೆ ಗಿರಿಗಿಟ್ಟಿ ತಿರುಗುವ ಫ್ಯಾನು, ರಂಗದ ರಂಗಿಗೆ ಮರುಳಾದ ಹುಡುಗನೊಬ್ಬ ಆಸೆಗಣ್ಣಿಂದ ನೋಡುವ, ಇವನ ಕರೆಗೇ ಕಾದವನಂತೆ ಓಡಿ ಬರುವ, ಇವನ ಆಜ್ಞಾಧಾರಿ, ಹಾರಿ ಚಾ ತರುವ.

ಬಂಗಾರ ಬೇಗಡೆಯ ಕೈ ಕಡಗ ಬಿಚ್ಚುವ, ಪೆಟ್ಟಿಗೆ ಕಟ್ಟಿ ಮನೆ ಮುಟ್ಟುವ ಗಡಿಬಿಡಿ ಬಣ್ಣದವರಿಗೆ.  ತಲೆಯ ಮೇಲಿದ್ದ ನವಿಲ ನವಿರ ಚಕಮಕಿಸುವ ಕಿರೀಟ ಬಿಚ್ಚುತ್ತಿರುವಾಗಲೇ ಭೀಮಸೇನ ಮಾಯ.

ದೂರದಲ್ಲಿ ಮೆಚ್ಚುಗೆ ಸೂಚಿಸುವ ಕಣ್ಣುಗಳು,  ಹತ್ತಿರ ಬರಲು ಹೆದರಿ  ನಿಂತಿರುವ ಹೊಸ ಮುಖ...

ಹೊರಗೆ ಸುರಿವ ಧೋ ಮಳೆಗೆ, ಗಡಿಬಿಡಿಯಲಿ ನೆನೆವ ಲೈಟು ಬಿಚ್ಚಿ ಮುಚ್ಚಿಡುವ, ಕ೦ಬ ಕಿತ್ತು
ನಡೆದ ಆಟದ ಕುರುಹು ಅಳಿಸುವ ಬಿರುಸು.

ಬಣ್ಣ ಅಳಿಸಿ ಹೊರ ಬರುವಾಗ  ರಂಗದ ಮುಂದೆ ತಿಂದು ಬಿಸುಡಿದ ಪೇಪರ್, ಪ್ಲಾಸ್ಟಿಕ್ ನೆನೆದು ಬಯಲು ಬಣ್ಣ ಬಣ್ಣ..

ಮನೆ ತಲುಪುವಾಗ ನೆನಪಾದದ್ದು ಹಾಲು ಮರೆತಿದೆ!
ಒಳಗೆ ಬರುತ್ತಿದ್ದಂತೆ ಕೆಂಪು ಕಣ್ಣ ಕಂಡು ಹೆದರಿ ಇಣುಕುವ ಎಳೆ ಕಂಗಳು, ಅಡಿಗೆ ಮನೆಯಲ್ಲಿ ಗಡಬಡ ಸದ್ದು, ಮುಖ ತೊಳೆದು ಬರುವಷ್ಟರಲ್ಲಿ
ಟೀವೀಯಲ್ಲಿ ಮಗ್ನ ಮನೆ.




No comments:

Post a Comment