Saturday, November 28, 2015

ನನ್ನ ಮನೆ

ಎಲ್ಲರೂ ಹೇಳುತ್ತಿದ್ದಾರೆ
ನೀ ಅಲ್ಲಿಗೆ ಹೋಗ ಕೂಡದೆಂದು,
ಏನೂ ಉಳಿದಿಲ್ಲ  ಅಲ್ಲಿ ಎಂದು.

ಆದರೆ ಒಂದು ಬಾರಿ ಕೊನೆಯ ಬಾರಿ
ಹೋಗಿ ಬರುತ್ತೇನೆ ಬಿಡು?
ನಿನಗೆ ನಾನು ಯಾರೂ ಎಂಬುದೂ ಗೊತ್ತಿಲ್ಲ
ಆದರೂ ತಡೆಯುತ್ತಿದ್ದಿ!

ಅದೊ ಓ ಅಲ್ಲಿ ಕಾಣುತ್ತಿದೆಯಲ್ಲ?
ಅದೇ ನನ್ನ ಮನೆ !
ಆ ರಂಜದ ಮರ ಇದೆಯಲ್ಲ
ಅದರಡಿ ದಿನವಿಡೀ ಆಡುತ್ತಿದ್ದೆ

ನೋಡಿಲ್ಲಿ ನನ್ನ ಕೈಯಲ್ಲೇ ಸತ್ತ
ಚಿಟ್ಟೆಯ ಮಣ್ಣ ಮಾಡಿ ನಟ್ಟ ಗುಲಾಬಿ!
ಬಣ್ಣ ಬಣ್ಣದ ಹೂ ಅಮ್ಮನ ಲೋಕ!
ಅಂಗಳಕೆ ಅಮ್ಮನದೇ ಕಯ್ಯ ನಯದ ಕರಿ ಲೇಪ!

ಒಮ್ಮೆ ಈ ಮನೆಯ ನೋಡಿ
ಬದುಕ ಆಸೆಗೆ ಮತ್ತಷ್ಟು ಶಕ್ತಿ ಸಿಕ್ಕೀತು
ಆದ ಗಾಯ ಗುಣವಾದೀತು ಎಂದುಕೊಂಡೆ
ನನ್ನನ್ನ ಕಂಡುಕೊ0ಡೇನು ಎಂದುಕೊಂಡೆ
ಈಗ ಇಲ್ಲಿ ನಾನೇ ನನಗೆ ಅಪರಿಚಿತ

ನೋಡಿಲ್ಲಿ ಗೋಡೆಯ ಮೇಲೆ ಇವು
ನನ್ನದೇ ಕೈ, ಮೆಟ್ಟಿಲ ಮೇಲಿನ ಹೆಜ್ಜೆ!
ಅಮ್ಮನ ಕನಸ ಅಪ್ಪ ಕಟ್ಟಿಕೊಟ್ಟಿದ್ದು!
ನನ್ನ ಬೆಳೆಸಿದ ಮನೆ!

ಬೆಳೆದಂತೆ ಮನೆಯ ತೊರೆದೆ
ಹೊಸ ಜಗದ, ಜನದ ನಡುವೆ
ನಾ ನಿಲ್ಲ ಬಯಸಿದೆ, ಸೋತೆ,
ಸಾವಿರದೊಳಗೆ ನನ್ನನ್ನೇ ಕಳಕೊಂಡಿದ್ದೇನೆ

ಒಮ್ಮೆ ನನ್ನ ಕಟ್ಟಿದ ಮನೆಯ ಮುಟ್ಟಿ
ನನ್ನ ಕಂಡುಕೊಳ್ಳುವ ಆಸೆ ಅಷ್ಟೇ!
ಒಂದು ಬಾರಿ ಕೊನೆಯ ಬಾರಿ
ಹೋಗಿ ಬರುತ್ತೇನೆ ಬಿಡು?

No comments:

Post a Comment