Saturday, September 12, 2015

ನನ್ನ ಸುತ್ತಾ





ಪಿ ಲಂಕೇಶರ  ನನ್ನ ಸುತ್ತಾ ..

ನನ್ನ ಸುತ್ತಾ
ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು
ಈ ವೀರರು ಈ ಪೀಡೆಗಳು ಈ ರಂಭೆ ಈ ರಂಗ ಈ ಶಿವ
ಕಣ್ಣೆದುರಿನ ಈ ನರಕಕ್ಕೆ ಈ ನಗರದ ಈ ಪುಲಕಕೆ.
ಈ ಹುಡುಗರ ತಂಡ, ಈ ಕನ್ಯೆಯ ಖಂಡ, ಭಾಷಣಗಳ ಭಂಡ
ಈ ಹೆಂಗಸರು ಹಾರಾಡುವ ಈ ಹೆಂಗಸರು ತೂರಾಡುವ ಈ ಹೆಂಗಸರು

ಉಸಿರಾಡುವ ಬಸಿರಾಗುವ ಬೆರಗಾಗುವ ಹೊರಗಾಗುವ
( ಈ ಗಂಡಸರು ಈ ಥರ ಸುಮ್ಮನೆ ಕೊರಗಾಡುವ)

ಇವರೆಲ್ಲರು  ಸ್ವಪ್ನದ ಸರ್ಪಕೆ ಚಪ್ಪಾಳೆಯ ಹೊಡೆವ
ಈ ಹಬ್ಬದ ಸಂಭ್ರಮ, ಈ ಕೃಷ್ಣನ ಕಾಟ,
ಈ ಮಂತ್ರದ ಪಾಠ...

ಈ ದೆವ್ವದ ಈ ದೇವರ ಈ ಶಾಸ್ತ್ರದ ಗೊಡ್ಡು,
ಕಾವೇರಿಯ ಬಿಳಿಕೈಯಿನ ನವಿರೇಳುವ ಮದ್ದು,
ದಿನ ನಿತ್ಯಾ ನೀ ನೋಡುವ ಅರೆ ಹೊಟ್ಟೆಯ ಸಡ್ಡು
(ಈ ಥರ ಹಾರಾಡುವ ಪದ್ಯಾತುರ ಹದ್ದು)

ಈ ಕ್ರಾಪಿನ ಗಂಧದ ಈ ಕುಂಡೆಯ ಚಂದದ
ಈ ಭ್ರಷ್ಟನ ಬೊಗಳೆಯ, ಈ ನಿಸ್ಪೃಹ ರಗಳೆಯ
ಈ ಉದ್ದನ ಈ ಕುಬ್ಜನ ಈ ಚೆಲುವನ ಈ ಗೂನನ
ಈ ಅಂಗಿಗಳ ಮಫ್ಲರುಗಳ ಈ ಬೈತಲೆಗಳ ಜಡೆಗಳ
ಬಿಸಿ ತಟ್ಟದ  ಈ ತೊಡೆಗಳ
ಈ ನಿಗುರಿನ ಈ ಚಿಗುರಿನ ಈ ಕನಸಿನ ಕಂಬನಿಯ

ಈ ಭಾಷೆ ಈ ಭಾವನೆ ಈ ಕಾಮನೆ ಈ ಬೋಳೆ
ನರಭಕ್ಷಕ ಈ ಜಾಗದಿ ಬೇಯಿಸುವನು ಬೇಳೆ
ಈ ಹಿಹೀ ಹುಡುಗಿಯ ಹಹ್ಹಾ ನಡುವಿನ ಹೊಹೋ ಗಳ ಪಟ್ಟಿ
ನೋಡುತ್ತಾ ಹೋದರೆ ಕೊನೆಗೆಲ್ಲದು ಖೊಟ್ಟಿ

ಈ ಪಾಂಡಿತ್ಯದ ಹಿಗ್ಗು, ಉತ್ಸಾಹದ ರಗ್ಗು
ನಿಷ್ಕಾರಣ ಹಿಗ್ಗು!
ಈ ಪೋಲಿಯ ಶಿಳ್ಳೆ, ಈ ಬೆಕ್ಕಿನ ಪಿಳ್ಳೆ
ಈ ನೀರಿನ ಗುಳ್ಳೆ_

ಈ ಕುಪ್ಪಸ, ಬುರ್ಕಾಗಳ ಗಬ್ಬು
ಈ ಕಾರಿನ ಬಸ್ಸಿನ ರೈಲಿನ ದಬ್ಬು
ಈ ಈಶ ಈ ರಂಗ ಈ ಜನ ಈ ಜುಟ್ಟಿನ ಸುಬ್ಬು_
ಬೇಜಾರಿನ ಸುತ್ತು
ಯಾಂತ್ರಿಕ ಗತ್ತು_

ಈ ಮನೆಗಳು ಈ ಜನಗಳು ಈ ನರಕ ಈ  ಪುಲಕ...

No comments:

Post a Comment